GT vs LSG: ಮುಖಾಮುಖಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ ಈ ತಂಡ!

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 51 ಹಾಗೂ 52 ನೇ ಪಂದ್ಯಗಳು ನಾಳೆ ( ಮೇ 7 ) ನಡೆಯಲಿವೆ. ಮಧ್ಯಾಹ್ನ ನಡೆಯಲಿರುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ.
ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಗುಜರಾತ್ ಟೈಟನ್ಸ್ ನಿನ್ನೆಯಷ್ಟೇ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯವನ್ನು ಸಾಧಿಸಿದ್ದರೆ, ಅತ್ತ ಲಕ್ನೋ ಸೂಪರ್ ಜೈಂಟ್ಸ್ ಆಡಿದ ಕೊನೆಯ ಪಂದ್ಯ ಮಳೆಗೆ ಆಹುತಿಯಾದ ಕಾರಣ ತಂಡ ಒಂದು ಅಂಕ ಪಡೆದುಕೊಂಡಿದೆ.
ಇನ್ನು ಗುಜರಾತ್ ಟೈಟನ್ಸ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 10 ಪಂದ್ಯಗಳನ್ನಾಡಿದ್ದು, 7 ಪಂದ್ಯಗಳಲ್ಲಿ ಗೆದ್ದು ಉಳಿದ 3 ಪಂದ್ಯಗಳಲ್ಲಿ ಮಾತ್ರ ಸೋತು 14 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ 10 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತಿದ್ದು, ಉಳಿದ ಪಂದ್ಯ ಡ್ರಾ ಆದ ಕಾರಣ 11 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಹೀಗೆ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಗುಜರಾತ್ ಟೈಟನ್ಸ್ ತಂಡ ಇನ್ನೆರಡು ಪಂದ್ಯಗಳನ್ನು ಗೆದ್ದರೆ ಪ್ಲೇಆಫ್ ಪ್ರವೇಶ ಮಾಡಲಿರುವ ಕಾರಣ ಈ ಪಂದ್ಯವನ್ನು ಗೆಲ್ಲುವತ್ತ ಕಣ್ಣಿಟ್ಟಿದೆ. ಅತ್ತ ಮೂರನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಸಹ ಪ್ಲೇಆಫ್ ರೇಸ್‌ನಲ್ಲಿದ್ದು, ಈ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಪ್ರವೇಶದ ಆಸೆ ಜೀವಂತವಾಗಿರಿಸಿಕೊಳ್ಳುವ ಉದ್ದೇಶದಲ್ಲಿದೆ.
ಹೀಗೆ ಉತ್ತಮ ಹಂತದಲ್ಲಿರುವ ಈ ಎರಡು ತಂಡಗಳು ಮುಖಾಮುಖಿಯಾಗಲಿರುವ ಈ ಪಂದ್ಯ ಎರಡೂ ತಂಡಗಳು ಪರಸ್ಪರ ಎದುರಾಗುತ್ತಿರುವ ಎರಡನೇ ಪಂದ್ಯವಾಗಿದೆ. ಹೌದು, ಲೀಗ್ ಹಂತದ 30ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಗೆಲುವನ್ನು ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಕಲೆಹಾಕಿತ್ತು. ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತ್ತು. ಈ ಮೂಲಕ ಗುಜರಾತ್ ಟೈಟನ್ಸ್ 7 ರನ್‌ಗಳ ರೋಚಕ ಗೆಲುವನ್ನು ಕಂಡಿತ್ತು.
ಕೇವಲ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾತ್ರವಲ್ಲದೆ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ಗುಜರಾತ್ ಟೈಟನ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೋಲುಣಿಸಿತ್ತು. ಕಳೆದ ಬಾರಿ ಎರಡು ಲೀಗ್ ಪಂದ್ಯಗಳಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದವು.
ಈ ಪೈಕಿ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವನ್ನು ಕಂಡಿದ್ದ ಗುಜರಾತ್ ಟೈಟನ್ಸ್ ಎರಡನೇ ಪಂದ್ಯದಲ್ಲಿ 65 ರನ್‌ಗಳ ಬೃಹತ್ ಗೆಲುವನ್ನು ಕಂಡಿತ್ತು. ಹೀಗೆ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿದ ಎಲ್ಲಾ ಪಂದ್ಯಗಳಲ್ಲಿಯೂ ಸಹ ಗುಜರಾತ್ ಟೈಟನ್ಸ್ ಗೆಲುವನ್ನು ಕಂಡಿದೆ.












Click it and Unblock the Notifications