ಕೊಹ್ಲಿ ಭಾಯ್‌ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್‌ಆರ್‌ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ
RCB Vs SRH: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮಾರ್ಚ್ 28) ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಹೀನಾಯ ಸೋಲು ಕಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ಆರ್‌ಸಿಬಿ ತಂಡಕ್ಕೆ ಸುಲಭವಾಗಿ ಗೆಲುವು ತಂದುಕೊಟ್ಟಿತು. ಇದರ ಬೆನ್ನಲ್ಲೇ ಎಸ್‌ಆರ್‌ಎಚ್ ನಾಯಕ ಇಶಾನ್ ಕಿಶನ್ ತಂಡದ ಸಹ ಆಟಗಾರರಿಗೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.
ಟಾಸ್ ಸೋತು ಮೊದಲು ಮೊದಲು ಬ್ಯಾಟಿಂಗ್‌ಗಿಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಪವರ್‌ಪ್ಲೇನಲ್ಲೇ ಕೇವಲ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರ್‌ಸಿಬಿ ಪರ ವೇಗಿ ಜೇಕಬ್ ಡಫಿ ಮಾರಕ ಬೌಲಿಂಗ್ ದಾಳಿ ಮಾಡಿ ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಅವರು ಪವರ್‌ಪ್ಲೇನಲ್ಲೇ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ನಿತೀಶ್ ಕುಮಾರ್ ರೆಡ್ಡಿಯಂತಹ ಪ್ರಮುಖ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ಭರ್ಜರಿ ಇನ್ನಿಂಗ್ಸ್ ಆಡಿದ ಇಶಾನ್ ಕಿಶನ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಇಶಾನ್ ಕಿಶನ್, ತಂಡಕ್ಕೆ ಆರಂಭಿಕ ಆಘಾತವಾದರೂ ಜವಾಬ್ದಾರಿಯುತ ಆಟವಾಡಿದರು. ಅವರು ಕೇವಲ 38 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 80 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಬಳಿಕ ಫಿಲ್ ಸಾಲ್ಟ್ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್‌ನತ್ತ ತೆರಳಿದರು.
ನಂತರ ಬಂದ ಅನಿಕೇತ್ ವರ್ಮಾ ಕೇವಲ 18 ಎಸೆತಗಳಲ್ಲಿ 43 ರನ್‌ಗಳ ಕಲೆಹಾಕಿ ತಂಡದ ಮೊತ್ತವನ್ನು ಏರಿಸಿದರು. ಇನ್ನೂ ಹೆನ್ರಿಚ್ ಕ್ಲಾಸೆನ್ ಅವರು 31 ರನ್ ಸಿಡಿಸಿದರು. ಈ ಹೋರಾಟದ ಫಲವಾಗಿ ಎಸ್‌ಆರ್‌ಎಚ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ಆರ್‌ಸಿಬಿಗೆ 202 ರನ್‌ಗಳ ಗುರಿ ನೀಡಿತು.
ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ
ಸನ್ ರೈಸರ್ಸ್ ಹೈದರಾಬಾದ್ ನೀಡಿದ್ದ 202 ರನ್‌ಗಳ ಬೃಹತ್ ಗುರಿಯನ್ನು ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ ತಲುಪುವ ಮೂಲಕ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಕೊನೆವರೆಗೂ ಜವಾಬ್ದಾರಿಯುತ ಆಟವಾಡಿ, ಕೇವಲ 38 ಎಸೆತಗಳಲ್ಲಿ ಅಜೇಯ 69 ರನ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು. ಅವರಿಗೆ ಸಾಥ್ ನೀಡಿದ ದೇವದತ್ ಪಡಿಕ್ಕಲ್ ಕೇವಲ 26 ಎಸೆತಗಳಲ್ಲಿ 61 ರನ್ ಸಿಡಿಸಿ ಅಬ್ಬರಿಸಿದರೆ, ನಾಯಕ ರಜತ್ ಪಾಟಿದಾರ್ 12 ಎಸೆತಗಳಲ್ಲಿ 31 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವನ್ನು ಸುಲಭಗೊಳಿಸಿದರು.
ಪಂದ್ಯದ ನಂತರ ಮಾತನಾಡಿದ ಎಸ್‌ಆರ್‌ಎಚ್ ಹಂಗಾಮಿ ನಾಯಕ ಇಶಾನ್ ಕಿಶನ್, ತಂಡ ಆರಂಭದಲ್ಲೇ ಸರಣಿ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬಳಿಕ ಬ್ಯಾಟರ್‌ಗಳ ತಪ್ಪಾದ ಶಾಟ್‌ಗಳು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಆದರೆ, ನಂತರ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಪೂರಕವಾಯಿತು ಎಂದು ಅವರು ಹೇಳಿದ್ದಾರೆ.
ಬ್ಯಾಟಿಂಗ್ ಕುರಿತು ಇಶಾನ್ ಸಹ ಆಟಗಾರರಿಗೆ ಪಾಠ
"ಮೊದಲ 3-4 ಓವರ್‌ಗಳ ನಂತರ ಪಿಚ್ ಬ್ಯಾಟಿಂಗ್‌ಗೆ ತುಂಬಾ ಪೂರಕವಾಯಿತು ಎಂದು ನನಗನ್ನಿಸುತ್ತದೆ. ನಾವು ಆರಂಭದಲ್ಲೇ ಕೆಲವು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡೆವು, ಮುಂದಿನ ಬಾರಿ ನಾವು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಬಳಿಕ ಬ್ಯಾಟಿಂಗ್ ಮಾಡುವರರಿಗೆ ಈ ಪಿಚ್ ತುಂಬಾ ಅನುಕೂಲವಾಯಿತು. ಮುಂದಿನ ಬಾರಿ ನಾವು ಬ್ಯಾಟಿಂಗ್ ಮಡುವ ವಿಚಾರದಲ್ಲಿ ಸ್ವಲ್ಪ ಬುದ್ಧಿವಂತಿಕೆಯಿಂದ ಇರಬೇಕಾಗುತ್ತದೆ." ಎಂದು ಹೇಳಿದರು.
