
Ind Vs Pak Match: ವಿರಾಟ್ ಆಟಕ್ಕೆ ಪತ್ನಿ ಅನುಷ್ಕಾ ಶರ್ಮಾ ಭಾವನಾತ್ಮಕ ಸಂದೇಶ
ಮೇಲ್ಬೋರ್ನ್, ಅಕ್ಟೋಬರ್ 24: ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದ ವೈಖರಿಗೆ ಪತ್ನಿ ಅನುಷ್ಕಾ ಶರ್ಮಾ ಫುಲ್ ಫಿದಾ ಆಗಿದ್ದಾರೆ. ಪಾಕಿಸ್ತಾನದ ವಿರುದ್ಧ ವೀರೋಚಿತ ಗೆಲುವಿನ ರೂವಾರಿ ಆಗಿರುವ ಪತಿಗೆ ಭಾವನಾತ್ಮಕ ಸಂದೇಶವೊಂದನ್ನು ಕಳುಹಿಸಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಫಾರ್ಮ್ ಕಳೆದುಕೊಂಡ ಎಂಬ ಟೀಕಾಕಾರರ ಬಾಯಿ ಮುಚ್ಚಿಸಿದ ಕೊಹ್ಲಿ, ಭಾರತೀಯರ ಪಾಲಿಗೆ ಕ್ರಿಕೆಟ್ ಕಿಂಗ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಮೇಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸಿದ ಟೀಮ್ ಇಂಡಿಯಾದ ಆಟಗಾರರು ಐಸಿಸಿ ಟಿ 20 ನ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವಿನ ಶುಭಾರಂಭ ಮಾಡಿದ್ದಾರೆ.
Ind vs Pak: ಇದು ಕೊಹ್ಲಿ ವೃತ್ತಿ ಜೀವನದ ಶ್ರೇಷ್ಠ ಇನ್ನಿಂಗ್ಸ್; ಸಚಿನ್ ಸೇರಿ ದಿಗ್ಗಜರಿಂದ ಗುಣಗಾನ
ಭಾನುವಾರ ನಡೆದ ಟಿ-20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಅಂತಿಮ ಎಸೆತದಲ್ಲಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಅಮೋಘ ಅರ್ಧಶತಕವನ್ನು ಬಾರಿಸಿದರೆ, ಕೊನೆಯ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಇದರ ಮಧ್ಯೆ ಪತಿಯ ವೀರೋಚಿತ ಆಟಕ್ಕೆ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಬರೆದಿರುವ ಸಂದೇಶವೊಂದು ಸಖತ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.

ಭಾರತೀಯರ ಹೃದಯ ಗೆದ್ದ ವಿರಾಟ್ ಆಟ
ಮೇಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸಿ ಬೊಬ್ಬಿರಿದ ವಿರಾಟ್ ಕೊಹ್ಲಿ, ಬಹುದಿನಗಳ ನಂತರ ತಮ್ಮ ಹಳೆಯ ಶೈಲಿಯಲ್ಲಿ ಬ್ಯಾಟ್ ಬೀಸಿದರು. ಆ ಮೂಲಕ ಟೀಕಾಕಾರರಿಗೆ ಉತ್ತರ ನೀಡಿರುವ ಕಿಂಗ್ ಕೊಹ್ಲಿ, ತಮ್ಮ ಫಾರ್ಮ್ ಮೊದಲಿಗಿಂತಲೂ ಸ್ಟ್ರಾಂಗ್ ಆಗಿದೆ ಎಂಬುದನ್ನು ತೋರಿಸಿ ಕೊಟ್ಟರು. ಸಾಂಪ್ರದಾಯಿಕ ವಿರೋಧಿ ಎನಿಸಿರುವ ಪಾಕಿಸ್ತಾನದ ವಿರುದ್ಧ ವೀರೋಚಿತ ಶೈಲಿಯಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದರು. ಈ ಪೈಕಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಹೊರತಾಗಿಲ್ಲ.

