IND vs USA: ಯುಎಸ್‌ಎ ವಿರುದ್ಧ ಗೆಲುವು; ಎಂಟರ ಘಟ್ಟಕ್ಕೆ ಭಾರತ
ನ್ಯೂಯಾರ್ಕ್‌ನಲ್ಲಿ ನಡೆದ ಯುಎಸ್‌ಎ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅರ್ಷದೀಪ್ ಸಿಂಗ್ ಮೊದಲ ಓವರ್ ನಲ್ಲೇ ಎರಡು ವಿಕೆಟ್ ಪಡೆಯುವ ಮೂಲಕ ಯುಎಸ್‌ಎ ತಂಡಕ್ಕೆ ಆಘಾತ ನೀಡಿದರು.

ಭಾರತದ ಬಿಗಿ ಬೌಲಿಂಗ್ ದಾಳಿ ಎದುರು ಯುಎಸ್‌ಎ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತು. ಸ್ಟೀವನ್ ಟೇಲರ್ 24 ರನ್, ಎನ್‌ಆರ್ ಕುಮಾರ್ 27 ರನ್ ಗಳಿಸಿ ಯುಎಸ್‌ಎ ತಂಡಕ್ಕೆ ಆಸರೆಯಾದರು.
ಭಾರತದ ಪರವಾಗಿ ಅರ್ಷದೀಪ್ ಸಿಂಗ್ 4 ಓವರ್ ಗಳಲ್ಲಿ ಕೇವಲ 9 ರನ್ ನೀಡಿ 4 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ 4 ಓವರ್ ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.
ಸೂರ್ಯ, ದುಬೆ ಆಸರೆ
ಈ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಾಯಕ ರೋಹಿತ್ ಶರ್ಮಾ ಕೂಡ 4 ರನ್ ಗಳಿಸಿ ಔಟಾದಾಗಾ ಭಾರತೀಯ ಪಾಳಯದಲ್ಲಿ ಆತಂಕ ಎದುರಾಗಿತ್ತು.
ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್ ತಾಳ್ಮೆಯ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ರಿಷಬ್ ಪಂತ್ 18 ರನ್ ಗಳಿಸಿ ಔಟಾದಾಗ, ಭಾರತ 39 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತು.
ಬಳಿಕ ಸೂರ್ಯಕುಮಾರ್ ಯಾದವ್‌ಗೆ ಜೊತೆಯಾದ ಶಿವಂ ದುಬೆ ವಿಕೆಟ್ ಬೀಳದಂತೆ ನೋಡಿಕೊಂಡರು. ತಾಳ್ಮೆಯ ಆಟವಾಡಿದ ಈ ಜೋಡಿ ಭಾರತವನ್ನು ಗೆಲುವಿನ ದಡ ಸೇರಿಸಿದತು.
ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದರೆ, ಶಿವಂ ದುಬೆ 35 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು.
ಭಾರತ ಮುಂದಿನ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದ್ದು, ಜೂನ್ 15ರಂದು ಈ ಪಂದ್ಯ ನಡೆಯಲಿದೆ.












Click it and Unblock the Notifications