Olympics Hockey: ಕಂಚಿನ ಪದಕಕ್ಕಾಗಿ ಭಾರತ, ಸ್ಪೇನ್ ಫೈಟ್: ಏನು ಹೇಳುತ್ತೇ ಅಂಕಿ ಅಂಶ
ಒಲಿಂಪಿಕ್ಸ್ ಹಾಕಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೋಲು ಕಂಡು ನೋವು ಅನುಭವಿಸಿರುವ ಭಾರತ, ಗುರುವಾರ ಕಂಚಿನ ಪದಕಕ್ಕಾಗಿ ಅಂಗಳ ಪ್ರವೇಶಿಸಲಿದ್ದು, ಹರ್ಮನ್ ಪ್ರೀತ್ ಸಿಂಗ್ ಪಡೆ ಸ್ಪೇನ್ ವಿರುದ್ಧ ಸೆಣಸಾಡಲಿದೆ. ಉಭಯ ತಂಡಗಳು ಬಲಾಢ್ಯವಾಗಿದ್ದು, ಭಾರತ ಪದಕ ಗೆಲ್ಲುವ ಫೆವರೀಟ್ ಎಂದು ಹೇಳಲಾಗುತ್ತಿದೆ.
ಸೆಮಿಫೈನಲ್‌ನ ಪಂದ್ಯದಲ್ಲಿ ಸೋತ ತಂಡಗಳೆರಡೂ ಈ ಪಂದ್ಯದಲ್ಲಿ ಮೂರನೇ ಸ್ಥಾನಕ್ಕಾಗಿ ಕಾದಾಟ ನಡೆಸಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್ 0-4 ಗೋಲುಗಳ ಅಂತರದಿಂದ ನೆದರ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 2-3 ಗೋಲುಗಳ ಅಂತರದಿಂದ ಜರ್ಮನಿ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಇಂದು ಸ್ಪೇನ್ ಹಾಗೂ ಭಾರತ ಕಂಚಿನ ಪಂದ್ಯದಲ್ಲಿ ಅಂಗಳ ಪ್ರವೇಶಿಸಲಿವೆ.

ಕಂಚಿನ ಮೇಲೆ ಕಣ್ಣು
ಲೀಗ್ ಹಂತ ಹಾಗೂ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೊಗಸಾದ ಪ್ರದರ್ಶನ ನೀಡಿದ್ದ ಭಾರತ ಸೆಮಿಫೈನಲ್‌ನಲ್ಲಿ ಗೆಲ್ಲುವ ಆಸೆಯನ್ನು ಹೊಂದಿತ್ತು. ಆದರೆ ಪಂದ್ಯದಲ್ಲಿ ಮಾಡಿದ ಕೆಲವು ತಪ್ಪುಗಳಿಂದಾಗಿ ಫೈನಲ್ ಪ್ರವೇಶಿಸುವ ಆಸೆಯನ್ನು ಕೈ ಬಿಟ್ಟಿತು. ಈಗ ಕಂಚಿಗಾಗಿ ಹೋರಾಟ ನಡೆಸಲಿದೆ. ಟೊಕಿಯೋ ಒಲಿಂಪಿಕ್ಸ್‌ನಲ್ಲೂ ಕಂಚಿನ ಸಾಧನೆ ಮಾಡಿದ್ದ ಭಾರತ ಮತ್ತೊಮ್ಮೆ ಪೋಡಿಯೊಂ ಹತ್ತುವ ಕನಸು ಕಾಣುತ್ತಿದೆ.
ಪೋಡಿಯಂ ಹತ್ತುವ ಆಸೆ
ಭಾರತ ಹಾಗೂ ಸ್ಪೇನ್ ತಂಡಗಳು ಈಗಾಗಲೇ ಹಲವು ಭಾರೀ ಮುಖಾಮುಖಿ ಆಗಿವೆ. ಆದರೆ ಗುರುವಾರ ನಡೆಯುವ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಹರ್ಮನ್ ಪ್ರೀತ್ ಸಿಂಗ್ ಬಳಗ ಮತ್ತೊಮ್ಮೆ ಇತಿಹಾಸ ನಿರ್ಮಿಸುವ ಕನಸಿನಲ್ಲಿದೆ. ಒಲಿಂಪಿಕ್ಸ್‌ನಲ್ಲಿ ಹಾಕಿ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿದೆ. ಈಗಾಗಲೇ ಭಾರತ 8 ಚಿನ್ನ, 1 ಬೆಳ್ಳಿ, ಮೂರು ಬಾರಿ ಕಂಚಿಗೆ ಮುತ್ತಿಟ್ಟಿದೆ. ಈಗ ನಾಲ್ಕನೇ ಬಾರಿಗೆ ಕಂಚು ಪಡೆಯುವ ಆಸೆಯನ್ನು ಕಾಣುತ್ತಿದೆ.
ಏನು ಹೇಳುತ್ತದೆ ಅಂಕಿ ಅಂಶ?
ಉಭಯ ತಂಡಗಳ ನಡುವಣ ಹಿಂದಿನ ಐದು ಪಂದ್ಯಗಳ ಲೆಕ್ಕಾಚಾರವನ್ನು ನೋಡುವುದಾದರೆ, ಭಾರತ 4 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಸ್ಪೇನ್ ಒಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ, ಸ್ಪೇನ್ ತಂಡಗಳು ಒಟ್ಟು 10 ಬಾರಿ ಮುಖಾಮುಖಿ ಆಗಿದ್ದು, ಬ್ಲ್ಯೂ ಬಾಯ್ಸ್ 7 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಸ್ಪೇನ್ 1 ಪಂದ್ಯ ಗೆದ್ದಿದೆ. 2 ಪಂದ್ಯ ಡ್ರಾ ಆಗಿವೆ.