ವಿರಾಟ್ ಆಟಕ್ಕೆ ಅನುಷ್ಕಾ ಶರ್ಮಾ ಸ್ಪೆಷಲ್ ಸಂದೇಶ
"ನೀವು ನನ್ನ ಪ್ರೀತಿಯ ಅದ್ಭುತ ವ್ಯಕ್ತಿ. ನಿಮ್ಮ ಶ್ರದ್ಧೆ, ಸಂಕಲ್ಪ ಮತ್ತು ವಿಶ್ವಾಸಾರ್ಹತೆಯು ಮನಸ್ಸಿಗೆ ಮುದ ನೀಡುತ್ತದೆ!!. ನಾನು ಹೇಳಬಹುದಾದ ನನ್ನ ಜೀವನದ ಅತ್ಯುತ್ತಮ ಪಂದ್ಯವನ್ನು ನಾನು ನೋಡಿದ್ದೇನೆ. ನಮ್ಮ ಮಗಳು ತುಂಬಾ ಚಿಕ್ಕವಳಾಗಿದ್ದರೂ ಅವಳ ತಾಯಿ ಏಕೆ ನೃತ್ಯ ಮಾಡುತ್ತಿದ್ದಾಳೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇದೇ ಕೋಣೆಯಲ್ಲಿ ಹುಚ್ಚುಚ್ಚಾಗಿ ಕಿರುಚುತ್ತಾ, ಒಂದು ದಿನ ಅವಳ ತಂದೆ ತನ್ನ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿದರು ಎಂದು ಅವಳು ಅರ್ಥಮಾಡಿಕೊಳ್ಳುವಳು. ಅದು ಅವನಿಗೆ ಕಠಿಣವಾಗಿದ್ದ ಒಂದು ಹಂತದ ನಂತರ ಅವನು ಹಿಂದೆಂದಿಗಿಂತಲೂ ಬಲಶಾಲಿ ಮತ್ತು ಬುದ್ಧಿವಂತನಾಗಿ ಹೊರಬಂದನು! ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ !! ನಿಮ್ಮ ಶಕ್ತಿಯು ಸಾಂಕ್ರಾಮಿಕವಾಗಿದ್ದು, ನಿಮ್ಮ ಮೇಲಿನ ನನ್ನ ಪ್ರೀತಿಗೆ ಮಿತಿಯಿಲ್ಲ!! ಯಾವುದೇ ವ್ಯತ್ಯಾಸವಿಲ್ಲದೇ ನಿಮ್ಮನ್ನು ಶಾಶ್ವತವಾಗಿ ಪ್ರೀತಿಸುತ್ತೇನೆ," ಎಂದು ಅನುಷ್ಕಾ ಶರ್ಮಾ ಭಾವನಾತ್ಮಕ ಸಂದೇಶವೊಂದನ್ನು ರವಾನಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ವಿರಾಟ್ ವಿರೋಚಿತ ಆಟದ ವೈಖರಿ
ಟೀಮ್ ಇಂಡಿಯಾದ ಕಿಂಗ್ ಕೊಹ್ಲಿ, ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ವಿರೋಚಿತ ಪ್ರದರ್ಶನ ತೋರಿದರು. ಮೂರನೇ ಕ್ರಮಾಂಕದಲ್ಲಿ ಅಂಗಳಕ್ಕೆ ಇಳಿದ ಕೊಹ್ಲಿ, ತಂಡವನ್ನು ಕೊನೆಯವರೆಗೂ ಕೈ ಹಿಡಿದು ನಡೆಸಿದರು. ಒಂದು ದಿಕ್ಕಿನಲ್ಲಿ ವಿಕೆಟ್ ಉರುಳುತ್ತಿದ್ದರೆ, ಇನ್ನೊಂದು ದಿಕ್ಕಿನಲ್ಲಿ ವಿರಾಟ್ ಪರ್ವ ಶುರುವಾಗಿತ್ತು. ಕೇವಲ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಬರೋಬ್ಬರಿ 82 ರನ್ ಕೊಡುಗೆ ನೀಡಿದರು. ಆ ಮೂಲಕ ಮತ್ತೊಮ್ಮೆ ತಾವು ತಂಡದ ಪಾಲಿನ ಆಪತ್ ಬಾಂಧವ ಎಂದೆನಿಸಿದರು.

ಪಾಕಿಸ್ತಾನದ ವಿರುದ್ಧ ಭಾರತ ಗೆಲುವು
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು. ನಾಯಕನ ನಿರ್ಣಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿ ಭಾರತೀಯ ಬೌಲರ್‌ಗಳು ಪಾಕಿಸ್ತಾನ ತಂಡವನ್ನು 159/8ಕ್ಕೆ ಕಟ್ಟಿ ಹಾಕಿದರು. ಭಾರತದ ಪರ ಅರ್ಶ್‌ದೀಪ್ ಸಿಂಗ್ 32ಕ್ಕೆ 3, ಹಾರ್ದಿಕ್ ಪಾಂಡ್ಯ 30ಕ್ಕೆ 3, ಭುವನೇಶ್ವರ್ ಕುಮಾರ್, ಶಮಿ ತಲಾ ಒಂದು ವಿಕೆಟ್ ಪಡೆದರು.
160 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಭಾರತ ತಂಡ 6 ವಿಕೆಟ್ ಕಳೆದುಕೊಂಡು ಕೊನೆ ಎಸೆತದಲ್ಲಿ ರೋಚಕ ಜಯ ಸಾಧಿಸಿ ಶುಭಾರಂಭ ಮಾಡಿತು. ವಿರಾಟ್ ಕೊಹ್ಲಿ 82, ಹಾರ್ದಿಕ್ ಪಾಂಡ್ಯ 37 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 40 ರನ್‌ಗಳಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.