IPL Auction 2024: ಈ ಆಟಗಾರರ ಮೇಲೆ ಆರ್‌ಸಿಬಿ ಕಣ್ಣು? ತಂಡ, ಪರ್ಸ್ ವಿವರ
ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ದುಬೈ ಸಕಲ ರೀತಿಯಲ್ಲಿ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಭಾರತದಿಂದ ಹೊರಗೆ ಐಪಿಎಲ್ ಹರಾಜು ಆಯೋಜಿಸಲಾಗಿದೆ. ಡಿಸೆಂಬರ್ 19ರಂದು ಮಧ್ಯಾಹ್ನ 2.30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ.
ಒಟ್ಟು 333 ಆಟಗಾರರು ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಐಪಿಎಲ್‌ನಲ್ಲಿ ಬಲಿಷ್ಠ ಮತ್ತು ಜನಪ್ರಿಯ ತಂಡ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 16 ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿದೆ.

ಮೂರು ಬಾರಿ ಫೈನಲ್ ತಲುಪಿದ್ದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಫಾಫ್ ಡು ಪ್ಲೆಸಿಸ್ ನಾಯಕತ್ವದ ವಿರಾಟ್ ಕೊಹ್ಲಿಯ ಆರ್‌ಸಿಬಿ, ಈ ಬಾರಿ ಪ್ರಶಸ್ತಿ ಗೆಲ್ಲುವತ್ತ ಕಣ್ಣಿಟ್ಟಿದ್ದು, ಅದಕ್ಕೂ ಮುನ್ನ ಹಲವು ಆಟಗಾರರನ್ನು ಬಿಡುಗಡೆ ಮಾಡಿತ್ತು. ನಂತರ ದುಬಾರಿ ಟ್ರೇಡಿಂಗ್ ಮೂಲಕ ಆಸ್ಟ್ರೇಲಿಯಾ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್‌ರನ್ನು ಮುಂಬೈ ಇಂಡಿಯನ್ಸ್ ತಂಡದಿಂದ ಆರ್‌ಸಿಬಿಗೆ ಸೇರಿದ್ದಾರೆ.
ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರು:
ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ , ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್
ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರು
ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್
ಆರ್‌ಸಿಬಿ ಟ್ರೇಡ್ಸ್: ಮಯಾಂಕ್ ದಾಗರ್ (ಸನ್‌ರೈಸರ್ಸ್ ಹೈದರಾಬಾದ್‌ನಿಂದ), ಕ್ಯಾಮರೂನ್ ಗ್ರೀನ್ (ಮುಂಬೈ ಇಂಡಿಯನ್ಸ್‌ನಿಂದ).
ಬಾಕಿ ಇರುವ ಪರ್ಸ್ : ₹23.25 ಕೋಟಿ.
ಉಳಿದಿರುವ ಸ್ಲಾಟ್‌ಗಳು: 6 (3 ವಿದೇಶಿ ಆಟಗಾರರು)
ಯಾರ ಮೇಲೆ ಕಣ್ಣಿಟ್ಟಿದೆ ಆರ್‌ಸಿಬಿ
ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್ ಮತ್ತು ಸಿದ್ಧಾರ್ಥ್ ಕೌಲ್‌ರಂತಹ ಬೌಲರ್ ಗಳನ್ನು ಬಿಡುಗಡೆ ಮಾಡಿದೆ. ಈ ಬಾರಿ ಹರಾಜಿನಲ್ಲಿ ಆರ್‌ಸಿಬಿ ಭಾರತ ಮತ್ತು ವಿದೇಶಿ ಬೌಲರ್ ಗಳ ಮೇಲೆ ಕಣ್ಣಿಟ್ಟಿದೆ.
