ಟಿ20 ವಿಶ್ವಕಪ್ ಕಪ್ ಗೆದ್ದರೂ ತವರಿಗೆ ಮರಳದ ಟೀಮ್ ಇಂಡಿಯಾ: ಇಲ್ಲಿದೆ ವಿವರ
ಟೀಮ್ ಇಂಡಿಯಾ ಸದ್ಯ ಎಂಜಾಯ್ ಮೂಡ್‌ನಲ್ಲಿದೆ. ಟಿ20 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ರೋಹಿತ್ ಪಡೆ ಜಯದ ಯತ್ರೆ ಬಾರ್ಬಡೋಸ್‌ನಲ್ಲಿ ಕೊನೆಗೊಂಡಿದೆ. ಬಹು ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲದ ಬರವನ್ನು ಟೀಮ್ ಇಂಡಿಯಾ ಕೊನೆಗೂ ಈಡೇರಿಸಿದೆ. ಈ ಗೆಲುವಿನ ಸಂಭ್ರಮಾಚರಣೆ ಈಡೀ ದೇಶದಲ್ಲಿ ನಡೆಯುತ್ತಿದೆ.
ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ, ರೋಹಿತ್ ಬಾಯ್ಸ್ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದರು. ಮೊದಲು ಬ್ಯಾಟ್ ಮಾಡಿದ ಬ್ಲ್ಯೂ ಬಾಯ್ಸ್ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 176 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 169 ರನ್ ಕಲೆ ಹಾಕಿ ಅಬ್ಬರಿಸಿತು. ಈ ಮೂಲಕ 2007ರ ಬಳಿಕ ಎರಡನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಎಂಜಾಯ್ ಮೂಡ್‌ನಲ್ಲಿ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಸದ್ಯ ಬಾರ್ಬಡೋಸ್‌ನಲ್ಲಿ ಫುಲ್ ಗೆಲುವಿನ ಜೋಶ್‌ನಲ್ಲಿದೆ. ಟೀಮ್ ಇಂಡಿಯಾ ತವರಿಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಟೀಮ್ ಇಂಡಿಯಾ ಬುಧವಾರ ಭಾರತಕ್ಕೆ ಮರಳ ಬೇಕಿತ್ತು.
ಸದ್ಯ ಭಾರತ ತಂಡ ಬಾರ್ಬಡೋಸ್‌ನಲ್ಲಿದೆ. ಜೂನ್ 30 ಅನ್ನು ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನಾಗಿ ಇರಿಸಲಾಗಿತ್ತು. ನಿಗದಿತ ವೇಳಾಪಟ್ಟಿಯ ಪ್ರಕಾರ, ಭಾರತ ತಂಡವು ಜುಲೈ 1 ರಂದು ಬಾರ್ಬಡೋಸ್‌ನಿಂದ ನ್ಯೂಯಾರ್ಕ್‌ಗೆ ಮತ್ತು ನಂತರ ನ್ಯೂಯಾರ್ಕ್‌ನಿಂದ ದುಬೈ ಮೂಲಕ ಭಾರತಕ್ಕೆ ಮರಳಬೇಕಿತ್ತು. ಆದರೆ ಇದೀಗ ಭಾರತ ತಂಡವು ಬಾರ್ಬಡೋಸ್‌ನಿಂದ ನೇರವಾಗಿ ಚಾರ್ಟರ್ ಪ್ಲೇನ್ ಮೂಲಕ ನವದೆಹಲಿಗೆ ಹಾರಲಿದೆ ಎಂಬ ಸುದ್ದಿ ಬರುತ್ತಿದೆ.

