RCB IPL 2026 Trophy: ಎರಡನೇ ಸಲವೂ ಕಪ್ ನಮ್ಡೇ.. ಆರ್‌ಸಿಬಿಯ ಹೊಸ ಇತಿಹಾಸ
RCB IPL 2026 Trophy: ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿಯು ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ಅನ್ನು 5 ವಿಕೆಟ್ ಗಳಿಂದ ಸೋಲಿಸಿ ಸತತ 2ನೇ ಬಾರಿ ಟ್ರೋಫಿ ಎತ್ತಿ ಹಿಡಿದಿದೆ.
ರನ್‌ಮಿಷಿನ್ ವಿರಾಟ್ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಅವರು ಮತ್ತೊಮ್ಮೆ ತಾವೂ ಚೇಸಿಂಗ್ ಮಾಡುವುದರಲ್ಲಿ ಕಿಂಗ್ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಕೊಹ್ಲಿ
ಭಾನುವಾರ (ಮೇ 31) ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಜಿಟಿ ನೀಡಿದ್ದ 156 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಆರಂಭದಿಂದ ಕೊನೆಯವರೆಗೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಅಜೇಯ ಹೋರಾಟ ನಡೆಸಿದರು. ಪಂದ್ಯದ ಮಧ್ಯೆ ಗಾಯದ ಸಮಸ್ಯೆಗೆ ಒಳಗಾಗಿದ್ದರೂ ಬಗ್ಗದ ಕೊಹ್ಲಿ ಕೇವಲ 42 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದರು. ಈ ಇನಿಂಗ್ಸ್ ವೇಳೆ ಅವರು ತಮ್ಮ ಐಪಿಎಲ್ ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನೂ ಬರೆದರು.
ಆರ್‌ಸಿಬಿ ಗೆಲುವಿನ ದಡ ಸೇರಿಸಿದ ಕಿಂಗ್
ಆರ್‌ಸಿಬಿ ಪರ ಬ್ಯಾಟ್ ಬೀಸಿದ ವೆಂಕಟೇಶ್ ಅಯ್ಯರ್ 16 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 32 ರನ್ ಕಲೆಹಾಕಿ ಉತ್ತಮ ಆರಂಭ ಒದಗಿಸಿಕೊಟ್ಟರು. ಉಳಿದಂತೆ ನಾಯಕ ರಜತ್ ಪಾಟಿದಾರ್ 15(13), ಟಿಮ್ ಡೇವಿಡ್ 24(17) ರನ್‌ಗಳ ಕೊಡಗೆ ನೀಡಿದರು. ಬಳಿಕ ವಿರಾಟ್ ಕೊಹ್ಲಿ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವನ ದಡ ಸೇರಿಸಿ ಮತ್ತೊಮ್ಮೆ ಚೇಸ್ ಮಾಸ್ಟರ್ ಎಂದು ಸಾಬೀತುಪಡಿಸಿದರು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರ ತಂತ್ರಕ್ಕೆ ತಕ್ಕಂತೆ ಬೌಲರ್‌ಗಳು ಅದ್ಭುತ ಯಶಸ್ಸು ತಂದುಕೊಟ್ಟರು. ಪವರ್‌ಪ್ಲೇನಲ್ಲೇ ಜಿಟಿ ನಾಯಕ ಶುಭ್‌ಮನ್ ಗಿಲ್ ಮತ್ತು ಅಪಾಯಕಾರಿ ಓಪನರ್ ಸಾಯಿ ಸುದರ್ಶನ್ ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಆರಂಭಿಕ ಆಘಾತ ನೀಡಿದರು.
ವಾಷಿಂಗ್ಟನ್ ಸುಂದರ್ ಅರ್ಧಶತಕ ವ್ಯರ್ಥ
ಗುಜರಾತ್ ಪರ ಸಿಕ್ಕ ಜೀವದಾನದ ಸಂಪೂರ್ಣ ಲಾಭ ಪಡೆದ ವಾಷಿಂಗ್ಟನ್ ಸುಂದರ್ ಜವಾಬ್ದಾರಿಯುತ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಜಿಟಿ ತಂಡವನ್ನು 20 ಓವರ್‌ಗಳಲ್ಲಿ 155/8 ರನ್‌ಗಳಿಗೆ ನಿಯಂತ್ರಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಯಿತು. ಆರ್‌ಸಿಬಿ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ರಸಿಖ್ ಸಲಾಮ್ ದಾರ್ 3 ವಿಕೆಟ್ ಕಬಳಿಸಿದರೆ, ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್ ತಲಾ 2, ಕೃನಾಲ್ ಪಾಂಡ್ಯ ಒಂದು ವಿಕೆಟ್ ಕಿತ್ತು ಮಿಂಚಿದರು.
ಗುಜರಾತ್ ಟೈಟಾನ್ಸ್ ಪರ ಬ್ಯಾಟ್ ಬೀಸಿದ ಆರ್‌ಸಿಬಿ ಮಾಜಿ ಆಟಗಾರ ವಾಷಿಂಗ್ಟನ್ ಸುಂದರ್ 37 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಅಜೇಯ ಅರ್ಧಶತಕ (50) ಸಿಡಿಸಿ ಮಿಂಚಿದರು. ಈ ಮೂಲಕ ತಂಡದ ಪರ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿರು. ಉಳಿದಂತೆ ನಾಯಕ ಶುಭ್‌ಮನ್ ಗಿಲ್ 10(8), ಸಾಯಿ ಸುದರ್ಶನ್ 12(12), ನಿಶಾಂತ್ ಸಿಂಧು 20(18), ಅರ್ಷದ್ ಖಾನ್ 15(6) ಗಳಿಸಿದರು. ಉಳಿದವರು ಒಂದಂಕಿ ದಾಟಲಿಲ್ಲ. ಇ
ನ್ನೂ ಈ ಭರ್ಜರಿ ಗೆಲುವಿನೊಂದಿಗೆ ಡಿಫೆಂಡಿಂಗ್ ಚಾಂಪಿಯನ್ ಆರ್‌ಸಿಬಿ ಬ್ಯಾಕ್-ಟು-ಬ್ಯಾಕ್ ಟ್ರೋಫಿ ಗೆದ್ದು ಬೀಗಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ತಂಡವು ತನ್ನ ಐಪಿಎಲ್ ಇತಿಹಾಸದ ಎರಡನೇ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ವಿಫಲವಾಗಿದೆ.












Click it and Unblock the Notifications