ಐಪಿಎಲ್ 2023: ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಮುಂದುವರಿಯಲಿದ್ದಾರೆ ಕುಮಾರ್ ಸಂಗಕ್ಕರ
ಇಂಡಿಯನ್ಸ್ ಪ್ರೀಮಿಯರ್ ಲೀಗ್‌ನ ಪ್ರಮುಖ ಫ್ರಾಂಚೈಸಿಯಾಗಿರುವ ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಹಾಗೂ ಮುಖ್ಯ ಕೋಚ್ ಸ್ಥಾನದಲ್ಲಿ ಕುಮಾರ್ ಸಂಗಕ್ಕರ ಮುಂದುವರಿಯಲಿದ್ದಾರೆ. ಟ್ರೇವರ್ ಪೆನ್ನೈ ಸಂಗಕ್ಕರಗೆ ಸಹಾಯಕ ಕೋಚ್ ಆಗಿ ನೆರವಾಗಲಿದ್ದಾರೆ. ಈ ವಿಚಾರವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಸೋಮವಾರ ಅಧಿಕೃತವಾಗಿ ಘೋಷಿಸಿದೆ.
ಇನ್ನು ಶ್ರೀಲಂಕಾದ ಮತ್ತೊಬ್ಬ ದಿಗ್ಗಜ ಲಸಿತ್ ಮಲಿಂಗ ಕೂಡ ರಾಜಸ್ಥಾನ ರಾಯಲ್ಸ್ ತಂಡದ ವೇಗದ ಬೌಲಿಂಗ್ ತರಬೇತುದಾರರಾಗಿ ಮುಂದುವರಿಯುತ್ತಿದ್ದಾರೆ. ಜುಬಿನ್ ಭರುಚಾ ಸ್ರ್ಯಾಟಜಿ, ಡೆವಲಪ್‌ಮೆಂಟ್ ಹಾಗೂ ಪರ್ಫಾರ್ಮೆನ್ಸ್ ನಿರ್ದೇಶಕರಾಗಿ, ಗೈಲ್ಸ್ ಲಿಂಡ್ಸೆ ವಿಶ್ಲೇಷಣೆ ಮತ್ತು ತಂತ್ರಜ್ಞಾನದ ಮುಖ್ಯಸ್ಥರಾಗಿ, ಸಿದ್ಧಾರ್ಥ ಲಾಹಿರಿ ಸಹಾಯಕ ಕೋಚ್ ಮತ್ತು ದಿಶಾಂತ್ ಯಾಗ್ನಿಕ್ ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.

ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೆಡ್ ಫಿಸಿಯೋ ಆಗಿ ಜಾನ್ ಗ್ಲೋಸ್ಟರ್ ತಂಡದ ವೈದ್ಯರಾಗಿ ಡಾ. ರಾಬ್ ಯಂಗ್ ಮತ್ತು ಸ್ಟ್ರೆಂತ್ ಹಾಗೂ ಕಂಡೀಶನಿಂಗ್ ಕೋಚ್ ಆಗಿ ಎಟಿ ರಾಜಮಣಿ ಪ್ರಭು ಹೊಸದಾಗಿ ಸೇರಿಕೊಂಡಿದ್ದಾರೆ. ಇನ್ನು ಮೆಂಟಲ್ ಸ್ಟ್ರೆಂತ್ ಕೋಚ್ ಆಗಿ ಮೋನ್ ಬ್ರೋಕ್‌ಮನ್ ಅವರನ್ನು ನೇಮಿಸಲಾಗಿದ್ದು ನೀಲ್ ಬ್ಯಾರಿ ಅವರನ್ನು ಅವರ ಸಹಾಯಕ ಫಿಸಿಯೋ ಆಗಿ ನೇಮಿಸಲಾಗಿದೆ.
ಐಪಿಎಲ್ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ತಂಡ ರಾಜಸ್ಥಾನ್ ರಾಯಲ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಏಪ್ರಿಲ್ 2ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಈ ಬಾರಿಯ ಟೂರ್ನಿ ಅಭಿಯಾನ ಆರಂಬಿಸಲಿದೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ.
ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸಂಜು ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಜೋಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್ ಸೇರಿದಂತೆ ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಇದರ ಪರಿಣಾಮವಾಗಿ ಆರ್‌ಆರ್ ಕಳೆದ ಬಾರಿಯ ರನ್ನರ್ ಅಪ್ ತಂಡವಾಗಿ ಹೊರಹೊಮ್ಮಿತ್ತು. ಈ ಬಾರಿಯ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಆಡಿ ಮಿಂಚಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಬಾರಿ ಗಾಯದ ಕಾರಣದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕಳೆದ 2022ರ ಸೆಪ್ಟೆಂಬರ್‌ನಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ಹಿನ್ನೆಲೆಯಿಂದಾಗಿ, ಸುಮಾರು ಆರು ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವಿರುವಂತೆ ಮಾಡಿದೆ. ಗಾಯದಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ 26 ವರ್ಷದ ಭಾರತ ತಂಡದ ಬಲಗೈ ವೇಗಿ ಪ್ರಸಿದ್ಧ್ ಕೃಷ್ಣ ಅವರು ಮುಂಬರುವ 2023ರ 16ನೇ ಐಪಿಎಲ್ ಸೀಸನ್‌ನಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಸ್ಕ್ವಾಡ್ ಹೀಗಿದೆ:
ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಧ್ರುವ ಜುರೆಲ್, ರಿಯಾನ್ ಪರಾಗ್, ಟ್ರೆಂಟ್ ಬೌಲ್ಟ್, ಒಬೆದ್ ಮೆಕಾಯ್, ನವದೀಪ್ ಸೈನಿ, ಕುಲದೀಪ್ ಸೇನ್, ಕುಲದೀಪ್ ಯಾದವ್, ಆರ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಕೆಸಿ ಕಾರಿಯಪ್ಪ, ಜೇಸನ್ ಹೋಲ್ಡರ್, ಡೊನೊವನ್ ಫೆರೇರಾ, ಕುನಾಲ್ ರಾಥೋಡ್, ಆಡಮ್ ಝಂಪಾ, ಕೆಎಂ ಆಸಿಫ್, ಮುರುಗನ್ ಅಶ್ವಿನ್, ಆಕಾಶ್ ವಶಿಷ್ಟ್, ಅಬ್ದುಲ್ ಪಿ ಎ, ಜೋ ರೂಟ್.












Click it and Unblock the Notifications