ಭಾರೀ ಬಿರುಗಾಳಿ, ಚಂಡಮಾರುತ
ಬಾರ್ಬಡೋಸ್‌ನಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಟೀಂ ಇಂಡಿಯಾ ತವರಿಗೆ ಮರಳಲು ಕಷ್ಟವಾಗುತ್ತಿದೆ. ಬಾರ್ಬಡೋಸ್‌ನಲ್ಲಿ ಕೆಲವು ಸಮಯದಿಂದ ಕೆಟ್ಟ ಹವಾಮಾನ ಇದ್ದು, ಅಲ್ಲಿನ ಸರ್ಕಾರವು ಅತ್ಯಂತ ಅಪಾಯಕಾರಿ ಚಂಡಮಾರುತದ ಎಚ್ಚರಿಕೆಯನ್ನು ನೀಡಿದೆ. ಈ ಕಾರಣದಿಂದಾಗಿ, ಬಿಸಿಸಿಐ ತಂಡವು ತವರಿಗೆ ಮರಳುವ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದ್ದು, ಬೇರೆ ಆಯ್ಕೆಗಳನ್ನು ಪರಿಗಣಿಸುತ್ತಿದೆ.
ಇದೀಗ ಚಂಡಮಾರುತದ ಎಚ್ಚರಿಕೆ ನೀಡಿದ ಬಳಿಕ ಟೀಂ ಇಂಡಿಯಾ ಇನ್ನೂ ಒಂದು ದಿನ ಬ್ರಿಡ್ಜ್‌ಟೌನ್‌ನಲ್ಲಿಯೇ ಇರಬೇಕಾಗುತ್ತದೆ. ಬಿಸಿಸಿಐ ಈಗ ಪರ್ಯಾಯ ಯೋಜನೆಗಳನ್ನು ಮಾಡಲು ಯೋಚಿಸುತ್ತಿದೆ. ಬಿಸಿಸಿಐ ಈಗ ನೇರವಾಗಿ ಭಾರತಕ್ಕೆ ಮರಳಲು ಅಮೆರಿಕದಿಂದ ಚಾರ್ಟರ್ ಪ್ಲೇನ್ ವ್ಯವಸ್ಥೆ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಈ ಪರಿಸ್ಥಿತಿಯಲ್ಲಿ ಭಾರತ ತಂಡ ಮಂಗಳವಾರ ಸಂಜೆ ಅಥವಾ ತಡರಾತ್ರಿಯೊಳಗೆ ಭಾರತ ತಲುಪಬಹುದು. ಆದಾಗ್ಯೂ, ತಂಡದ ಸಹಾಯಕ ಸಿಬ್ಬಂದಿ ಮತ್ತು ಇತರರು ನ್ಯೂಯಾರ್ಕ್ ಮತ್ತು ದುಬೈ ಮೂಲಕ ಭಾರತಕ್ಕೆ ಮರಳುತ್ತಾರೆ. ಜುಲೈ 3ರ ಮಧ್ಯಾಹ್ನದ ವೇಳೆಗೆ ಅವರು ಭಾರತಕ್ಕೆ ಮರಳಬಹುದು.
ಚಂಡಮಾರುತದ ಗಾಳಿಯ ವೇಗ 170 ರಿಂದ 200 ಕಿಲೋಮೀಟರ್ ಆಗುವ ನಿರೀಕ್ಷೆಯಿದೆ, ಇಂತಹ ಪರಿಸ್ಥಿತಿಯಲ್ಲಿ ಜೂನ್ 30 ರಂದು ರಾತ್ರಿ 8 ಗಂಟೆಯ ನಂತರ ಬ್ರಿಡ್ಜ್‌ಟೌನ್ ವಿಮಾನ ನಿಲ್ದಾಣವನ್ನು ಸಹ ಮುಚ್ಚಿದೆ. ಸದ್ಯ ಟೀಮ್ ಇಂಡಿಯಾ ಬ್ರಿಡ್ಜ್‌ಟೌನ್‌ನ ಹೊಟೇಲ್‌ನಲ್ಲಿಯೇ ವಾಸ್ತವ್ಯ ಹೂಡಿದ್ದು, ಸಂಭ್ರಮಾಚರಣೆಯಲ್ಲಿ ತೇಲುತ್ತಿದೆ.












Click it and Unblock the Notifications