KKR vs GT: ಶುಭಮನ್ ಗಿಲ್ ಭರ್ಜರಿ ಆಟ; ಕೆಕೆಆರ್ ವಿರುದ್ಧ ಗುಜರಾತ್ ಟೈಟಾನ್ಸ್‌ಗೆ ಸುಲಭ ಜಯ
ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 39 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೊದಲಸ್ಥಾನ ಮತ್ತಷ್ಟು ಭದ್ರಪಡಿಸಿಕೊಂಡಿದ್ದು ಪ್ಲೇಆಫ್ ದಾರಿ ಮತ್ತಷ್ಟು ಸುಲಭವಾಗಿದೆ.
ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು. ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಅತ್ಯುತ್ತಮ ಫಾರ್ಮ್ ಮುಂದುವರೆಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 114 ರನ್ ಕಲೆಹಾಕಿತು.

ಸಾಯಿ ಸುದರ್ಶನ್ 36 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ಸಹಿತ 52 ರನ್ ಗಳಿಸಿ ಔಟಾದರೆ, ನಾಯಕನ ಆಟವಾಡಿದ ಶುಭಮನ್ ಗಿಲ್ 55 ಎಸೆತಗಳಲ್ಲಿ 10 ಬೌಂಡರಿ 3 ಸಿಕ್ಸರ್ ಸಹಿತ 90 ರನ್ ಗಳಿಸಿದರು. ಜೋಸ್ ಬಟ್ಲರ್ 23 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 41 ರನ್ ಗಳಿಸಿದರು. ಕೆಕೆಆರ್ ತಂಡದ ಪ್ರಮುಖ ಅಸ್ತ್ರವಾಗಿರುವ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ವಿಕೆಟ್ ಪಡೆಯುವಲ್ಲಿ ವಿಫಲವಾದರು.
ರಶೀದ್, ಪ್ರಸಿದ್ಧ್ ಮಾರಕ ದಾಳಿ
199 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಮತ್ತೊಮ್ಮೆ ಆರಂಭಿಕ ಆಘಾತ ಅನುಭವಿಸಿತು. ಕ್ವಿಂಟನ್ ಡಿಕಾಕ್ ಬದಲಾಗಿ ಅವಕಾಶ ಪಡೆದ ರಹಮನುಲ್ಲಾ ಗುರ್ಬಾಜ್ 1 ರನ್ ಗಳಿಸಿ ಔಟಾದರು. ಸುನಿಲ್ ನರೈನ್ ಕೂಡ ಕೇವಲ 17 ರನ್ ಗಳಿಸಿ ಔಟಾದರು. ನಾಯಕ ಅಜಿಂಕ್ಯ ರಹಾನೆ 36 ಎಸೆತಗಳಲ್ಲಿ 50 ರನ್ ಗಳಿಸಿದರೂ ಇತರ ಬ್ಯಾಟರ್ ಗಳು ಅವರಿಗೆ ಸರಿಯಾಗಿ ಜೊತೆಯಾಟ ನೀಡಲಿಲ್ಲ.
ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿ ಔಟಾದರು. ರಿಂಕು ಸಿಂಗ್ 17 ರನ್ ಗಳಿಸಿದರೆ, ಆಂಡ್ರೆ ರಸೆಲ್ ಕೂಡ 21 ರನ್ ಗಳಿಸಿ ನಿರಾಸೆ ಮೂಡಿಸಿದರು. ಆಂಗ್‌ಕ್ರಿಶ್ ರಘುವಂಶಿ 13 ಎಸೆತಗಳಲ್ಲಿ ಅಜೇಯ 27 ರನ್ ಗಳಿಸುವ ಮೂಲಕ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ರಶೀದ್ ಖಾನ್ ಕೊನೆಗೂ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದು 4 ಓವರ್ ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರು. ಪ್ರಸಿದ್ಧ್ ಕೃಷ್ಣ ಕೂಡ 2 ಪ್ರಮುಖ ವಿಕೆಟ್ ಪಡೆದು ಕೆಕೆಆರ್ ಗೆ ಆಘಾತ ನೀಡಿದರು.












Click it and Unblock the Notifications