Ind vs Eng: ಮಾರಕ ಸ್ಪಿನ್ ದಾಳಿ, ಜೈಸ್ವಾಲ್ ಅರ್ಧಶತಕ: ಮೊದಲ ದಿನ ಮೇಲುಗೈ ಸಾಧಿಸಿದ ಭಾರತ
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 246 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ನಂತರ ದಿನಾದಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 119 ರನ್ ಕಲೆ ಹಾಕಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತದ ಸ್ಪಿನ್ ಬೌಲಿಂಗ್ ದಾಳಿ ಎದುರು ಇಂಗ್ಲೆಂಡ್‌ನ ಬಾಜ್‌ಬಾಲ್ ಕ್ರಿಕೆಟ್ ನಡೆಯಲಿಲ್ಲ.

ಆರಂಭಿಕರಾದ ಝಾಕ್ ಕ್ರಾಲಿ 20 ರನ್ ಗಳಿಸಿ ಔಟಾದರೆ, ಬೆನ್ ಡಕೆಟ್ 35 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಒಲಿ ಪೋಪ್ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಜೋ ರೂಟ್ 29 ರನ್, ಜಾನಿ ಬೈರ್ ಸ್ಟೋ 37 ರನ್ ಗಳಿಸಿದರೆ, ನಾಯಕನ ಆಟವಾಡಿದ ಬೆನ್ ಸ್ಟೋಕ್ಸ್ 70 ರನ್ ಗಳಿಸಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಉಳಿದಂತೆ ಬೆನ್ ಫೋಕ್ಸ್ (4), ರೆಹಾನ್ ಅಹಮದ್ (13), ಟಾಮ್ ಹಾರ್ಟ್ಲಿ (23), ಮಾರ್ಕ್ ವುಡ್ 11 ರನ್ ಗಳಿಸಿದರು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 246 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಪರ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಮೂರು ವಿಕೆಟ್ ಪಡೆದುಕೊಂಡರೆ. ಅಕ್ಷರ್ ಪಟೇಲ್ ಮತ್ತು ಬುಮ್ರಾ ತಲಾ ಎರಡು ವಿಕೆಟ್ ಪಡೆದರು.
ಜೈಸ್ವಾಲ್ 'ಯಶಸ್ವಿ' ಅರ್ಧಶತಕ
ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ ಜೈಸ್ವಾಲ್ ಅವರ ಅರ್ಧಶತಕದ ನೆರವಿನಿಂದ ಗುರುವಾರ ಆಟದ ಅಂತ್ಯಕ್ಕೆ 1 ವಿಕೆಟ್‌ಗೆ 119 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ 24 ರನ್ ಗಳಿಸಿದರೆ. ಶುಭಮನ್ ಗಿಲ್ ಅಜೇಯ 14 ರನ್ ಗಳಿಸಿದ್ದು ವಿಕೆಟ್ ಕಾಯ್ದುಕೊಂಡಿದ್ದಾರೆ. 70 ಎಸೆತಗಳಲ್ಲಿ 9 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 76 ರನ್ ಗಳಿಸಿರುವ ಯಶಸ್ವಿ ಜೈಸ್ವಾಲ್ ಎರಡನೇ ದಿನದಾಟದಲ್ಲಿ ದೊಡ್ಡ ಮೊತ್ತ ಕಲೆಹಾಕುವ ಸೂಚನೆ ನೀಡಿದ್ದಾರೆ.
ಉಭಯ ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲೆ, ಮಾರ್ಕ್ ವುಡ್, ಜ್ಯಾಕ್ ಲೀಚ್.












Click it and Unblock the Notifications