India vs Pakistan: ರಾಜಕೀಯ ಮಾಡಬೇಡಿ; ಪಾಕ್ ನಡೆಗೆ ಜಯ್ ಶಾ ಆಕ್ರೋಶ
ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರದರ್ಶಿಸುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿರ್ಧಾರಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಾದೇಶಿಕ ಸಮಗ್ರತೆ ಮತ್ತು ಕ್ರೀಡೆಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದಿರುವ ಅವರು, ಈ ವಿಚಾರವನ್ನು ಐಸಿಸಿ ಗಮನಕ್ಕೆ ತಂದಿದ್ದಾರೆ. ಬಳಿಕ ಎಚ್ಚೆತ್ತ ಐಸಿಸಿ ಪಾಕ್ ಆಕ್ರಮಿತ ಪ್ರದೇಶದಲ್ಲಿರುವ ಮುರ್ರೆ, ಮುಜಾಫರಬಾದ್ ಮತ್ತಿತದ ಸ್ಥಳಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರವಾಸವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ಎಎನ್ಐ ವರದಿ ಮಾಡಿರುವ ಪ್ರಕಾರ, " ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರವಾಸ ನಡೆಸುವ ಪಿಸಿಬಿ ನಡೆಗೆ ಬಿಸಿಸಿಐ ಕಾರ್ಯದರ್ಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ರಾಜಕೀಯ ಪ್ರೇರಿತ ಎಂದು ಖಂಡಿಸಿದ್ದು, ಈ ಕ್ರಮಕ್ಕೆ ಭಾರತದ ಒಪ್ಪಿಗೆಯಲಿಲ್ಲ ಎಂದು ಹೇಳಿದ್ದಾರೆ. ಪಿಸಿಬಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಯ್ ಶಾ ಆಗ್ರಹಿಸಿದ್ದಾರೆ ಎಂದು ಹೇಳಿದೆ.

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡಲು ಭಾರತವು ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಬಿಸಿಸಿಐ ಐಸಿಸಿಗೆ ತಿಳಿಸಿದ್ದು ಇದೇ ವಿಚಾರವಾಗಿ ಐಸಿಸಿ ಪಾಕ್ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆ ಮಾಡಬೇಕು ಎಂದು ಬಿಸಿಸಿಐ ಹೇಳಿದೆ. ಆದರೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಲು ಆಗುವುದಿಲ್ಲ ಭಾರತ ಪಾಕಿಸ್ತಾನಕ್ಕೆ ಬರಬೇಕು ಎಂದು ಪಿಸಿಬಿ ಹಠ ಹಿಡಿದಿದೆ. 2008ರಲ್ಲಿ ಭಾರತ ಕೊನೆಯದಾಗಿ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಆಡಲು ಪಾಕಿಸ್ತಾನಕ್ಕೆ ತೆರಳಿತ್ತು.
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆಡಲು ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸಿತ್ತು, ಭಾರತ ತಂಡ ಕೂಡ ಪಾಕಿಸ್ತಾನಕ್ಕೆ ಬರುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರೀಕ್ಷೆ ಮಾಡಿತ್ತು, ಆದರೆ ಬಿಸಿಸಿಐ ಈಗ ಪಿಸಿಬಿಗೆ ಶಾಕ್ ಕೊಟ್ಟಿದೆ. ಐಸಿಸಿ ಈಗ ಯಾವ ತೀರ್ಮಾನ ಮಾಡುತ್ತದೆ ಎನ್ನುವುದನ್ನು ಈಗ ಕಾದು ನೋಡಬೇಕಾಗಿದೆ.
ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ನಡೆಸಲು ದಿನಾಂಕ ನಿಗದಿ ಮಾಡಿದೆ. ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿ ಮೂರು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. 2017ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ನಡೆದಿತ್ತು, ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತವನ್ನು ಮಣಿಸಿದ್ದ ಪಾಕಿಸ್ತಾನ ಪ್ರಶಸ್ತಿ ಗೆದ್ದುಕೊಂಡಿತ್ತು.
ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸದೇ ಇದ್ದರೆ ಪಂದ್ಯಾವಳಿಯಿಂದಲೇ ಹಿಂದೆ ಸರಿಯಲು ಪಾಕಿಸ್ತಾನ ನಿರ್ಧರಿಸಿದೆ ಎನ್ನಲಾಗಿದೆ. ಒಂದು ವೇಳೆ ಪಾಕಿಸ್ತಾನ ಹಿಂದೆ ಸರಿದರೆ ದಕ್ಷಿಣ ಆಫ್ರಿಕಾದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ನಡೆಯುವ ಸಾಧ್ಯತೆ ಇದೆ.












Click it and Unblock the Notifications