ಗುರಿ ಬೆನ್ನಟ್ಟುವ ವೇಳೆ ಆರ್‌ಸಿಬಿ ತಂಡವು ಆರಂಭದಲ್ಲಿ ಫಿಲ್ ಸಾಲ್ಟ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಒಂದಾದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಜೋಡಿ ಎರಡನೇ ವಿಕೆಟ್‌ಗೆ ಅಮೋಘ 101 ರನ್‌ಗಳ ಜೊತೆಯಾಟವಾಡಿದರು. ಈ ಜೊತೆಯಾಟವು ಪಂದ್ಯವನ್ನು ಸಂಪೂರ್ಣವಾಗಿ ಹಾಲಿ ಚಾಂಪಿಯನ್ ಆರ್‌ಸಿಬಿ ಪರವಾಗಿ ತಿರುಗಿಸುವಲ್ಲಿ ಯಶಸ್ವಿಯಾಯಿತು.
ಎಸ್ಆರ್‌ಎಚ್ ಸಹ ಆಟಗಾರರಿಗೆ ಕಿಶನ್ ಎಚ್ಚರಿಕೆ ಸಂದೇಶ
ಇಶಾನ್ ಕಿಶನ್ ಆರ್‌ಸಿಬಿ ತಂಡದ ಬ್ಯಾಟರ್‌ಗಳ ಪ್ರದರ್ಶನವನ್ನು ಶ್ಲಾಘಿಸಿದರು. "ಆರ್‌ಸಿಬಿ ತಂಡದ ಆಟಗಾರರು ಬ್ಯಾಟ್ ಮಾಡಿದ ರೀತಿ ಅದ್ಭುತವಾಗಿತ್ತು. ಅದರಲ್ಲೂ ವಿಶೇಷವಾಗಿ ರನ್ ಬೆನ್ನಟ್ಟುವಾಗ ವಿರಾಟ್ ಭಾಯ್ ಆಡಿದ ರೀತಿ ಅಮೋಘವಾಗಿತ್ತು. ಅವರ ವಿಕೆಟ್ ಅನ್ನು ಆದಷ್ಟು ಬೇಗ ಪಡೆಯುವುದು ಅತ್ಯಂತ ಮುಖ್ಯ. ಒಂದು ವೇಳೆ ಅವರು ಕ್ರೀಸ್‌ನಲ್ಲಿ ನಿಂತು ಆಟ ಮುಂದುವರಿಸಿದರೆ, ಅವರನ್ನು ತಡೆಯುವುದು ತುಂಬಾ ಕಷ್ಟ. ನಾವು ಈ ಬಗ್ಗೆ ಸ್ವಲ್ಪ ಯೋಚಿಸಬೇಕಾಗುತ್ತದೆ," ಎಂದು ತಮ್ಮ ತಂಡದ ಸಹ ಆಟಗಾರರಿಗೆ ಎಚ್ಚರಿಸಿದರು.
"ಬೌಲಿಂಗ್ ವಿಷಯದಲ್ಲಿ ನಾವು ಇನ್ಮುಂದೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಮುಂದಿನ ಪಂದ್ಯದಿಂದ ಇನ್ನು ಹೆಚ್ಚು ಬಲಿಷ್ಠವಾಗಿ ಕಣಕ್ಕಿಳಿಯಲಿದ್ದೇವೆ. ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ನಾಯಕತ್ವ ವಹಿಸುವುದು ಸ್ವಲ್ಪ ಆತಂಕ ಅಥವಾ ಒತ್ತಡ ತಂದಿದ್ದರೂ ಸಹ, ತಂಡವನ್ನು ಮುನ್ನಡೆಸುವ ಈ ಅನುಭವವನ್ನು ಆನಂದಿಸಿದೆ," ಎಂದು ಇಶಾನ್ ಕಿಶನ್ ತಿಳಿಸಿದ್ದಾರೆ. ಮುಂದುವರೆದು ಮುಂದಿನ ಪಂದ್ಯಗಳನ್ನು ನಾವು ಗೆದ್ದರೆ, ಟೂರ್ನಿಯಲ್ಲಿ ಮುಂದೆ ಸಾಗಲು ನಮಗೆ ತುಂಬಾ ಸುಲಭವಾಗುತ್ತದೆ," ಎಂದು ಅವರು ಹೇಳಿದರು. ಒಟ್ಟಿನಲ್ಲಿ ಹೇಳುವುದಾದರೆ, ಇಶಾನ್ ಕಿಶನ್ ಅವರು ಕಿಂಗ್ ಕೊಹ್ಲಿ ಅವರನ್ನು ಮೈದಾನದಲ್ಲಿ ಯಾವುದೇ ಕಾರಣಕ್ಕೂ ಕೆಣಕಬೇಡಿ, ಅವರನ್ನು ಜಾಸ್ತಿ ಹೊತ್ತು ಕ್ರೀಸ್‌ನಲ್ಲಿ ಇರಲು ಬಿಡಬೇಡಿ. ಒಂದು ವೇಳೆ ಅವರನ್ನು ತಡೆಯದಿದ್ದರೆ, ನಮಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವ ಸಂದೇಶವನ್ನು ತಮ್ಮ ತಂಡದ ಸಹ ಆಟಗಾರರಿಗೆ ಎಚ್ಚರಿಕೆ ಸೂಚನೆ ನೀಡಿದ್ದಾರೆ.












Click it and Unblock the Notifications