ಭಾರತ-ಪಾಕ್ ನಡುವೆ ಯುದ್ಧ ಭೀತಿ: ಐಪಿಎಲ್ ಪಂದ್ಯಗಳು ರದ್ದಾಗುತ್ತಾ? ಬಿಸಿಸಿಐ ಸ್ಪಷ್ಟನೆ
ಪೆಹಲ್ಗಾಮ್ ಭಯೋತ್ಪಾದಕ ದಾಳಿ ಮೂಲಕ ಭಾರತವನ್ನು ಕೆಣಕಿದ್ದ ಪಾಕಿಸ್ತಾನಕ್ಕೆ ರಾತ್ರೋರಾತ್ರಿ ಆಪರೇಷನ್ ಸಿಂಧೂರ್ ಮೂಲಕ ಹುಟ್ಟಡಗಿಸಿದೆ. ದಾಳಿಗೆ ಪ್ರತೀಕಾರವಾಗಿ ಪಾಕ್ ಉಗ್ರರ ನೆಲೆಗಳನ್ನು ಉಡೀಸ್ ಮಾಡಿ ರಣರಂಗದಲ್ಲಿ ಭಾರತ ಬಾವುಟ ನೆಟ್ಟಿದೆ. ಇನ್ನು ದಾಳಿಯಿಂದ ಬೆಚ್ಚಿಬಿದ್ದಿರುವ ಪಾಕ್ ಪ್ರತ್ಯುತ್ತರ ನೀಡ್ತೇವೆ ಎಂದು ಹೇಳಿದೆ. ಈ ಹಿನ್ನೆಲೆ ದೇಶದಾದ್ಯಂತ ಹೈಅಲರ್ಟ್ ಕರೆ ನೀಡಲಾಗಿದೆ. ಈ ವಾತಾವರಣದಲ್ಲಿ ಸದ್ಯ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳು ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಬಿಸಿಸಿಐ ಮೂಲಗಳು ಸ್ಪಷ್ಟನೆ ನೀಡಿವೆ.
ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಅನ್ನು ಯಶಸ್ವಿಯಾಗಿ ನಡೆಸಿದ ನಂತರ ಪಾಕ್ ಕೂಡ ಯುದ್ಧಕ್ಕೆ ಸಜ್ಜಾಗಿದೆ. ಈ ಹಿನ್ನೆಲೆ ಭಾರತದಾದ್ಯಂತ ಹೈಅಲರ್ಟ್ ಘೋಷಣೆಯಾಗಿದೆ. ಏಪ್ರಿಲ್ 22ರಂದು ಪೆಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಂತರ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹಾಗಾಗಿ ಈ ಪರಿಸ್ಥಿತಿಯಲ್ಲಿ ಐಪಿಎಲ್ ಪಂದ್ಯಗಳು ರದ್ದಾಗುವ ಸಾಧ್ಯತೆ ಇದೆ ಎಂದು ಚರ್ಚೆಯಾಗಿತ್ತು. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ.

ಮೇ 25ರವರೆಗೆ ನಡೆಯಲಿರುವ ಐಪಿಎಲ್-2025 ಸೀಸನ್ ಎಂದಿನಂತೆ ಮುಂದುವರಿಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಧವಾರ ತಿಳಿಸಿದೆ. ದೇಶದಲ್ಲಿ ಈಗ ಎದುರಾಗಿರುವ ಉದ್ವಿಗ್ನ ಪರಿಸ್ಥಿತಿಗಳು ಐಪಿಎಲ್ ವೇಳಾಪಟ್ಟಿ ಮತ್ತು ಪಂದ್ಯಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದು ನಿಗದಿತ ರೀತಿಯಲ್ಲೇ ನಡೆಯಲಿದೆ ಎಂದು ತಿಳಿಸಿದೆ.
ಐಪಿಎಲ್ ಈ ಹಿಂದೆಯೂ ಅನೇಕ ಸಂದರ್ಭಗಳಿಂದಾಗಿ ಹಲವಾರು ಪಂದ್ಯಗಳ ಮುಂದೂಡಿಕೆ ಹಾಗೂ ಸ್ಥಳ ಬದಲಾವಣೆ ಮಾಡಿವೆ.ಇದು ಭಾರತ ಮತ್ತು ಇಡೀ ಜಗತ್ತನ್ನು ಮನರಂಜಿಸುವ ಕ್ರಿಕೆಟ್ ಪಂದ್ಯಗಳಾದ ಕಾರಣ ಇದನ್ನು ಎಂದಿಗೂ ಸಂಪೂರ್ಣವಾಗಿ ರದ್ದುಗೊಳಿಸಲಿಲ್ಲ. 2009ರಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಈ ಲೀಗ್ ಆಯೋಜಿಸಲಾಯಿತು. 2014ರಲ್ಲೂ ಲೋಕಸಭಾ ಚುನಾವಣೆಯ ಕಾರಣ ಕೆಲ ಪಂದ್ಯಗಳು ಯುಎಇಯಲ್ಲಿ ನಡೆಯಿತು.
2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, ಐಪಿಎಲ್ ಪಂದ್ಯಗಳು ಮುಂದೂಡಲ್ಪಟ್ಟವು. ಕೋವಿಡ್ ಸೋಂಕಿನ ಹರಡುವಿಕೆಯಿಂದಾಗಿ ಪಂದ್ಯಾವಳಿಯನ್ನು ಮತ್ತೊಮ್ಮೆ ಯುಎಇಗೆ ಸ್ಥಳಾಂತರಿಸಲಾಯಿತು. 2021ರಲ್ಲಿ ಮತ್ತೆ ಭಾರತದಲ್ಲೇ ಐಪಿಎಲ್ ಶುರುವಾದರೂ ಕೋವಿಡ್-19 ಸಾಂಕ್ರಾಮಿಕದಿಂದ ಪಂದ್ಯಾವಳಿಯನ್ನು ಮತ್ತೊಮ್ಮೆ ಮುಂದೂಡಿ ಯುಎಇಯಲ್ಲಿ ನಡೆಸಲಾಯಿತು.

ಭಾರತೀಯ ಪಡೆಗಳು ಬಹಾವಲ್ಪುರ್, ಮುರಿಯ್ಕೆ ಮತ್ತು ಸಿಯಾಲ್ಕೋಟ್ ಸೇರಿದಂತೆ ಪಾಕಿಸ್ತಾನದ ನಾಲ್ಕು ಸ್ಥಳಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಿವೆ ಎಂದು ಬಹಿರಂಗಪಡಿಸಿವೆ. ಇತ್ತ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ (ಪಿಒಜೆಕೆ) ಇತರ ಐದು ಗುರಿಗಳನ್ನು ಸಹ ಯಶಸ್ವಿಯಾಗಿ ಹೊಡೆದುರುಳಿಸಿದೆ. ಎಲ್ಲ ಒಂಬತ್ತು ಗುರಿಗಳ ಮೇಲಿನ ದಾಳಿಗಳು ಯಶಸ್ವಿಯಾಗಿವೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಾಯೋಜಿಸುವಲ್ಲಿ ಭಾಗಿಯಾಗಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ನಾಯಕರನ್ನು ಗುರಿಯಾಗಿಸಿ ಭಾರತೀಯ ಪಡೆಗಳು ಈ ದಾಳಿ ನಡೆಸಿವೆ. ಇದಕ್ಕೆ ಪಾಕಿಸ್ತಾನ ಕೂಡ ಪ್ರತಿದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.












Click it and Unblock the Notifications