ವನಿಂದು ಹಸರಂಗ ಅವರನ್ನು ಬಿಡುಗಡೆ ಮಾಡಿದ್ದು ಗುಣಮಟ್ಟದ ಸ್ಪಿನ್ನರ್ ಅವರ ಹುಡುಕಾಟದಲ್ಲಿದೆ. ತಂಡದಲ್ಲಿ ಈಗಾಗಲೇ ಬ್ಯಾಟಿಂಗ್ ಬಲಿಷ್ಠವಾಗಿದ್ದು ಬೌಲರ್, ಬೌಲಿಂಗ್ ಆಲ್‌ರೌಂಡರ್ ಕಡೆ ಗಮನ ನೀಡಲಿದೆ. 23.25 ಕೋಟಿ ರೂ. ಪರ್ಸ್ ಹೊಂದಿದ್ದು ದುಬಾರಿ ಸ್ಮಾರ್ಟ್ ಆಗಿ ಯೋಚನೆ ಮಾಡಬೇಕಿದೆ. ಈ ಆಟಗಾರರು ತಂಡಕ್ಕೆ ಉತ್ತಮ ಸೇರ್ಪಡೆಯಾಗಲಿದ್ದಾರೆ.
ಮಿಚೆಲ್ ಸ್ಟಾರ್ಕ್: ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಈ ಬಾರಿ ಐಪಿಎಲ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಬ್ಬರಾಗಿದ್ದಾರೆ. ಸ್ಟಾರ್ಕ್ ಈ ಮೊದಲು ಆರ್ ಸಿಬಿ ತಂಡಕ್ಕಾಗಿ ಆಡಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಅವರು 20 ವಿಕೆಟ್ ಪಡೆದು ಮಿಂಚಿದ್ದಾರೆ.
ಪ್ಯಾಟ್ ಕಮ್ಮಿನ್ಸ್ : ಆಸ್ಟ್ರೇಲಿಯಾದ ವೇಗದ ಬೌಲರ್ ಆರ್‌ಸಿಬಿಗೆ ಮತ್ತೊಂದು ಆಯ್ಕೆಯಾಗಿರಬಹುದು ಆದರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹೆಚ್ಚು ಪೈಪೋಟಿ ಇರಲಿದೆ. ಕಮ್ಮಿನ್ಸ್ ಬ್ಯಾಟಿಂಗ್‌ನಲ್ಲಿ ಕೂಡ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.
ಮುಜೀಬ್ ಉರ್ ರೆಹಮಾನ್: ಹಸರಂಗ ಅವರನ್ನು ಬಿಡುಗಡೆ ಮಾಡಿದ ಬಳಿಕ ಆಫ್ಘಾನಿಸ್ತಾನ ಮುಜೀಬ್ ಉರ್ ರೆಹಮಾನ್ ಕೂಡ ಆರ್‌ಸಿಬಿಗೆ ಉತ್ತಮ ಆಯ್ಕೆಯಾಗಿದ್ದಾರೆ. ಕಳೆದ ಹರಾಜಿನಲ್ಲಿ ಅವರು ಮಾರಾಟವಾಗದಿದ್ದರೂ, ಈ ಬಾರಿ ಆರ್‌ಸಿಬಿ ಸೇರುವ ಸಾಧ್ಯತೆ ಇದೆ.
ಕಾರ್ತಿಕ್ ತ್ಯಾಗಿ: ಅತ್ಯುತ್ತಮ ಯುವ ವೇಗಿಗಳಲ್ಲಿ ಒಬ್ಬರು, ತ್ಯಾಗಿ ಆರ್‌ಸಿಬಿಗೆ ಉತ್ತಮ ಆಯ್ಕೆಯಾಗಲಿದ್ದಾರೆ. ವೇಗದ ಬೌಲರ್ ಉತ್ತಮ ಭರವಸೆಯನ್ನು ತೋರಿಸಿದ್ದಾರೆ ಮತ್ತು ಯುವ ಆಟಗಾರರಿಗೆ ಅವಕಾಶಗಳನ್ನು ನೀಡಲು ಹೆಸರುವಾಸಿಯಾದ ಆರ್‌ಸಿಬಿಯೊಂದಿಗೆ ಇದು ಉತ್ತಮ ಆಯ್ಕೆ ಎನ್ನುವಂತೆ ಕಾಣುತ್ತದೆ.












Click it and Unblock the Notifications