RCB vs LSG: ಎಲ್‌ಎಸ್‌ಜಿ ಪ್ರಮುಖ ಬ್ಯಾಟರ್ ಅಲಭ್ಯ; ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ
ಐಪಿಎಲ್ 2025ರ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮಂಗಳವಾರ ಲಕ್ನೋದ ಎಕಾನ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಆರ್ ಸಿಬಿಗೆ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ. ಎಲ್‌ಎಸ್‌ಜಿ ವಿರುದ್ಧ ಗೆದ್ದರೆ ಆರ್ ಸಿಬಿ ನೇರವಾಗಿ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯಲಿದ್ದು, ಕ್ವಾಲಿಫೈಯರ್ 1 ಪಂದ್ಯ ಆಡಬಹುದು.
ಒಂದು ವೇಳೆ ಆರ್ ಸಿಬಿ ಸೋತರೆ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಪ್ಲೇಆಫ್ ತಲುಪಲಿದ್ದು ಎಲಿಮಿನೇಟರ್ ಪಂದ್ಯ ಆಡಬೇಕಾಗುತ್ತದೆ. ಆದರೆ ಮೊದಲ ಎರಡು ಸ್ಥಾನದಲ್ಲಿ ಪ್ಲೇಆಫ್ ತಲುಪಿದರೆ ಕ್ವಾಲಿಫೈಯರ್ 1 ಪಂದ್ಯ ಗೆದ್ದರೆ ನೇರವಾಗಿ ಫೈನಲ್ ಪ್ರವೇಶಿಸಲಿದೆ.

ಗುಜರಾತ್ ಟೈಟಾನ್ಸ್ ವಿರುದ್ಧ ಸಿಎಸ್‌ಕೆ ಗೆಲುವು ಸಾಧಿಸಿರುವುದು ಆರ್ ಸಿಬಿಗೆ ವರದಾನವಾಗಿದೆ. ಈಗ ರನ್‌ರೇಟ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಲ್‌ಎಸ್‌ಜಿ ವಿರುದ್ಧ ಗೆದ್ದರೆ ಸಾಕು ಕ್ವಾಲಿಫೈಯರ್ 1 ಪಂದ್ಯ ಆಡಲು ಅವಕಾಶ ಸಿಗಲಿದೆ.
ಎಲ್‌ಎಸ್‌ಜಿ ಪ್ರಮುಖ ಬ್ಯಾಟರ್ ಅಲಭ್ಯ!
ಎಲ್‌ಎಸ್‌ಜಿ ತಂಡ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವುದರಿಂದ ಅವರು ಯಾವುದೇ ಒತ್ತಡವಿಲ್ಲದೆ ಆಡಲಿದ್ದು, ಆರ್ ಸಿಬಿಗೆ ದೊಡ್ಡ ಸವಾಲಾಗಲಿದೆ. ಆದರೆ ತಂಡದ ಪ್ರಮುಖ ಬ್ಯಾಟರ್ ಏಡೆನ್ ಮಾರ್ಕ್ರಮ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಸಜ್ಜಾಗಲು ವಾಪಸ್ ಹೋಗಿರುವುದರಿಂದ ಮಂಗಳವಾರ ಅವರು ಅಲಭ್ಯರಾಗಿದ್ದಾರೆ. ಅವರ ಬದಲಾಗಿ ಆರ್ಯನ್ ಜುಯಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಆರ್ ಸಿಬಿ ತಂಡದ ಪ್ರಮುಖ ಬ್ಯಾಟರ್ ಟಿಮ್ ಡೇವಿಡ್ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದು ಅವರ ಫಿಟ್‌ನೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರು ಫಿಟ್ ಆಗದೇ ಇದ್ದರೆ ಲಿಯಾಮ್ ಲಿವಿಂಗ್‌ಸ್ಟೋನ್ ಕಣಕ್ಕಿಳಿಯಲಿದ್ದಾರೆ. ಜೋಶ್ ಹೇಜಲ್‌ವುಡ್ ಕೂಡ ವಾಪಸಾಗಿದ್ದು ಮಂಗಳವಾರ ಕಣಕ್ಕಿಳಿಯಲಿದ್ದಾರೆ.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಆರ್ ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್. (ಸುಯಾಶ್ ಶರ್ಮಾ; ಬದಲೀ ಆಟಗಾರ).
ಲಕ್ನೋ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಆರ್ಯನ್ ಜುಯಲ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಆಯುಷ್ ಬದೋನಿ, ಶಾರ್ದೂಲ್ ಠಾಕೂರ್/ಆಕಾಶ್ ಸಿಂಗ್, ಆಕಾಶ್ ದೀಪ್, ಅವೇಶ್ ಖಾನ್, ಶಹಬಾಜ್ ಅಹ್ಮದ್, ದಿಗ್ವೇಶ್ ಸಿಂಗ್ ರಾಠಿ, ವಿಲಿಯಂ ಓ'ರೂರ್ಕ್. ( ಬದಲೀ ಆಟಗಾರ; ಅಬ್ದುಲ್ ಸಮದ್).












Click it and Unblock the Notifications