India vs Australia: ಆಸ್ಟ್ರೇಲಿಯಾ ವಿರುದ್ಧ ಗೆದ್ದರಷ್ಟೇ ಭಾರತದ ಸೆಮಿಫೈನಲ್ ಆಸೆ ಜೀವಂತ
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಇಂದು ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಾಗಿದೆ. ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಸೆಮಿಫೈನಲ್ ತಲುಪಬೇಕಾದರೆ ಇಂದು ಭಾರತ ಗೆಲ್ಲಲೇಬೇಕಿದೆ. ಇಂದು ಭಾರತ ಗೆದ್ದರೂ, ನ್ಯೂಜಿಲೆಂಡ್‌ಗೆ ಕೂಡ ಸೆಮಿಫೈನಲ್ ತಲುಪುವ ಅವಕಾಶ ಇರಲಿದೆ. ರನ್‌ರೇಟ್ ಲೆಕ್ಕಾಚಾರ ಕೂಡ ಮುಖ್ಯಪಾತ್ರ ವಹಿಸಲಿದ್ದು, ಭಾರತ ಗೆಲ್ಲುವುದು ಮಾತ್ರವಲ್ಲ ರನ್‌ರೇಟ್ ಕೂಡ ಹೆಚ್ಚಿಸಿಕೊಳ್ಳಬೇಕಿದೆ.
ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 58 ರನ್‌ಗಳಿಂದ ಸೋತಿದ್ದು ಈಗ ದುಬಾರಿಯಾಗುತ್ತಿದೆ. ಬಳಿಕ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಉತ್ತಮ ಅಂತರದಲ್ಲಿ ಗೆದ್ದ ಭಾರತ ರನ್‌ರೇಟ್ ಕೂಡ ಉತ್ತಮ ಪಡಿಸಿಕೊಂಡಿದೆ. ಆದರೆ ನ್ಯೂಜಿಲೆಂಡ್ ಕೂಡ ಸೆಮಿಫೈನಲ್ ರೇಸ್‌ನಲ್ಲಿದ್ದು, ಭಾರತದ ಅವಕಾಶ ಕಸಿಯುವ ಅಪಾಯ ಕೂಡ ಇದೆ.

ಮಹಿಳಾ ಟಿ20 ವಿಶ್ವಕಪ್ ಎ ಗುಂಪಿನಲ್ಲೊ ಸದ್ಯ ಆಸ್ಟ್ರೇಲಿಯಾ ಆಡಿರುವ ಮೂರು ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತ ಮತ್ತು ನ್ಯೂಜಿಲೆಂಡ್ 4 ಅಂಕಗಳನ್ನು ಪಡೆದಿದ್ದು, ರನ್‌ರೇಟ್ ಉತ್ತಮವಾಗಿರುವ ಕಾರಣ ಭಾರತ 2ನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ 3ನೇ ಸ್ಥಾನದಲ್ಲಿದೆ.
ಲೀಗ್ ಹಂತದಲ್ಲಿ ಭಾರತಕ್ಕೆ ಇದೇ ಕೊನೆಯ ಪಂದ್ಯವಾಗಿದೆ. ಆಸ್ಟ್ರೇಲಿಯಾ ಅಜೇಯವಾಗಿ ಸೆಮಿಫೈನಲ್ ತಲುಪುವ ಲೆಕ್ಕಾಚಾರದಲ್ಲಿದೆ. ಆದರೆ ಭಾರತಕ್ಕೆ ಇಂದು ಗೆಲ್ಲಲೇಬೇಕಾದ ಅನಿವಾರ್ಯತೆ ಇರುವುದರಿಂದ ರೋಚಕ ಹಣಾಹಣಿಯನ್ನು ನಿರೀಕ್ಷೆ ಮಾಡಬಹುದು.
ನ್ಯೂಜಿಲೆಂಡ್ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಒಂದು ವೇಳೆ ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರೆ ಭಾರತ ಸೆಮಿಫೈನಲ್ ತಲುಪುವ ಅವಕಾಶ ಕೈತಪ್ಪಲಿದೆ. ರನ್‌ರೇಟ್ ಇಲ್ಲಿ ಗಣನೆಗೆ ಬರಲಿದೆ, ಆದ್ದರಿಂದಲೇ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವುದರ ಜೊತೆ ರನ್‌ರೇಟ್ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಕೂಡ ಇದೆ.
ಹೇಗಿರಲಿದೆ ಶಾರ್ಜಾ ಪಿಚ್
ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಬೌಂಡರಿಗಲೂ ಚಿಕ್ಕದಾಗಿದ್ದರೂ, ನಿಧಾನಗತಿಯ ಪಿಚ್‌ಗಳು ಬ್ಯಾಟರ್ ಗಳಿಗೆ ಸವಾಲಾಗಿವೆ. ಸ್ಪಿನ್ ಮತ್ತು ಮಧ್ಯಮ ವೇಗಿಗಳಿಗೆ ಪಿಚ್ ಹೆಚ್ಚಿನ ನೆರವು ನೀಡಲಿದೆ. ಟಾಸ್ ಗೆಲ್ಲುವ ತಂಡ ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ದಾಖಲೆಗಳನ್ನು ನೋಡಿದರೆ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳೇ ಹೆಚ್ಚು ಬಾರಿ ಗೆಲುವು ಸಾಧಿಸಿವೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಈವರೆಗೂ 45 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿದ್ದು, 27 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡಗಳಿಗೆ ಪಿಚ್ ನೆರವು ನೀಡಲಿದ್ದು, ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವುದು ಕಠಿಣವಾಗಲಿದೆ.












Click it and Unblock the Notifications