RCB vs RR: ಮತ್ತೆ ಆಪದ್ಬಾಂಧವರಾದ ಮ್ಯಾಕ್ಸಿ - ಫಾಫ್, ಉಳಿದವರು ಕೊಟ್ರು ಕೈ; ರಾಜಸ್ಥಾನ್‌ಗೆ 190 ರನ್ ಗುರಿ
ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 32ನೇ ಪಂದ್ಯದಲ್ಲಿ ಇಂದು ( ಏಪ್ರಿಲ್ 23) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದ್ದು, ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು 190 ರನ್‌ಗಳ ಗುರಿಯನ್ನು ನೀಡಿದೆ. ಇನ್ನು ಈ ಪಂದ್ಯದಲ್ಲಿಯೂ ಸಹ ವಿರಾಟ್ ಕೊಹ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು, ಫಾಫ್ ಡು ಪ್ಲೆಸಿಸ್ ಸಹ ಕಣಕ್ಕಿಳಿದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕ ಆಟಗಾರರಾಗಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಕಣಕ್ಕಿಳಿದರು. ಕೊಹ್ಲಿ ಬೌಲ್ಟ್ ಎಸೆದ ಮೊದಲ ಎಸೆತಕ್ಕೆ ಎಲ್‌ಬಿಡಬ್ಲ್ಯೂ ಆಗುವ ಮೂಲಕ ಗೋಲ್ಡನ್ ಡಕ್‌ಔಟ್ ಆದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಹ್ಬಾಜ್ ಅಹ್ಮದ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ರನ್‌ಗಳಿಗೆ ತನ್ನ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು.
ಹೀಗೆ ಆರಂಭದಲ್ಲಿ ಆಘಾತ ಅನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಸರೆಯಾದದ್ದು ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಫಾಫ್ ಡು ಪ್ಲೆಸಿಸ್ ಸೇರಿ 127 ರನ್‌ಗಳ ಜತೆಯಾಟವಾಡಿ ಕುಸಿದಿದ್ದ ತಂಡಕ್ಕೆ ಆಪದ್ಭಾಂದವರಾದರು. ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 77 ರನ್ ಚಚ್ಚಿದರೆ, ಡು ಪ್ಲೆಸಿಸ್ 39 ಎಸೆತಗಳಲ್ಲಿ 62 ರನ್ ಬಾರಿಸಿದರು.

ಈ ಇಬ್ಬರ ವಿಕೆಟ್ ಪತನಗೊಂಡ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪೆವಿಲಿಯನ್ ಪರೇಡ್ ಶುರುವಾಯಿತು. ಮಹಿಪಾಲ್ ಲೊಮ್ರೊರ್ 8 ರನ್, ಸುಯಶ್ ಪ್ರಭುದೇಸಾಯಿ ಡಕ್ ಔಟ್, ವನಿಂದು ಹಸರಂಗ 6 ರನ್, ದಿನೇಶ್ ಕಾರ್ತಿಕ್ 16 ರನ್, ವಿಜಯ್ ಕುಮಾರ್ ವೈಶಾಖ್ ಡಕ್ ಔಟ್, ಡೇವಿಡ್ ವಿಲ್ಲೆ ಅಜೇಯ 4 ಹಾಗೂ ಮೊಹಮ್ಮದ್ ಸಿರಾಜ್ ಅಜೇಯ 1 ರನ್ ಗಳಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಟ್ರೆಂಟ್ ಬೌಲ್ಟ್ ಹಾಗೂ ಸಂದೀಪ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ ಹಾಗೂ ಯುಜ್ವೇಂದ್ರ ಚಾಹಲ್ ತಲಾ ಒಂದೊಂದು ವಿಕೆಟ್ ಪಡೆದರು.
ಆಡುವ ಬಳಗಗಳು:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ವಿಜಯಕುಮಾರ್ ವೈಶಾಕ್
ರಾಜಸ್ಥಾನ್ ರಾಯಲ್ಸ್ ಆಡುವ ಬಳಗ: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ ಹಾಗೂ ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್












Click it and Unblock the Notifications