ಒಟ್ಟಾರೆ ಭಾರತ, ಸ್ಪೇನ್ ತಂಡಗಳು 71 ಬಾರಿ ಮುಖಾಮುಖಿ ಆಗಿದ್ದು, ಟೀಮ್ ಇಂಡಿಯಾ 31, ಸ್ಪೇನ್ 26 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 14 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿವೆ. ಭಾರತದ ಪರ ಒಟ್ಟು 142 ಗೋಲುಗಳು ದಾಖಲಾಗಿದ್ದು, ಸ್ಪೇನ್ 133 ಗೋಲುಗಳನ್ನು ಬಾರಿಸಿದೆ.
ಅಮಿತ್ ರೋಹಿದಾಸ್ ಬಲ
ಭಾರತದ ಸ್ಟಾರ್ ರಕ್ಷಣಾ ಆಟಗಾರ ಅಮಿತ್ ರೋಹಿದಾಸ್ ಇಂದು ಕಣಕ್ಕೆ ಇಳಿಯಲಿದ್ದಾರೆ. ಇವರ ಆಗಮನದಿಂದ ತಂಡಕ್ಕೆ ಬೂಸ್ಟ್ ಸಿಕ್ಕಂತೆ ಆಗಲಿದೆ. ಇವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ರೆಡ್ ಕಾರ್ಡ್ ಪಡೆದಿದ್ದರು. ಹೀಗಾಗಿ ಆ ಪಂದ್ಯದಲ್ಲಿ ಭಾರತ 10 ಆಟಗಾರರಿಂದ ಆಡಬೇಕಾಯಿತು. ಅಲ್ಲದೆ ಸೆಮಿಫೈನಲ್ ಪಂದ್ಯದಲ್ಲಿ ಇವರು ಕಣಕ್ಕೆ ಇಳಿದಿರಲಿಲ್ಲ. ಹೀಗಾಗಿ ಕಂಚಿನ ಪದಕದ ಪಂದ್ಯದಲ್ಲಿ ಇವರು ಅಂಗಳಕ್ಕೆ ಇಳಿಯಲಿದ್ದಾರೆ.
ನೇರ ಪ್ರಸಾರ: ಜಿಯೋ ಸಿನೆಮಾ, ಸ್ಪೋರ್ಟ್ಸ್ 18
ಪಂದ್ಯದ ಸಮಯ: ಸಂಜೆ 5.30ಕ್ಕೆ












Click it and Unblock the Notifications