IPL 2023: ಶಕೀಬ್, ಲಿಟನ್‌ಗೆ NOC ನಿರಾಕರಣೆ: ಕೆಕೆಆರ್‌ಗೆ ಶಾಕ್ ನೀಡಿದ ಬಾಂಗ್ಲಾ ಕ್ರಿಕೆಟ್ ಮಂಡಳಿ!
ಐಪಿಎಲ್ 16ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 31ರಿಂದ ಆರಂಭವಾಗಲಿರುವ ಈ ಟೂರ್ನಿಯ ಆರಂಭಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಆಘಾತ ನೀಡಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರಾದ ಶಕೀಬ್ ಅಲ್ ಹಸನ್ ಹಾಗೂ ಲಿಟನ್ ದಾಸ್‌ಗೆ ನಿರಾಕ್ಷೇಪರಣಾ ಪತ್ರ ನೀಡಲು ಬಿಸಿಬಿ ನಿರಾಕರಿಸಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಈ ನಿರ್ಧಾರದಿಂದಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಟೂರ್ನಿಯ ಕೆಲ ಪಂದ್ಯಗಳಿಗೆ ತನ್ನ ಇಬ್ಬರು ಆಟಗಾರರ ಸೇವೆಯಿಂದ ವಂಚಿತವಾಗುವ ಸಾಧ್ಯತೆಗಳು ಇವೆ. ಶಕೀಬ್ ಅಲ್ ಹಸನ್ ಹಾಗೂ ಲಿಟನ್ ದಾಸ್ ಕೆಕೆಆರ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರಲ್ಲಿ ಒಬ್ಬರು. ಸುದೀರ್ಘ ಕಾಲದಿಂದ ಐಸಿಸಿ ಆಲ್‌ರೌಂಡರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿಯೂ ಶಕೀಬ್ ಉತ್ತಮ ಸ್ಥಾನವನ್ನು ಪಡೆದಕೊಂಡಿದ್ದಾರೆ. ಅಲ್ಲದೆ ಕೆಕೆಆರ್ ತಂಡದಲ್ಲಿಯೂ ಸಾಕಷ್ಟು ವರ್ಷಗಳಿಂದ ಆಡುತ್ತಿರುವ ಶಕೀಬ್ ತಂಡದಲ್ಲಿ ಪ್ರಮೂಕ ಪಾತ್ರ ನಿರ್ವಹಿಸಿಕೊಂಡು ಬಂದಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಗೂ ಮುನ್ನ ಕೆಕೆಆರ್ ನಾಯಕ ಶ್ರೇಯಸ್ ಐಯ್ಯರ್ ಗಾಯದಿಂದಾಗಿ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ತವಾಗುವ ಸಾಧ್ಯತೆಯಿದೆ. ಶ್ರೇಯಸ್ ಐಯ್ಯರ್ ಅಲಭ್ಯತೆಯಲ್ಲಿ ಕೆಕೆಆರ್ ತಂಡವನ್ನು ಶಕೀಬ್ ಅಲ್ ಹಸನ್ ಮುನ್ನಡೆಸಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರತೊಡಗಿತ್ತು. ಇಂಥಾ ಸಂದರ್ಭದಲ್ಲಿ ಶಕೀಬ್ ಅಲಭ್ಯವಾದಲ್ಲಿ ಕೆಕೆಆರ್ ತಂಡಕ್ಕೆ ಆರಂಭದಲ್ಲಿಯೇ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.
ಐಪಿಎಲ್‌ನಲ್ಲಿ ಮೊದಲ ಬಾರುಇಗೆ ಅವಕಾಶ ಗಿಟ್ಟಿಸಿಕೊಂಡ ಲಿಟನ್ ದಾಸ್: ಇನ್ನು ಬಾಂಗ್ಲಾದೇಶದ ಪರವಾಗಿ ಇತ್ತೀಚಿನ ದಿನಗಳಲ್ಲಿ ಅದ್ಭುತ ಪ್ರದರ್ಶನ ನಿಡಿ ಮಿಂಚುತ್ತಿರುವ ಆಟಗಾರ ಲಿಟನ್ ದಾಸ್. ಕಳೆದ ಭಾರತದ ವಿರುದ್ಧದ ಸರಣಿಯಲ್ಲಿಯೂ ಲಿಟನ್ ದಾಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಗಮನಸೆಳೆದಿದ್ದರು. ಅಗ್ರಕ್ರಮಾಂಕದಲ್ಲಿ ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿರುವ ಲಿಟನ್ ದಾಸ್ ಸ್ಪೋಟಕವಾಗಿಯೂ ಬ್ಯಾಟಿಂಗ್ ನಡೆಸಿ ಎದುರಾಳಿ ತಂಡಕ್ಕೆ ಆಘಾತ ನೀಡಬಲ್ಲ ಸಾಮರ್ಥ್ಯಹೊಂದಿದ್ದಾರೆ. ಆರೋನ್ ಫಿಂಚ್ ಬಳಿಕ ಆ ಸ್ಥಾನಕ್ಕೆ ಲಿಟನ್ ದಾಸ್ ಅವರನ್ನು ಕೆಕೆಆರ್ ಸೇರ್ಪಡೆಗೊಳಿಸಿದೆ.
ಯಾರಾಗಲಿದ್ದಾರೆ ಕೆಕೆಆರ್ ನಾಯಕ?: ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಈ ಬಾರಿಯ ಐಪಿಎಲ್‌ನಲ್ಲಿ ಮುನ್ನಡೆಸುವುದು ಯಾರು ಎಂಬುದು ಸದ್ಯಕ್ಕೆ ಉತ್ತರ ದೊರೆಯದ ಪ್ರಶ್ನೆಯಾಗಿದೆ. ಕ್ರಿಕ್ ಬಜ್ ವರದಿಯ ಪ್ರಕಾರ ತಂಡದ ಮತ್ತೋರ್ವ ಅನುಭವಿ ಆಟಗಾರ ಆಲ್‌ರೌಂಡರ್ ಸುನಿಲ್ ನರೈನ್ ಅವರನ್ನು ನಾಯಕನ ಹುದ್ದೆಗೆ ಪರಿಗಣಿಸುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಐಎಲ್‌ಟಿ20 ಲೀಗ್‌ನಲ್ಲಿ ಅಬುದಾಬಿ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿರುವ ಸುನಿಲ್ ನರೈನ್ ಅತ್ಯಂತ ಕಳಪೆ ನಾಯಕತ್ವ ಪ್ರದರ್ಶಿಸಿದ್ದರು. ಈ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ ನರೈನ್ ನೇತೃತ್ವದ ತಂಡ ಕೇವಲ ಒಂದು ಗೆಲುವು ಮಾತ್ರವೇ ಸಾಧಿಸಿತ್ತು. ಹೀಗಾಗಿ ಮ್ಯಾನೇಜ್‌ಮೆಂಟ್‌ನ ನಡೆ ಕುತೂಹಲ ಮೂಡಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಸ್ಕ್ವಾಡ್: ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕೂಲ್ ರಾಯ್, ರಿಂಕು ಸಿಂಗ್, ನಾರಾಯಣ್ ಜಗದೀಸನ್, ವೈಭವ್ ಅರೋರಾ, ಸುಯಾಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಮನ್‌ದೀಪ್ ಸಿಂಗ್, ಲಿಟನ್ ದಾಸ್, ಶಕೀಬ್ ಅಲ್ ಹಸನ್.












Click it and Unblock the Notifications