WTC Final : ಪಂದ್ಯಕ್ಕೆ ಒಂದು ದಿನ ಮೊದಲೇ ಭಾರತಕ್ಕೆ ಆಘಾತ: ಕೈಬೆರಳಿಗೆ ಗಾಯ ಮಾಡಿಕೊಂಡ ರೋಹಿತ್ ಶರ್ಮಾ
ಭಾರತ ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೂನ್ 7ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪಂದ್ಯಕ್ಕಾಗಿ ಕೊನೆ ಹಂತದ ಅಭ್ಯಾಸ ಮಾಡುತ್ತಿವೆ. ಪಂದ್ಯಕ್ಕೆ ಒಂದು ದಿನ ಇದ್ದಂತೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೈಬೆರಳಿಗೆ ಗಾಯವಾಗಿರುವು ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಅವರ ಎಡಗೈ ಹೆಬ್ಬೆರಳಿಗೆ ಪೆಟ್ಟಾಗಿದೆ. ಬೆರಳಿಗೆ ಗಾಯವಾಗುತ್ತಿದ್ದಂತೆ ಅವರು ಫಿಸಿಯೋ ಅವರನನ್ನು ಸಂಪರ್ಕಿಸ ಚರ್ಚೆ ಮಾಡಿದರು. ರೋಹಿತ್ ನಂತರ ನೆಟ್ಸ್‌ಗೆ ವಾಪಸಾದರು, ಅವರು ಅಭ್ಯಾಸ ಮಾಡಲಿಲ್ಲ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆ ಚರ್ಚೆ ನಡೆಸಿದ ನಂತರ ಮೈದಾನದಿಂದ ಹೊರನಡೆದರು.

ರೋಹಿತ್ ಶರ್ಮಾ ಅವರಿಗೆ ಆಗಿರುವ ಗಾಯದ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಐಚ್ಛಿಕ ಅಭ್ಯಾಸದ ಅವಧಿಯಲ್ಲಿ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಮತ್ತು ಪ್ರಮುಖ ಆಟಗಾರರು ಅಭ್ಯಾಸವನ್ನು ತಪ್ಪಿಸಿಕೊಂಡರು. ಆದರೆ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ಉಮೇಶ್ ಯಾದವ್ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು. ಅಂತಿಮ ಅಭ್ಯಾಸದ ಅವಧಿಯಲ್ಲಿ ರವಿಚಂದ್ರನ್ ಅಶ್ವಿನ್ ಹೆಚ್ಚು ಸಮಯ ಬ್ಯಾಟಿಂಗ್ ಅಭ್ಯಾಸ ಮಾಡಿದರು.
ಭಾರತಕ್ಕೆ ಕಾಡುತ್ತಿದೆ ಆಟಗಾರರ ಗಾಯದ ಸಮಸ್ಯೆ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಮುನ್ನ ಭಾರತ ತಂಡಕ್ಕೆ ಆಟಗಾರರ ಗಾಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ಈಗ ರೋಹಿತ್ ಶರ್ಮಾ ಗಾಯಗೊಂಡಿರುವುದು ತಂಡದ ಆತಂಕಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಕೂಡ ಗಾಯದ ಕಾರಣ ಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ.
2013ರ ಬಳಿಕ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ, 2021ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೋಲುವ ಮೂಲಕ ಕಪ್ ಗೆಲ್ಲುವುದನ್ನು ತಪ್ಪಿಸಿಕೊಂಡಿತ್ತು. ಈ ಬಾರಿಯಾದರೂ ಫೈನಲ್ ಪಂದ್ಯದಲ್ಲಿ ಗೆದ್ದು ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಳ್ಳುವ ವಿಶ್ವಾಸದಲ್ಲಿದೆ ಭಾರತ ತಂಡ.
ಜೂನ್ 7ರಂದು ಭಾರತದ ಕಾಲಮಾನ ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ. ಉಭಯ ತಂಡಗಳು ಮಹಾ ಕದನಕ್ಕೆ ಸಜ್ಜಾಗಿದ್ದು, ಪ್ರತಿಷ್ಟಿತ ಪ್ರಶಸ್ತಿಗಾಗಿ ಸೆಣೆಸಲಿವೆ.












Click it and Unblock the Notifications