Mohammad Rizwan: ಗಾಜಾಗೆ ಬೆಂಬಲ ಕೊಟ್ಟ ಮೊಹಮ್ಮದ್ ರಿಜ್ವಾನ್‌ಗೆ ಇಸ್ರೇಲ್ ಪ್ರತ್ಯುತ್ತರ
ಇಸ್ರೇಲ್ - ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷ ತಾರಕಕ್ಕೇರಿದೆ. 11ನೇ ದಿನ ಕೂಡ ಯುದ್ಧ ಮುಂದುವರೆದಿದೆ. ಜಗತ್ತಿನಲ್ಲಿ ಹಲವು ದೇಶಗಳು ಪ್ಯಾಲೆಸ್ಟಿನ್ ಪರವಾಗಿ ನಿಂತರೆ, ಇನ್ನೂ ಹಲವು ದೇಶಗಳು ಇಸ್ರೇಲ್‌ಗೆ ಬೆಂಬಲ ಸೂಚಿಸಿವೆ. ತಮ್ಮ ಪರ ನಿಲ್ಲುವ ಯಾವುದೇ ದೇಶ, ವ್ಯಕ್ತಿಗಳನ್ನು ಇಸ್ರೇಲ್ ಗೌರವದಿಂದ ಕಾಣುವ ಜೊತೆ, ವಿರೋಧಿಗಳಿಗೆ ತಕ್ಕ ಪ್ರತ್ಯುತ್ತರ ಕೂಡ ನೀಡುತ್ತದೆ.
ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೂಡ ಇಸ್ರೇಲ್ - ಹಮಾಸ್ ಸಂಘರ್ಷ ಮುನ್ನಲೆಗೆ ಬಂದಿದೆ. ಹೈದರಾಬಾದ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಮೊಹಮ್ಮದ್ ರಿಜ್ವಾನ್, ಪಾಕಿಸ್ತಾನ ಗೆಲುವಿಗೆ ಕಾರಣವಾದರು. ಪಂದ್ಯದ ನಂತರ ಅವರು ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಯಿತು.

ಪಂದ್ಯದ ನಂತರ ಟ್ವೀಟ್ ಮಾಡಿದ್ದ ರಿಜ್ವಾನ್, ಈ ಶತಕ ಮತ್ತು ಪಾಕಿಸ್ತಾನ ತಂಡದ ಗೆಲುವನ್ನು ಗಾಜಾದ ತನ್ನ ಸಹೋದರ ಮತ್ತು ಸಹೋದರಿಯರಿಗೆ ಅರ್ಪಿಸುವುದಾಗಿ ಹೇಳಿದ್ದರು. ಆದರೆ ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡ ಬಳಿಕ, ಈ ವಿಚಾರ ಮುನ್ನಲೆಗೆ ಬಂದಿದೆ. ಮೊಹಮ್ಮದ್ ರಿಜ್ವಾನ್ ಟ್ವೀಟ್ ಬಗ್ಗೆ ನೇರವಾಗಿ ಉಲ್ಲೇಖ ಮಾಡದಿದ್ದರೂ, ಇಸ್ರೇಲ್ ಪರೋಕ್ಷವಾಗಿ ಪಾಕಿಸ್ತಾನ ತಂಡವನ್ನು ಟೀಕಿಸಿದೆ.
ಭಾರತಕ್ಕೆ ಧನ್ಯವಾದ ಎಂದ ಇಸ್ರೇಲ್
ಅಹಮದಾಬಾದ್ ಕ್ರೀಡಾಂಗಣದಲ್ಲಿ ಭಾರತ ತಂಡದ ಅಭಿಮಾನಿಗಳು ಇಸ್ರೇಲ್‌ಗೆ ಬೆಂಬಲ ಸೂಚಿಸುವ ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸಿದರು. ಈ ಫೋಟೊಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡ ಇಸ್ರೇಲ್ ಅಧಿಕೃತ ಟ್ವಿಟರ್ ಹ್ಯಾಂಡಲ್ ಭಾರತಕ್ಕೆ ಧನ್ಯವಾದ ತಿಳಿಸಿದೆ.
"ಇಸ್ರೇಲ್‌ಗೆ ಬೆಂಬಲ ಸೂಚಿಸುತ್ತಿರುವ ಭಾರತೀಯ ಸ್ನೇಹಿತರನ್ನು ನೋಡಿ ನಾವು ನಿಜಕ್ಕೂ ಭಾವುಕರಾಗಿದ್ದೇವೆ. ಏಕದಿನ ವಿಶ್ವಕಪ್ 2023ರ ಭಾರತ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ವಿಜಯಶಾಲಿಯಾಗಿದೆ. ಈ ಮೂಲಕ ಪಾಕಿಸ್ತಾನ ತನ್ನ ವಿಜಯವನ್ನು ಹಮಾಸ್ ಭಯೋತ್ಪಾದಕರಿಗೆ ಅರ್ಪಿಸುವುದನ್ನು ತಪ್ಪಿಸಿದ್ದಾರೆ" ಎಂದು ಹೇಳಿದೆ.
We were really moved by Indian friends showing their solidarity with Israel 🇮🇱
— Israel ישראל 🇮🇱 (@Israel) October 15, 2023
We are happy that India🇮🇳emerged victorious in the #INDvsPAK match at #CWC23 and that Pakistan was unable to attribute its victory to the terrorists of #Hamas. https://t.co/tvgYATe0Af
ರಿಜ್ವಾನ್ ವಿರುದ್ಧ ದೂರು ದಾಖಲು
2023 ರ ವಿಶ್ವಕಪ್‌ನಲ್ಲಿ ಮೊಹಮ್ಮದ್ ರಿಜ್ವಾನ್ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಹೈದರಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ನಂತರ ಮೈದಾನದಲ್ಲಿ ನಮಾಜ್ ಮಾಡಿದ್ದರು. ಅವರ ವರ್ತನೆ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಅಹಮದಾಬಾದ್‌ನಲ್ಲಿ ಭಾರತ ತಂಡದ ಅಭಿಮಾನಿಗಳು ಜೈಶ್ರೀರಾಮ್ ಘೋಷಣೆ ಕೂಗುವ ಮೂಲಕ ರಿಜ್ವಾನ್ ಅವರನ್ನು ಕೆಣಕಲು ಪ್ರಯತ್ನಿಸಿದ್ದರು.
ಅಹಮದಾಬಾದ್‌ನಲ್ಲಿ ಶನಿವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಸುಲಭ ಗೆಲುವು ಸಾಧಿಸಿತ್ತು. ಪಾಕಿಸ್ತಾನವನ್ನು ಕೇವಲ 191 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಕೇವಲ 35 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತು. ನಾಯಕ ರೋಹಿತ್ ಶರ್ಮಾ 86 ರನ್ ಗಳಿಸಿ ಭಾರತ ತಂಡದ ಗೆಲುವಿಗೆ ಕಾರಣವಾದರು.












Click it and Unblock the Notifications