IPL: ಪಂಜಾಬ್ ತಂಡಕ್ಕೆ ಹೊಸ ಕೋಚ್ ನೇಮಕ, ಕುಂಬ್ಳೆ ಸ್ಥಾನಕ್ಕೆ ಟ್ರೆವರ್
ಬೆಂಗಳೂರು, ಸೆ.16: ಅತ್ಯಂತ ಐಷಾರಾಮಿ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ತಂಡಗಳ ಕೋಚ್ ಬದಲಾವಣೆ ಪ್ರಕ್ರಿಯೆ ಮುಂದುವರೆದಿದೆ. ಕೋಲ್ಕತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಬಳಿಕ ಕಿಂಗ್ಸ್ ಎಲೆವನ್ ತಂಡಕ್ಕೆ ಹೊಸ ಕೋಚ್ ನೇಮಕವಾದ ಸುದ್ದಿ ಬಂದಿದೆ. ಸತತ ವೈಫಲ್ಯ ಕಂಡಿರುವ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮುಂದಿನ ಸೀಸನ್‌ನಲ್ಲಿ ಪಂಜಾಬ್ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿ ನಿಜವಾಗಿದೆ. ಅನಿಲ್ ಕುಂಬ್ಳೆ ಸ್ಥಾನಕ್ಕೆ ಹೊಸ ಕೋಚ್ ನೇಮಕ ಮಾಡಲಾಗಿದೆ.
ಪಂಜಾಬ್ ತಂಡಕ್ಕೆ 59 ವರ್ಷ ವಯಸ್ಸಿನ ಟ್ರೆವರ್ ಬೇಲಿಸ್ ಹೊಸ ಮುಖ್ಯ ಕೋಚ್ ಆಗಿ ಮುಂದಿನ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶುಕ್ರವಾರ(ಸೆಪ್ಟೆಂಬರ್ 16)ದಂದು ಫ್ರಾಂಚೈಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ಬೇಲಿಸ್ ನೇಮಕದ ಬಗ್ಗೆ ತಿಳಿಸಿದೆ. "ಪಂಜಾಬ್ ಕಿಂಗ್ಸ್‌ನೊಂದಿಗೆ ಮುಖ್ಯ ತರಬೇತುದಾರನ ಪಾತ್ರವನ್ನು ನೀಡಿದ್ದಕ್ಕಾಗಿ ನನಗೆ ಹೆಮ್ಮೆ ಎನಿಸಿದೆ" ಎಂದು ಬೇಲಿಸ್ ಪ್ರತಿಕ್ರಿಯಿಸಿದ್ದಾರೆ. "ಯಶಸ್ಸಿನ ಹಸಿವನ್ನು ಹೊಂದಿರುವ ಫ್ರಾಂಚೈಸಿ ಇದಾಗಿದ್ದು, ಆಟಗಾರರ ಪ್ರತಿಭಾವಂತ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ'' ಎಂದು ಬೇಲಿಸ್ ಹೇಳಿದ್ದಾರೆ.

ರೇಸ್‌ನಲ್ಲಿ ಯಾರಿದ್ದರು?
ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಅಯಾನ್ ಮಾರ್ಗನ್, ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲೆಸ್ಪಿ, ಭಾರತ ಮೂಲದ ಮಾಜಿ ಆಟಗಾರರೊಬ್ಬರನ್ನು ಕೋಚ್ ಸ್ಥಾನಕ್ಕೆ ಪರಿಗಣಿಸಲಾಗಿತ್ತು ಎಂಬ ಮಾಹಿತಿಯಿದೆ. ಅಂತಿಮವಾಗಿ ಯಶಸ್ವಿ ಕೋಚ್ ಟ್ರೆವರ್ ಬೇಲಿಸ್ ಆಯ್ಕೆ ಮಾಡಲಾಗಿದೆ.
🚨 New Coach Alert 🚨
— Punjab Kings (@PunjabKingsIPL) September 16, 2022
IPL winner ✅
ODI World Cup winner ✅
CLT20 winner ✅
Here's wishing a very warm welcome to our new Head Coach, Trevor Bayliss. 😍
Here's looking forward to a successful partnership! 🤝#PunjabKings #SaddaPunjab #TrevorBayliss #HeadCoach pic.twitter.com/UKdKi2Lefi
ಈ ಹಿಂದೆ 2012 ಹಾಗೂ 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿದ್ದರು. ಐಪಿಎಲ್ ಟ್ರೋಫಿ ಎತ್ತಿ ಹಿಡಿದ ತಂಡದ ಭಾಗವಾಗಿದ್ದರು. ಸಿಡ್ನಿ ಸಿಕ್ಸರ್ಸ್ ತಂಡವು ಬಿಬಿಎಲ್ ಗೆಲ್ಲಲು ನೆರವಾಗಿದ್ದರು. ಇಂಗ್ಲೆಂಡ್ ಕೋಚ್ ಆಗಿ ಕೂಡಾ 2019ರ ವಿಶ್ವಕಪ್‌ನಲ್ಲಿ ಉತ್ತಮ ಕಾರ್ಯ ನಿರ್ವಹಣೆ ತೋರಿದ್ದರು. ಐಪಿಎಲ್‌ನಲ್ಲಿ 2020 ಹಾಗೂ 2021ರಲ್ಲಿ ಹೈದರಾಬಾದ್ ತಂಡ ಕೋಚಿಂಗ್ ಪಡೆ ಸೇರಿಕೊಂಡಿದ್ದರು.
2020ರಲ್ಲಿ ಪಂಜಾಬ್ ತಂಡದ ಕೋಚ್, ನಿರ್ದೇಶಕ ಸ್ಥಾನಕ್ಕೆ ನೇಮಕವಾದ ಕನ್ನಡಿಗ, ದಿಗ್ಗಜ ಕ್ರಿಕೆಟರ್ ಅನಿಲ್ ಕುಂಬ್ಳೆ, ತಂಡದಲ್ಲಿ ಶಿಸ್ತು ತರಲು ಸಾಕಷ್ಟು ಶ್ರಮಿಸಿದರು. ಕಳೆದ ಸೀಸನ್‌ನಲ್ಲಿ ಏಳು ಗೆಲುವು ಮಾತ್ರ ಸಾಧಿಸಿದ ಪಂಜಾಬ್ ತಂಡ ಹೊಸ ಹುರುಪಿಗಾಗಿ ಕಾದಿದೆ. 2014ರ ನಂತರ ಪ್ಲೇ ಆಫ್ ಹಂತಕ್ಕೇರಿಲ್ಲ, ಹೀಗಾಗಿ ಹೊಸ ಕೋಚ್ ನೇಮಕದೊಂದಿಗೆ ಹೊಸ ದಿಕ್ಕಿನತ್ತ ಪಯಣ ಆರಂಭಿಸಲಿದೆ.












Click it and Unblock the Notifications