IPL 2023: ಮುಂದಿನ ಪಂದ್ಯಕ್ಕಾಗಿ ಕೋಲ್ಕತ್ತಾಗೆ ಹೊರಟ ಆರ್‌ಸಿಬಿ: ಪಂದ್ಯ ಯಾವಾಗ, ಎಲ್ಲಿ ಹೆಚ್ಚಿನ ವಿವರ
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಮೊದಲನೇ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಮುಂದಿನ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದ್ದು, ಪಂದ್ಯವನ್ನಾಡಲು ಈಗಾಗಲೇ ಕೋಲ್ಕತ್ತಾಗೆ ಪ್ರಯಾಣ ಮಾಡಿದೆ.
ಸೋಮವಾರ ತಂಡದ ಆಟಗಾರರು ಕೋಲ್ಕತ್ತಾಗೆ ಪ್ರಯಾಣಿಸುವ ಬಗ್ಗೆ ಮಾಹಿತಿಯನ್ನು ಆರ್ ಸಿಬಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಎರಡನೇ ಪಂದ್ಯವನ್ನು ಕೋಲ್ಕತ್ತಾದಲ್ಲಿ ಆಡಿದ ಬಳಿಕ ಮುಂದಿನ ನಾಲ್ಕು ಪಂದ್ಯಗಳನ್ನು ಆರ್ ಸಿಬಿ ತವರಿನಲ್ಲಿ ಆಡಲಿದೆ. ಅತ್ಯುತ್ತಮ ಆರಂಭ ಪಡೆದಿರುವ ಫಾಫ್ ಪಡೆ ಎರಡನೇ ಪಂದ್ಯದಲ್ಲೂ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ.

ಏಪ್ರಿಲ್ 6 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಸಂಜೆ 7.30ಕ್ಕೆ ಈ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೋಲ್ಕತ್ತಾ 16 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದರೆ, ಕಳೆದ ಮೂರು ಆವೃತ್ತಿಯಲ್ಲಿ 6 ಪಂದ್ಯಗಳಲ್ಲಿ ಆರ್ ಸಿಬಿ 4 ಪಂದ್ಯಗಳಲ್ಲಿ ಜಯ ಗಳಿಸಿದೆ, ಕಳೆದ ಆವೃತ್ತಿಯಲ್ಲಿ ಆರ್ ಸಿಬಿ ಮೂರು ವಿಕೆಟ್‌ಗಳ ಜಯ ಗಳಿಸಿತ್ತು.
✈️ Off to the City of Joy to take on the Knight Riders! 🧳#PlayBold #ನಮ್ಮRCB #IPL2023 pic.twitter.com/xkKYGv4DrA
— Royal Challengers Bangalore (@RCBTweets) April 3, 2023
ಎರಡನೇ ಪಂದ್ಯಕ್ಕೆ ರೀಸ್ ಟೋಪ್ಲಿ ಅಲಭ್ಯತೆ
ಎರಡನೇ ಪಂದ್ಯಕ್ಕೆ ಮುನ್ನ ಆರ್ ಸಿಬಿ ತಂಡಕ್ಕೆ ಹಿನ್ನಡೆಯಾಗಿದೆ. ತಂಡದ ಪ್ರಮುಖ ವೇಗದ ಬೌಲರ್ ರೀಸ್ ಟೋಪ್ಲಿ ಮೊದಲನೇ ಪಂದ್ಯದಲ್ಲಿ ಭುಜದ ಗಾಯಕ್ಕೆ ತುತ್ತಾದ ಬಳಿಕ ಎರಡನೇ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಟೋಪ್ಲಿ ಬದಲಾಗಿ ಡೇವಿಡ್ ವಿಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇರುವ ಕಾರಣ ಮತ್ತೊಬ್ಬ ಬೌಲರ್ ಕಣಕ್ಕಿಳಿಯಬಹುದು.
ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ಅನುಜ್ ರಾವತ್, ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬ್ಯಾಟಿಂಗ್ ಪಡೆ ಅಬ್ಬರಿಸಿದರೆ ಮತ್ತೊಂದು ಸುಲಭ ಗೆಲುವಯ ಸಾಧಿಸಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಹಿನ್ನಡೆ
ಕೋಲ್ಕತ್ತಾ ನೈಟ್ ರೈಡರ್ಸ್ ಆಡಿದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 7 ರನ್‌ಗಳ ಸೋಲನುಭವಿಸಿದೆ. ಪ್ರಮುಖ ಆಟಗಾರರು ಲಭ್ಯವಿಲ್ಲವಿರುವುದು ಕೆಕೆಆರ್ ತಂಡಕ್ಕೆ ಹಿನ್ನಡೆಯಾಗಿದೆ. ಶಕೀಬ್ ಅಲ್ ಹಸನ್ ಮತ್ತು ಲಿಟ್ಟನ್ ದಾಸ್ ಏಪ್ರಿಲ್ 8 ರ ನಂತರ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಆದರೆ, ಕೆಲವು ಮೂಲಗಳ ಪ್ರಕಾರ ಶಕೀಬ್ ಅಲ್ ಹಸನ್ ಐಪಿಎಲ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಹಿನ್ನಡೆಯಾಗಲಿದೆ.
ನಿತೀಶ್ ರಾಣಾ ನಾಯಕತ್ವದಲ್ಲಿ ಮೊದಲನೇ ಗೆಲುವು ಪಡೆಯುವ ವಿಶ್ವಾಸದಲ್ಲಿದೆ. ಕೆಕೆಆರ್, ರಿಂಕು ಸಿಂಗ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಆಂಡ್ರೆ ರಸೆಲ್, ರಹ್ಮನುಲ್ಲಾ ಗುರ್ಬಾಜ್ ಮಿಂಚಿದರೆ ಆರ್ ಸಿಬಿ ತಂಡವನ್ನು ಮಣಿಸಲು ಅವಕಾಶ ಇರುತ್ತದೆ. ಕಳೆದ ಪಂದ್ಯದಲ್ಲಿ ಟಿಮ್ ಸೌಥಿ 4 ಓವರ್ ಗಳಲ್ಲಿ 54 ರನ್ ನೀಡಿ ದುಬಾರಿಯಾಗಿದ್ದರು. ಎರಡನೇ ಪಂದ್ಯದಲ್ಲಿ ಅವರ ಬೌಲಿಂಗ್ ಅನ್ನು ಸುಧಾರಿಸಿಕೊಳ್ಳಬೇಕಿದೆ.












Click it and Unblock the Notifications