ಧಾರವಾಡ; ಅ. 15ರಿಂದ ಅಂತಾರಾಷ್ಟ್ರೀಯ ಲಾನ್ ಟೆನಿಸ್ ಟೂರ್ನಿಮೆಂಟ್
ಬೆಂಗಳೂರು, ಅಕ್ಟೋಬರ್ 03; ಧಾರವಾಡದಲ್ಲಿ ಅಂತಾರಾಷ್ಟ್ರೀಯ ಲಾನ್ ಟೆನಿಸ್ ಟೂರ್ನಿಮೆಂಟ್ ಅಕ್ಟೋಬರ್ 15 ರಿಂದ 22ರ ತನಕ ನಡೆಯಲಿದೆ. ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಈ ಪಂದ್ಯಾವಳಿಯ ಆತಿಥ್ಯ ವಹಿಸಿದೆ.
ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ಅಧ್ಯಕ್ಷ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ನಗರದ ಜಿಲ್ಲಾ ಲಾನ್ ಟೆನಿಸ್ ಕ್ರೀಡಾಂಗಣದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಟೂರ್ನಿಮೆಂಟ್ ಕುರಿತು ಮಾಹಿತಿ ನೀಡಿದ್ದಾರೆ. ಧಾರವಾಡ ಜಿಲ್ಲಾ ಲಾನ್ ಟೆನಿಸ್ ಕೋರ್ಟ್, ಬ್ರಿಟಿಷ್ ಅಧಿಕಾರಿಗಳ ಅವಧಿಯಿಂದಲೂ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. 17 ವರ್ಷಗಳ ನಂತರ ಧಾರವಾಡದಲ್ಲಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಲಾನ್ ಟೆನಿಸ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ.

"ಅಕ್ಟೋಬರ್ 15 ರಿಂದ 22 ರ ತನಕ ಧಾರವಾಡದಲ್ಲಿ ಅಂತಾರಾಷ್ಟ್ರೀಯ ಲಾನ್ ಟೆನಿಸ್ ಟೂರ್ನಿಮೆಂಟ್ ನಡೆಯಲಿದ್ದು, ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಈ ಪಂದ್ಯಾವಳಿಯ ಆತಿಥ್ಯ ನೀಡಲಿದೆ. ಪಂದ್ಯ ವಿಕ್ಷೀಸಿ, ಪ್ರೇರೆಣೆಗಾಗಿ ಉತ್ತರ ಕರ್ನಾಟಕದ ಯುವ ಕ್ರೀಡಾ ಪ್ರತಿಭೆಗಳಿಗೆ ಇದೊಂದು ಉತ್ತಮ ಅವಕಾಶವಾಗಲಿದೆ" ಎಂದು ಗುರುದತ್ತ ಹೆಗಡೆ ಹೇಳಿದರು.
ಸೋಮವಾರ ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ಕ್ರೀಡಾಂಗಣದ ರಾಜ್ಯಾಧ್ಯಕ್ಷ ಪೆವಿಲಿಯನ್‍ದಲ್ಲಿ ನಿರ್ಮಿಸಿರುವ ನೂತನ ಸೌಲಭ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಉದ್ಥಾಟಿಸಿದರು. ಬಳಿಕ ಮಾತನಾಡಿದ ಅವರು, "ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ಆತಿಥ್ಯದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಲಾನ್ ಟೆನಿಸ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸೋಣ. ಈ ಪಂದ್ಯಾವಳಿಗೆ ಸರ್ಕಾರದಿಂದ ಮತ್ತು ತಮ್ಮ ವೈಯಕ್ತಿಕ ನೆರವು ನೀಡಲಾಗುವುದು" ಎಂದರು.
ಟೂರ್ನಿಮೆಂಟ್ ಕುರಿತು ಮಾಹಿತಿ; ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, "ಲಾನ್ ಟೆನಿಸ್ ತರಬೇತಿಗೆ ಉತ್ತಮ ತರಬೇತುದಾರರ ಸೌಲಭ್ಯವಿದೆ. ಮಕ್ಕಳಲ್ಲಿ ಲಾನ್ ಟೆನಿಸ್ ಆಸಕ್ತಿ ಬೆಳಸಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 25 ಸಾವಿರ ಡಾಲರ್ (20 ಲಕ್ಷ ರೂ.) ಮೊತ್ತದ ಪ್ರಶಸ್ತಿ ಹಣ ಈ ಪಂದ್ಯಾವಳಿಯಲ್ಲಿ ಸಿಗಲಿದೆ" ಎಂದು ಹೇಳಿದರು.
"ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಯುವ ಸಮಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಉಚಿತ ಪ್ರವೇಶ ನೀಡಲಾಗುವುದು. ಕ್ರೀಡಾ ಪರಿಕರಗಳ ಮಾರಾಟ ಮತ್ತು ಮಾಹಿತಿಗಾಗಿ ತೆರೆಯುವ ಮಳಿಗೆಗಳಿಗೆ ಅವಕಾಶ ನೀಡಲಾಗುವುದು. ಸ್ಥಳೀಯ ಹೊಟೇಲ್ ಉದ್ಯಮ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರೋತ್ಸಾಹಿಸಲಾಗುತ್ತದೆ" ಎಂದು ತಿಳಿಸಿದರು.
"ಅಂತಾರಾಷ್ಟ್ರೀಯ ಲಾನ್ ಟೆನಿಸ್ ಪಂದ್ಯಾವಳಿ ಹಿನ್ನಲೆಯಲ್ಲಿ ಧಾರವಾಡ ಲಾನ್ ಟೆನಿಸ್ ಸಂಸ್ಥೆಯ ಸದಸ್ಯತ್ವ ಶುಲ್ಕದಲ್ಲಿ ಶೇ.25 ರಷ್ಟು ವಿನಾಯಿತಿ ನೀಡಿದೆ. ಈ ಮೂಲಕ ಆಸಕ್ತರಿಗೆ ಸದಸ್ಯತ್ವ ಪಡೆಯಲು ಸೀಮಿತ ಅವಧಿಯ ಅವಕಾಶ ನೀಡಲಾಗಿದೆ. ಈಗಾಗಲೇ ಸುಮಾರು 100 ಜನ ಸಂಸ್ಥೆಯ ಸದಸ್ಯರಾಗಿದ್ದು, ಆಸಕ್ತರಿಗೆ, ಯುವಕರಿಗೆ ಪ್ರೋತ್ಸಾಹಿಸಲು ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
"ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ಕ್ರೀಡಾಂಗಣವು ಕರ್ನಾಟಕ ರಾಜ್ಯದ ಮೊದಲ ಪರಿಸರ ಸ್ನೇಹಿ ಹಸಿರು ಕ್ರೀಡಾಂಗಣವಾಗಿದೆ. ಕ್ರೀಡಾಂಗಣದ ಎಲ್ಲ ಕೋರ್ಟ್‌ಗಳು ಹಸಿರಿನಿಂದ ಕೂಡಿದ್ದು, ನಿರಂತರವಾಗಿ ಸೋಲಾರ ಬೆಳಕು ಪಡೆಯುತ್ತಿವೆ. ಟೆನಿಸ್ ಕೋರ್ಟ್‍ಗಳು, ಪ್ಲಡ್‍ಲೈಟ್, ಕಚೇರಿ, ಕ್ರೀಡಾಂಗಣ ಎಲ್ಲವೂ ಸೋಲಾರ್ ಬೆಳಕು, ಶಕ್ತಿಯಿಂದ ನಡೆಯುತ್ತಿವೆ. ಟೆನಿಸ್ ಸಂಸ್ಥೆಯ ಕರೆಂಟ್ ಬಿಲ್ ಯಾವಾಗಲೂ ಶೂನ್ಯವಾಗಿರುತ್ತದೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಚಿವ ಸಂತೋಷ್ ಲಾಡ್, 'ಧಾರವಾಡ ಮಹಾನಗರವು ಶೈಕ್ಷಣಿಕ ಕಾಶಿಯೊಂದಿಗೆ ಕ್ರೀಡಾಕ್ಷೇತ್ರದ ಪ್ರತಿಭಾವಂತರಿಗೆ ಉತ್ತಮ ಸೌಲಭ್ಯಗಳನ್ನು ನೀಡುವ ನೆಲೆಯಾಗಿದೆ. ಇಲ್ಲಿ ವಿದ್ಯಾದಾನದೊಂದಿಗೆ ವಿವಿಧ ಕ್ರೀಡೆಗಳನ್ನು ಮಕ್ಕಳಿಗೆ, ಆಸಕ್ತರಿಗೆ ಕಲಿಸಲಾಗುತ್ತಿದೆ. ಇಂತಹ ತರಬೇತಿ ಸಂಸ್ಥೆಗಳಲ್ಲಿ ಲಾನ್ ಟೆನಿಸ್ ಸಂಸ್ಥೆಯು ಒಂದಾಗಿದೆ. ಈಗಾಗಲೇ ಒಂದೆರಡು ಸಲ ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳನ್ನು ಆಯೋಜಿಸಿದ್ದ ಅನುಭವ ಇರುವ ಈ ಸಂಸ್ಥೆಗೆ 17 ವರ್ಷಗಳ ನಂತರ ಮತ್ತೆ ಅಂತರಾಷ್ಟ್ರೀಯ ಮಟ್ಟದ ಲಾನ್ ಟೆನಿಸ್ ಪಂದ್ಯಾವಳಿಯನ್ನು ಆಯೋಜಿಸುವ ಸುವರ್ಣ ಅವಕಾಶ ಸಿಕ್ಕಿದೆ" ಎಂದು ಹೇಳಿದ್ದಾರೆ.












Click it and Unblock the Notifications