ಐಸಿಸಿ ವಿಶ್ವಕಪ್: ಭಾರತ ತಂಡ ಮತ್ತೊಂದು ಸೇಡಿಗೆ ಸಜ್ಜಾಗಬೇಕಿದೆ, ಆಸ್ಟ್ರೇಲಿಯಾ ವಿರುದ್ಧ 2003ರ ರಿವೇಂಜ್ ಪಕ್ಕಾ?
ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಮ್ಯಾಚ್ ಆಡೋದು ಯಾರು? ಅನ್ನೋ ವಿಚಾರ ಈಗ ಫೈನಲ್ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಇಂದು 2ನೇ ಸೆಮಿಫೈನಲ್ ಕಾದಾಟದಲ್ಲಿ ಆಸ್ಟ್ರೇಲಿಯಾ ಪಡೆ, ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಆಸಿಸ್ ಟೀಂ ಮತ್ತೊಮ್ಮೆ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಚರಿತ್ರೆ ಬರೆದಿದೆ. ಹಾಗೇ, ಭಾರತ ತಂಡ 2003ರ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿ ನಿಂತಿದೆ.
ಹೌದು, ಅದು 20 ವರ್ಷಗಳ ಹಿಂದಿನ ಘಟನೆ. ಆಗ ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆದಿದ್ದ 2003ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತು. ಆದ್ರೆ ಈ ಫೈನಲ್ ಪಂದ್ಯದಲ್ಲಿ ಬಲಶಾಲಿ ಎದುರಾಳಿಯಾಗಿ ಆಸ್ಟ್ರೇಲಿಯಾ ತಂಡ ಸಿಕ್ಕಿತ್ತು. ಅಂದಿನ ಕಾಲಘಟ್ಟದಲ್ಲಿ ಆಸ್ಟ್ರೇಲಿಯಾ ಟೀಂನ ಸೋಲಿಸುವುದು ಅಂದ್ರೆ ದೊಡ್ಡ ಸಾಧನೆಯಾಗಿತ್ತು. ಹೀಗಿದ್ದಾಗ ಅದೂ ವಿಶ್ವಕಪ್ ಫೈನಲ್ ಅಖಾಡದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡದ ಎದುರು ಹೋರಾಡಬೇಕಿತ್ತು. ಹೀಗಿದ್ದಾಗಲೇ ಭಾರತ ತಂಡಕ್ಕೆ ಎಂತಹ ಸ್ಥಿತಿ ಎದುರಾಗಿತ್ತು ಗೊತ್ತಾ?

ಸೋಲಿಗೆ ಸೇಡು ಬೇಕೆ ಬೇಕಂತೆ!
ಅದು 23 ಮಾರ್ಚ್ 2003, ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯ ಶುರುವಾಗಿತ್ತು. ಹೀಗೆ ಮೊದಲು ಬ್ಯಾಟಿಂಗ್ ಆರಂಭ ಮಾಡಿದ್ದ ಆಸ್ಟ್ರೇಲಿಯಾ ತಂಡ ನೋಡ ನೋಡುತ್ತಲೇ 359 ರನ್ ಚಚ್ಚಿತ್ತು. ಆಸಿಸ್ ಪಡೆಗೆ ಆಗಿನ ಕ್ಯಾಪ್ಟನ್ ರಿಕ್ಕಿ ಪಾಂಟಿಂಗ್ & ಮಾರ್ಟಿನ್ ಬೆನ್ನೆಲುಬಾಗಿ ನಿಂತಿದ್ದರು. 140 ರನ್‌ಗಳ ಭರ್ಜರಿ ಕೊಡುಗೆ ನೀಡಿದ್ದ ರಿಕ್ಕಿ ಪಾಂಟಿಂಗ್, ಆಸ್ಟ್ರೇಲಿಯಾ ತಂಡಕ್ಕೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಮೈದಾನದಲ್ಲಿ ಭರ್ಜರಿ ಜಯ ತಂದುಕೊಟ್ಟರು. ಆದರೆ ಭಾರತ ತಂಡ 125 ರನ್‌ಗಳ ಹೀನಾಯ ಸೋಲು ಕಂಡಿತ್ತು.
