Digvesh Rathi: ದಿಗ್ವೇಶ್ ರಾಠಿಗೆ ಒಂದು ಪಂದ್ಯ ನಿಷೇಧ; ಕೊಹ್ಲಿ ಎದುರು ಹಿಂಗಾಡ್ಬೇಡ ಎಂದ ಆರ್‌ಸಿಬಿ ಫ್ಯಾನ್ಸ್!
ದಿಗ್ವೇಶ್ ರಾಠಿ ಐಪಿಎಲ್ 2025ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. ತಂಡವು ಕಷ್ಟದಲ್ಲಿದ್ದಾಗಲೆಲ್ಲಾ ವಿಕೆಟ್ ತೆಗೆದುಕೊಡುತ್ತಿದ್ದಾರೆ. ಅವರ ಬೌಲಿಂಗ್ ಬಗ್ಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಆದರೆ ಯುವ ಆಟಗಾರ ವಿಕೆಟ್ ಪಡೆದ ಬಳಿಕ ತೋರುತ್ತಿರುವ ವರ್ತನೆ ಮಾತ್ರ ಆತನ ಭವಿಷ್ಯಕ್ಕೆ ಮುಳ್ಳಾಗುವ ಸಾಧ್ಯತೆ ಇದೆ. ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಕೂಡ ದಿಗ್ವೇಶ್ ರಾಠಿ ನಡೆದುಕೊಂಡ ರೀತಿಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.
ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದ ಬಳಿಕ ತಮ್ಮ ಸಹಿ ಮಾಡುವ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಲ್ಲದೆ, ಬ್ಯಾಟರ್ ನನ್ನು ಮೈದಾನದಿಂದ ಹೊರಗೆ ನಡಿ ಎನ್ನುವಂತೆ ಸನ್ನೆ ಮಾಡಿದರು. ಇದರಿಂದ ಅಭಿಷೇಕ್ ಶರ್ಮಾ ಕೂಡ ಕೋಪಗೊಂಡರು. ರಾಠಿ ಅವರ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಅವರಿಗೆ ಪಂದ್ಯದ ಶುಲ್ಕದ 50% ದಂಡ ವಿಧಿಸಲಾಗಿದ್ದು, ಒಂದು ಪಂದ್ಯದಿಂದ ಅಮಾನತು ಮಾಡಲಾಗಿದೆ.

ದಿಗ್ವೇಶ್ ಸಿಂಗ್ ರಾಠಿ ಈ ರೀತಿ ಅತಿರೇಖದ ವರ್ತನೆ ತೋರಿಸಿರುವುದು ಇದೇ ಮೊದಲಲ್ಲ. ಪಂದ್ಯಾವಳಿಯ ಮೊದಲು ಅವರು ಆರ್ಟಿಕಲ್ 2 ರ ಅಡಿಯಲ್ಲಿ ಲೆವೆಲ್ 1 ಅಪರಾಧಕ್ಕಾಗಿ ಎರಡು ಬಾರಿ ದಂಡ ವಿಧಿಸಲಾಗಿತ್ತು. ಆದ್ದರಿಂದ, ಈ ಹಿಂದೆ ಡಿಮೆರಿಟ್ ಪಾಯಿಂಟ್‌ಗಳ ಜೊತೆಗೆ ಈಗ ಕಠಿಣ ಶಿಕ್ಷೆಯನ್ನು ಎದುರಿಸುತ್ತಾರೆ. ದಿಗ್ವೇಶ್ ರಾಠಿ ಮೇ 22 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಗುಜರಾತ್ ಟೈಟಾನ್ಸ್ ಪಂದ್ಯದಲ್ಲಿ ಆಡಲು ಅವಕಾಶ ಇರುವುದಿಲ್ಲ.
ಘಟನೆಯಲ್ಲಿ ಭಾಗಿಯಾಗಿರುವ ಅಭಿಷೇಕ್ ಶರ್ಮಾ ಅವರಿಗೂ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ. ಇದು ಅವರ ಮೊದಲ ಲೆವೆಲ್ 1 ಅಪರಾಧವಾಗಿದ್ದು, ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಆರ್ ಸಿಬಿ ಅಭಿಮಾನಿಗಳ ಎಚ್ಚರಿಕೆ
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ಆಡದೇ ಇದ್ದರೂ ಮೇ 27ರಂದು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ದಿಗ್ವೇಶ್ ರಾಠಿ ಆಡಲಿದ್ದಾರೆ. ಈ ಪಂದ್ಯಕ್ಕೆ ಮುನ್ನವೇ ಆರ್ ಸಿಬಿ ಅಭಿಮಾನಿಗಳಿಗೆ ದಿಗ್ವೇಶ್ ರಾಠಿಗೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಎಲ್‌ಎಸ್‌ಜಿ ತಂಡದ ಆಟಗಾರರು ವಿರಾಟ್ ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡಿದ್ದರು. ತಂಡದ ಬೌಲರ್ ಆಗಿದ್ದ ನವೀನ್ ಉಲ್ ಹಕ್ ಮತ್ತು ಕೋಚ್ ಆಗಿದ್ದ ಗೌತಮ್ ಗಂಭೀರ್ ಅವರ ಜೊತೆ ಮೈದಾನದಲ್ಲೇ ಗಲಾಟೆಯಾಗಿತ್ತು. ಈಗ ದಿಗ್ವೇಶ್ ರಾಠಿ ಈ ರೀತಿ ಮೈದಾನದಲ್ಲಿ ಅತಿರೇಖದ ವರ್ತನೆ ತೋರಿಸಿದರೆ ಅದಕ್ಕೆ ವಿರಾಟ್ ಕೊಹ್ಲಿ ತಿರುಗೇಟು ನೀಡುವುದು ಗ್ಯಾರಂಟಿ.
ವೆಸ್ಟ್ ಇಂಡೀಸ್ ತಂಡದ ವೇಗದ ಬೌಲರ್ ಕೆರ್‍ಸಿಕ್ ವಿಲಿಯಮ್ಸ್ ಇದೇ ರೀತಿ ಸಹಿ ಹಾಕುವ ಸಂಭ್ರಮಾಚರಣೆ ಮಾಡಿ ಕೊಹ್ಲಿ ಅವರನ್ನು ಕೆರಳಿಸಿದ್ದರು. ಬಳಿಕ ಕೊಹ್ಲಿ ಪ್ರತಿ ಬಾರಿ ಬೌಂಡರಿ, ಸಿಕ್ಸರ್ ಬಾರಿಸಿ ಅದೇ ರೀತಿ ಸಹಿ ಮಾಡುವ ಮೂಲಕ ವಾಪಸ್ ನೀಡಿದ್ದರು. ಅದನ್ನು ನೆನಪಿಸಿಕೊಂಡಿರುವ ಅಭಿಮಾನಿಗಳು ದಯವಿಟ್ಟು ಕೊಹ್ಲಿಯನ್ನು ಕೆಣಕಬೇಡ ಎಂದು ಬುದ್ದಿವಾದ ಹೇಳಿದ್ದಾರೆ.












Click it and Unblock the Notifications