GT Vs MI: ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್‌ಗೆ ರೋಚಕ ಗೆಲುವು; ನಾಯಕನಾಗಿ ಗೆದ್ದ ಗಿಲ್
ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ನಾಯಕನಾಗಿ ಮೊದಲ ಪಂದ್ಯವನ್ನಾಡಿದ ಶುಭಮನ್ ಗಿಲ್ ಗೆದ್ದು ಬೀಗಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 6 ರನ್‌ಗಳ ರೋಚಕ ಗೆಲುವ ಸಾಧಿಸಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸುವ ಮೂಲಕ 6 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ವೃದ್ಧಿಮಾನ್ ಸಾಹ ಮತ್ತು ನಾಯಕ ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 31ರನ್ ಕಲೆಹಾಕಿದರು. ಆದರೆ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ಸಾಹಾರನ್ನು ಬೌಲ್ಡ್ ಮಾಡುವ ಮೂಲಕ ಆಘಾತ ನೀಡಿದರು.
ಗಿಲ್ 31 ರನ್ ಗಳಸಿದರೆ, ಸಾಯಿ ಸುದರ್ಶನ್ 45 ರನ್ ಗಳಿಸಿದರು. ರಾಹುಲ್ ತೆವಾಟಿಯಾ 22 ರನ್ ಗಳಿಸುವ ಮೂಲಕ ಸವಾಲಿನ ಮೊತ್ತವನ್ನು ಕಲೆಹಾಕುವಲ್ಲಿ ನೆರವಾದರು. ಮುಂಬೈ ಇಂಡಿಯನ್ಸ್ ಪರವಾಗಿ ವೇಗಿ ಜಸ್ಪ್ರೀತ್ ಬುಮ್ರಾ 4 ಓವರ್ ಗಳಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಪಡೆದರು. ಗೆರಾಲ್ಡ್ ಕೊಯೆಟ್ಜೆ 2 ವಿಕೆಟ್ ಪಡೆದರು.
ಗೆಲುವಿನ ಸನಿಹದಲ್ಲಿ ಎಡವಿದ ಮುಂಬೈ
ಸವಾಲಿನ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಇಶಾನ್ ಕಿಶನ್ ಯಾವ ರನ್ ಗಳಿಸದೇ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಯಾದ ರೋಹಿತ್ ಶರ್ಮಾ ಮತ್ತು ನಮನ್ ಧಿರ್ ಎರಡನೇ ವಿಕೆಟ್‌ಗೆ 30 ರನ್ ಕಲೆಹಾಕಿದರು. ಧಿರ್ 20 ರನ್ ಗಳಿಸಿ ಔಟಾದರು.
ಡೆವಾಲ್ಡ್ ಬ್ರೆವಿಸ್ ಮತ್ತು ರೋಹಿತ್ ಶರ್ಮಾ ಮೂರನೇ ವಿಕೆಟ್‌ಗೆ 77 ರನ್ ಕೆಲಹಾಕಿದರು. ಈ ಹಂತದಲ್ಲಿ ಮುಂಬೈ ಇಂಡಿಯನ್ಸ್ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ರೋಹಿತ್ ಶರ್ಮಾ (43 ರನ್) ಮತ್ತು ಡೆವಾಲ್ಡ್ ಬ್ರೆವಿಸ್ (46 ರನ್) ಔಟಾದ ಬಳಿಕ ತಂಡ ಸಂಕಷ್ಟಕ್ಕೆ ಸಿಲುಕಿತು. ತಿಲಕ್ ವರ್ಮಾ 25 ರನ್, ಪಾಂಡ್ಯ 11 ರನ್, ಟಿಮ್ ಡೇವಿಡ್ 11 ರನ್ ಗಳಿಸಿ ಔಟಾದರು. ಗುಜರಾತ್ ನೀಡಿದ ಗೆಲುವಿನ ಗುರಿಯನ್ನು ಬೆನ್ನತ್ತಲು ವಿಫಲವಾಯಿತು.
ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ ಸತತ 12ನೇ ಬಾರಿಗೆ ಮೊದಲ ಪಂದ್ಯವನ್ನು ಸೋತಿದೆ. 2013ರಿಂದ ಇದುವರೆಗೆ ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಆಡುವ ಮೊದಲ ಪಂದ್ಯದಲ್ಲಿ ಗೆದ್ದಿಲ್ಲ.
ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಸೋತರೆ, ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಶುಭಮನ್ ಗಿಲ್ ಗೆಲುವು ಸಾಧಿಸಿದರು.












Click it and Unblock the Notifications