ಅಭಿಮಾನಿಗಳಿಗೆ ಕಾಡುತ್ತಿದೆ ಸೋಲಿನ ನೋವು
ಇದೀಗ ಅಂದ್ರೆ 20 ವರ್ಷಗಳ ನಂತರ ಮತ್ತೆ ಭಾರತ & ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಫೈನಲ್‌ನಲ್ಲಿ ಫೈಟ್ ಮಾಡಲಿವೆ. ಹೀಗಾಗಿ ರಿವೇಂಜ್ ಬೇಕೆ ಬೇಕು ಅಂತಿದ್ದಾರೆ ಭಾರತೀಯ ಅಭಿಮಾನಿಗಳು. ಅದರಲ್ಲೂ ಅಂದು ಆಸ್ಟ್ರೇಲಿಯಾ ತಂಡದ ಆಟಗಾರರು ನಡೆದುಕೊಂಡ ರೀತಿ ಬಗ್ಗೆಯೂ ನೋವು ಕಾಡುತ್ತಲೇ ಇದೆ. ಆಗೆಲ್ಲಾ ಆಸ್ಟ್ರೇಲಿಯಾ ಆಟಗಾರರು ಭಾರತದ ಆಟಗಾರರನ್ನು ಬೇಕು ಅಂತಲೇ ಕೆಣಕುವ ಅಭ್ಯಾಸ ಬೆಳೆಸಿಕೊಂಡಿದ್ದರು. ಆದ್ರೆ ಈಗ ಅದು ನಿಂತಿದ್ದರೂ, ಭಾರತದ ಅಂದಿನ ಸೋಲು & ಅದರ ನೋವು ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಕಾಡುತ್ತಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ
ಮತ್ತೊಂದು ಕಡೆ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂದು ರೋಚಕ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡ ಕೇವಲ 212 ರನ್‌ಗೆ ಆಲೌಟ್ ಆಗಿತ್ತು. ಹೀಗೆ 213 ರನ್ ಗುರಿ ಬೆನ್ನುಹತ್ತಿದ್ದ ಆಸ್ಟ್ರೇಲಿಯಾ ತಂಡ, ಆರಂಭದಲ್ಲಿ ಅಬ್ಬರಿಸಿದರೂ ಮಿಡಲ್ ಆರ್ಡರ್ ಕೈಕೊಟ್ಟ ಕಾರಣ ಸೋಲುವ ಭೀತಿ ಎದುರಿಸಿತ್ತು. ಆದ್ರೆ ಕೆಳ ಕ್ರಮಾಂಕದಲ್ಲಿನ ಬಾಲಂಗೋಚಿ ಬೌಲರ್ಸ್ ಕಂ ಬ್ಯಾಟರ್‌ಗಳು ಆಸಿಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಪ್ರಧಾನಿ ಮೋದಿ, ಕಪಿಲ್, ಧೋನಿ ಬರ್ತಾರಾ?
ಒಟ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮತ್ತೊಮ್ಮೆ ಏಕದಿನ ವಿಶ್ವಕಪ್ ಅಖಾಡ ರಂಗೇರಲಿದೆ. 20 ವರ್ಷಗಳ ಹಿಂದೆ ಕಂಡಿದ್ದ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತವು ಕೂಡ ಸಜ್ಜಾಗಿ ನಿಂತಿದೆ. ಈಗಾಗಲೇ ಗುಜರಾತ್‌ನ ಅಹಮದಾಬಾದ್ ಕ್ರೀಡಾಂಗಣ ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದ್ದು, ಕ್ರಿಕೆಟ್ ಲೋಕದ ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಪ್ರಮುಖರು ಪಂದ್ಯ ವೀಕ್ಷಣೆಗೆ ಬರಲಿದ್ದಾರೆ. ಭಾರತಕ್ಕೆ ಎರಡು ವಿಶ್ವಕಪ್ ಗೆದ್ದು ಕೊಟ್ಟ ನಾಯಕರಾದ ಕಪಿಲ್ ದೇವ್ & ಮಹೇಂದ್ರ ಸಿಂಗ್ ಧೋನಿ ಕೂಡ ಫೈನಲ್ ಮ್ಯಾಚ್‌ಗೆ ಬರ್ತಿದ್ದಾರೆ.
ನವೆಂಬರ್ 19ರಂದು 2023ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಗಣ್ಯ ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿದ್ದು, ದೇಶದ ಮುಖ್ಯಸ್ಥರಾದ ಪ್ರಧಾನಿ ಮೋದಿ ಅವರನ್ನೂ ವಿಶೇಷವಾಗಿ ಆಹ್ವಾನಿಸಲಾಗಿದೆ ಅಂತಾ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪಿಎಂ ಮೋದಿ ಅವ್ರು ನವೆಂಬರ್ 19ಕ್ಕೆ ಅಹಮದಾಬಾದ್‌ನ 'ನರೇಂದ್ರ ಮೋದಿ' ಕ್ರೀಡಾಂಗಣಕ್ಕೆ ಬಂದು, ಭಾರತದ ಆಟಗಾರರ ಆಟಕ್ಕೆ ಬೆನ್ನುತಟ್ಟುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಇಡೀ ಜಗತ್ತೇ ನವೆಂಬರ್ 19ರ ಭಾನುವಾರ ಭಾರತದ ಕಡೆಗೆ ಗಮನ ಇಟ್ಟು ಕೂರಲಿದೆ.












Click it and Unblock the Notifications