Ind vs Aus: ಶೇನ್ ವ್ಯಾಟ್ಸನ್, ಬೆನ್ ಡಂಕ್ ಅಮೋಘ ಶತಕ: ಭಾರತದ ವಿರುದ್ಧ ಭರ್ಜರಿ ಆಸ್ಟ್ರೇಲಿಯಾಗೆ ಗೆಲುವು
ವಡೋದರಾದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 2025ರ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ಭಾರತ ಮಾಸ್ಟರ್ಸ್ ವಿರುದ್ಧ 95 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯಾವಳಿಯಲ್ಲಿ ಭಾರತ ಮಾಸ್ಟರ್ಸ್ ಮೊದಲ ಸೋಲು ಕಂಡಿದೆ. ಶೇನ್ ವ್ಯಾಟ್ಸನ್ ಮತ್ತು ಬೆನ್ ಡಂಕ್ ಅಮೋಘ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಟಾಸ್ ಗೆದ್ದ ಇಂಡಿಯಾ ಮಾಸ್ಟರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಾಸ್ಟರ್ಸ್ 20 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 269 ರನ್ ಕಲೆಹಾಕಿತು. ಶೇನ್ ವ್ಯಾಟ್ಸನ್ ಮತ್ತು ಬೆನ್ ಡಂಕ್ ಅಮೋಘ ಶತಕ ಗಳಿಸುವ ಮೂಲಕ ಮಿಂಚಿದರು.

ಶಾನ್ ಮಾರ್ಷ್ 15 ಎಸೆತಗಳಲ್ಲಿ 22 ರನ್ ಗಳಿಸಿದರು. ಶೇನ್ ವ್ಯಾಟ್ಸನ್ 52 ಎಸೆತಗಳಲ್ಲಿ 12 ಬೌಂಡರಿ 7 ಸಿಕ್ಸರ್ ಸಹಿತ ಅಜೇಯ 110 ರನ್ ಗಳಿಸಿದರು. ಬೆನ್ ಡಂಕ್ 53 ಎಸೆತಗಳಲ್ಲಿ 12 ಬೌಂಡರಿ 10 ಸಿಕ್ಸರ್ ಸಹಿತ ಅಜೇಯ 132 ರನ್ ಗಳಿಸಿದರು.
ಸಚಿನ್ ಹೋರಾಟ ವ್ಯರ್ಥ
270 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ಮಾಸ್ಟರ್ಸ್ 20 ಓವರ್ ಗಳಲ್ಲಿ 174 ರನ್ ಗಳಿಸಿ ಆಲೌಟ್ ಆಗುವ ಮೂಲಕ 95 ರನ್‌ಗಳ ಸೋಲೊಪ್ಪಿಕೊಂಡಿತು. ಸಚಿನ್ ತೆಂಡೂಲ್ಕರ್ 33 ಎಸೆತಗಳಲ್ಲಿ 64 ರನ್ ಗಳಿಸಿದರು. ಯೂಸುಫ್ ಪಠಾಣ್ 25 ರನ್ ಗಳಿಸಿದರೆ, ಪವನ್ ನೇಗಿ 14 ರನ್ ಗಳಿಸಿದರು. ರಾಹುಲ್ ಶರ್ಮಾ 18 ರನ್ ಗಳಿಸಿ ಔಟಾದರು.
ಕ್ಸೇವಿಯರ್ ಡಾಹರ್ಟಿ 4 ಓವರ್ ಗಳಲ್ಲಿ 25 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆಯುವ ಮೂಲಕ ಭಾರತ ಮಾಸ್ಟರ್ಸ್ ಅನ್ನು ಕಟ್ಟಿಹಾಕಿದರು. ಡೇನಿಯಲ್ ಕ್ರಿಸ್ಟಿಯನ್, ನಾಥನ್ ರಿಯಾರ್ಡನ್, ಬ್ರೈಸ್ ಮೆಕ್‌ಗೈನ್, ಬೆನ್ ಲಾಫಿನ್ ಮತ್ತು ಬೆನ್ ಹಿಲ್ಫಿನಸ್ ತಲಾ ಒಂದು ವಿಕೆಟ್ ಪಡೆದರು.
ಮೊದಲ ಮೂರು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ಮಾಸ್ಟರ್ಸ್ ಇದೇ ಮೊದಲ ಬಾರಿಗೆ ಸೋಲು ಕಂಡಿದೆ. ಭಾರತ ಮುಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಾಸ್ಟರ್ಸ ವಿರುದ್ಧ ಆಡಲಿದ್ದು ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ಯೂಸುಫ್ ಪಠಾಣ್‌ರಂತಹ ಆಟಗಾರರನ್ನು ಮತ್ತೆ ಮೈದಾನದಲ್ಲಿ ನೋಡುವ ಸದಾವಕಾಶ ಅಭಿಮಾನಿಗಳ ಪಾಲಿಗೆ ಸಿಗಲಿದೆ. ಮಾರ್ಚ್ 8ರಂದು ಶನಿವಾರ ಈ ಪಂದ್ಯ ನಡೆಯಲಿದೆ.












Click it and Unblock the Notifications