Ranji Trophy: ರೋಹಿತ್ ಶರ್ಮಾ ವೈಫಲ್ಯ; 10 ವರ್ಷಗಳ ಬಳಿಕ ಜಮ್ಮು & ಕಾಶ್ಮೀರದ ವಿರುದ್ಧ ಸೋತ ಮುಂಬೈ
ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡಿ ಫಾರ್ಮ್‌ಗೆ ಮರಳುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾರ ಕನಸು ಭಗ್ನವಾಗಿದೆ. ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಆತಿಥೇಯ ಮುಂಬೈ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ರಣಜಿಯಲ್ಲಿ ಬಲಿಷ್ಠ ತಂಡ ಎನಿಸಿಕೊಂಡಿರುವ ಮುಂಬೈಗೆ ಈ ಸೋಲು ಆಘಾತ ತಂದಿದೆ.
10 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರ ರಣಜಿ ಟ್ರೋಫಿಯಲ್ಲಿ ಮುಂಬೈ ವಿರುದ್ಧ ಗೆಲುವು ಸಾಧಿಸಿದೆ. ಒಟ್ಟಾರೆ ಇದು ಎರಡನೇ ಗೆಲುವಾಗಿದ್ದು ಜಮ್ಮ ಮತ್ತು ಕಾಶ್ಮೀರ ಆಟಗಾರರ ಬಲಿಷ್ಠ ತಂಡವನ್ನೇ ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

42 ಬಾರಿ ರಣಜಿ ಟ್ರೋಫಿ ಗೆದ್ದು ಇತಿಹಾಸ ಬರೆದಿರುವ ಮುಂಬೈ ತಂಡದಲ್ಲಿ ಈ ಬಾರಿ ಕೂಡ ಸ್ಟಾರ್ ಆಟಗಾರರೇ ಇದ್ದರು. ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್, ಯಶಸ್ವಿ ಜೈಸ್ವಾಲ್, ಶಿವಂ ದುಬೆಯಂತಹ ಬಲಿಷ್ಠ ಆಟಗಾರರು ಇದ್ದರೂ, ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಸೋಲನುಭವಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 120 ರನ್‌ಗಳಿಗೆ ಆಲೌಟ್ ಆಗಿತ್ತು. ರೋಹಿತ್ ಶರ್ಮಾ ಕೇವಲ 3 ರನ್ ಗಳಿಸಿ ಔಟಾಗಿದ್ದರು. ಉಮರ್ ನಜೈರ್ ಮತ್ತು ಯದುವೀರ್ ಸಿಂಗ್ ತಲಾ 4 ವಿಕೆಟ್ ಪಡೆದಿದ್ದರು.
ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ 206 ರನ್ ಗಳಿಸುವ ಮೂಲಕ 86 ರನ್‌ಗಳ ಮುನ್ನಡೆ ಸಾಧಿಸಿತ್ತು. ಮೋಹಿತ್ ಅವಸ್ಥಿ 5 ವಿಕೆಟ್ ಪಡೆಯುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಬ್ಯಾಟಿಂಗ್ ಪಡೆಗೆ ಕಡಿವಾಣ ಹಾಕಿದ್ದರು.
ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ 101 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಶಾರ್ದೂಲ್ ಠಾಕೂರ್ ಮತ್ತು ತನುಷ್ ಕೊಟ್ಯಾನ್ ತಂಡಕ್ಕೆ ಆಸರೆಯಾದರು. ಶಾರ್ದೂಲ್ ಠಾಕೂರ್ 135 ಎಸೆತಗಳಲ್ಲಿ 119 ರನ್ ಗಳಿಸುವ ಮೂಲಕ ಮುಂಬೈ ತಂಡ ಇನ್ನಿಂಗ್ಸ್ ಮುನ್ನಡೆ ಪಡೆಯುಂತೆ ಮಾಡಿದರು, ತನುಷ್ ಕೊಟ್ಯಾನ್ ಕೂಡ 62 ರನ್ ಸಿಡಿಸಿ ಶಾರ್ದೂಲ್‌ಗೆ ಬೆಂಬಲವಾಗಿ ನಿಂತಿದ್ದರು. ಅಂತಿಮವಾಗಿ ಮುಂಬೈ 290 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಗೆಲುವಿಗೆ 205 ರನ್‌ಗಳ ಗುರಿ ನೀಡಿತ್ತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಮ್ಮು ಮತ್ತು ಕಾಶ್ಮೀರ 49 ಓವರ್ ಗಳಲ್ಲೇ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸುವ ಮೂಲಕ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. 2014-15ರ ಋತುವಿನಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧ ಮೊದಲ ಗೆಲುವು ಸಾಧಿಸಿದ್ದ ಜಮ್ಮು ಮತ್ತು ಕಾಶ್ಮೀರ, ಹತ್ತು ವರ್ಷಗಳ ಬಳಿಕ ಮತ್ತೊಂದು ಭರ್ಜರಿ ಗೆಲುವು ಸಾಧಿಸಿತು. ಮುಂಬೈ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಜಮ್ಮು ಮತ್ತು ಕಾಶ್ಮೀರ 29 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.












Click it and Unblock the Notifications