CSK vs GT Final: ಸಾಯಿ ಸುದರ್ಶನ್ ಅಬ್ಬರ, ಸಹಾ ಅರ್ಧಶತಕ; ಚೆನ್ನೈಗೆ ಕಠಿಣ ಗುರಿ

ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭಗೊಂಡಿದ್ದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇಂದು ( ಮೇ 29 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ ಮೂಲಕ ಅಂತ್ಯಗೊಳ್ಳುತ್ತಿದೆ.
ಎಲ್ಲಾ ಯೋಜನೆಯಂತೆ ನಡೆದಿದ್ದರೆ ನಿನ್ನೆಯೇ ( ಮೇ 28 ) ಈ ಪಂದ್ಯ ನಡೆಯಬೇಕಿತ್ತು. ಆದರೆ ನಿನ್ನೆ ವಿಪರೀತ ಮಳೆ ಬಂದ ಕಾರಣ ಪಂದ್ಯ ರದ್ದಾಗಿ ಇಂದಿನ ರಿಸರ್ವ್ ಡೇಗೆ ಮುಂದೂಡಲ್ಪಟ್ಟಿತ್ತು. ಅದರಂತೆ ಇಂದು ಮಳೆಯ ಅಡ್ಡಿಯಿಲ್ಲದೇ ಪಂದ್ಯ ಆರಂಭವಾಗಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ವೃದ್ಧಿಮಾನ್ ಸಹಾ ಅರ್ಧಶತಕ ಹಾಗೂ ಸಾಯಿ ಸುದರ್ಶನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಕಠಿಣ ಗುರಿಯನ್ನು ನೀಡಿದೆ. ಗುಜರಾತ್ ಟೈಟನ್ಸ್ ತಂಡದ ಪರ ಶುಬ್‌ಮನ್ ಗಿಲ್ ಹಾಗೂ ವೃದ್ಧಿಮಾನ್ ಸಹಾ ಮೊದಲು ಬ್ಯಾಟಿಂಗ್ ಮಾಡಿದರು. ವೃದ್ಧಿಮಾನ್ ಸಹಾ 39 ಎಸೆತಗಳಲ್ಲಿ 54 ರನ್ ಗಳಿಸಿದರೆ, ಶುಬ್‌ಮನ್ ಗಿಲ್ 20 ಎಸೆತಗಳಲ್ಲಿ 39 ರನ್ ಗಳಿಸಿದರು.
ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 96 ರನ್ ಕಲೆಹಾಕಿ ಅಬ್ಬರಿಸಿ ಶತಕ ವಂಚಿತರಾದರು. ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿದರೆ, ರಶೀದ್ ಖಾನ್ ಡಕ್ಔಟ್ ಆದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಮಹೀಶ ಪತಿರಾಣ ಎರಡು ವಿಕೆಟ್ ಪಡೆದರೆ, ದೀಪಕ್ ಚಹಾರ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಎರಡೂ ತಂಡಗಳು ಸಹ ಹಳೆಯ ಪಂದ್ಯದಲ್ಲಿ ಕಣಕ್ಕಿಳಿದ ತಂಡವನ್ನೇ ಕಣಕ್ಕಿಳಿಸಿವೆ. ಈ ಪಂದ್ಯದಲ್ಲಿ ಕಣಕ್ಕಿಳಿದಿರುವ ಆಡುವ ಬಳಗಗಳು ಈ ಕೆಳಕಂಡಂತಿವೆ..
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ ( ವಿಕೆಟ್ ಕೀಪರ್ ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್ ಹಾಗೂ ಮೊಹಮ್ಮದ್ ಶಮಿ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ ಹಾಗೂ ವಿಕೆಟ್ ಕೀಪರ್), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ ಮತ್ತು ಮಹೇಶ್ ತೀಕ್ಷಣ












Click it and Unblock the Notifications