Shami Final: ಕೊಹ್ಲಿ ಅಲ್ಲ.. ಅಯ್ಯರ್ ಅಲ್ಲ... ಈ ಮ್ಯಾಚು ಸೇರಿದ್ದು ಶಮಿಗೆ!
ಬಹುಶಃ ಈ ಸುದ್ದಿಗೆ ಹೆಡ್‌ಲೈನ್ ಪಕ್ಕಾ ಹೊಂದಾಣಿಕೆ ಆಗುತ್ತೆ. ಯಾಕಂದ್ರೆ ನ್ಯೂಜಿಲೆಂಡ್ ವಿರುದ್ಧ ಭಾರತ ಇಂದು ಗೆಲುವು ಸಾಧಿಸಲು ಪ್ರಮುಖ ಕಾರಣ ವಿರಾಟ್ ಕೊಹ್ಲಿ ಅವರೂ ಅಲ್ಲ, ಹಾಗೇ ಶ್ರೇಯಸ್ ಅಯ್ಯರ್ ಕೂಡ ಅಲ್ಲ. ಆದರೆ ಈ ಪಂದ್ಯದ ನಿಜವಾದ ಹೀರೋ ಭಾರತದ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ! ಇಂದು ಶಮಿ ಇಲ್ಲದೇ ಹೋಗಿದ್ರೆ ಗ್ಯಾರಂಟಿ ನ್ಯೂಜಿಲೆಂಡ್ 398 ರನ್‌ಗಳ ಗುರಿ ಮುಟ್ಟಿ, ಭಾರತಕ್ಕೆ ಸೋಲುಣಿಸುವ ಸಾಧ್ಯತೆ ದಟ್ಟವಾಗಿತ್ತು.
ಅಂದಹಾಗೆ ಇಂದು ಅತಿಯಾದ ಆತ್ಮವಿಶ್ವಾಸವೇ ಭಾರತಕ್ಕೆ ದೊಡ್ಡ ಗಂಡಾಂತರ ತರುವ ಸೂಚನೆ ನೀಡಿತ್ತು. ಯಾಕಂದ್ರೆ ಮೊದಲು ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ಪಡೆ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯ್ಯರ್ ಅವರ ಭರ್ಜರಿ ಶತಕದ ಕೊಡುಗೆ ಹಿನ್ನೆಲೆ, 398 ರನ್‌ಗಳ ಗುರಿ ನೀಡಿತ್ತು. ಆದರೆ ಮುಂದೆ ಆಗಿದ್ದೇ ಬೇರೆ, ಸುಲಭವಾಗಿ ನ್ಯೂಜಿಲೆಂಡ್ ತಂಡಕ್ಕೆ ಸೋಲು ಕರುಣಿಸುತ್ತೇವೆ ಅಂತಾ ಫೀಲ್ಡ್‌ಗೆ ಬಂದ ಭಾರತದ ಆಟಗಾರರಿಗೆ ಭರ್ಜರಿ ಶಾಕ್ ಕಾದಿತ್ತು. ಇಷ್ಟೇ ಅಲ್ಲ ಕಣ್ರಿ ಒಂದು ಹಂತದಲ್ಲಿ ಭಾರತದ ಕೈತಪ್ಪಿ ಹೋಗಿತ್ತು ಈ ಮ್ಯಾಚ್. ಆದರೆ ಈ ಸಮಯದಲ್ಲಿ ಭಾರತದ ಬೌಲರ್ ಮೊಹಮ್ಮದ್ ಶಮಿ ಹೀರೋ ರೀತಿ ಭರ್ಜರಿ ಎಂಟ್ರಿ ಕೊಟ್ಟರು.

ಮ್ಯಾಚ್ ಕೈಬಿಟ್ಟು ಹೋಯ್ತು ಅನ್ನುವಾಗ...
2023ರ ಐಸಿಸಿ ಏಕದಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶ ಮಾಡುವ ನಿರೀಕ್ಷೆಯಲ್ಲಿ ಭಾರತ ಇತ್ತು. ಆದರೆ ಆಗಿದ್ದೇ ಬೇರೆ, ಆರಂಭದಲ್ಲಿ ಅಂದ್ರೆ 30 ರನ್‌ಗೆ ಮೊದಲ ವಿಕೆಟ್ ಮತ್ತು 39 ರನ್‌ಗೆ 2ನೇ ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಪಡೆಯು ಅಲರ್ಟ್ ಆಗಿ ಆಟವಾಡಿತು. ಹೀಗೆ ನ್ಯೂಜಿಲೆಂಡ್ ತಂಡಕ್ಕೆ ಸಂಕಷ್ಟದ ಸಮಯಕ್ಕೆ, ವಿಲಿಯಮ್ಸನ್ & ಮಿಚೆಲ್ ಸಾಥ್ ಕೊಟ್ಟರು. ಇಬ್ಬರ ಜೋಡಿ ಬೇರೆಯಾಗಿದ್ದು 220 ರನ್‌ಗೆ!
ಕಿವೀಸ್ ಪಡೆಗೆ ಖೆಡ್ಡಾ ರೆಡಿ!
ಇಂದು ನ್ಯೂಜಿಲೆಂಡ್ ತಂಡ ಆಡಿದ ಆಟವನ್ನೂ ನಿಜಕ್ಕೂ ಮೆಚ್ಚಲೇಬೇಕಿದೆ. ಯಾಕಂದ್ರೆ 398 ರನ್ ಬೃಹತ್ ಗುರಿ ನೀಡಿದ್ದರೂ ನ್ಯೂಜಿಲೆಂಡ್ ತಂಡ ಹೆದರಲೇ ಇಲ್ಲ. ಬದಲಾಗಿ ಭಾರತ ತಂಡಕ್ಕೆ ಪಂದ್ಯದ ಅಂತ್ಯದ ತನಕವೂ ಕಾಡಿತ್ತು. ಅದರಲ್ಲೂ ನ್ಯೂಜಿಲೆಂಡ್ ಟೀಂನ ನಾಯಕ ಕೇನ್ ವಿಲಿಯಮ್ಸನ್ & ಡೇರಿಲ್ ಮಿಚೆಲ್ ಜೋಡಿ ನೀಡಿದ್ದ 181 ರನ್ ಕೊಡುಗೆ ಸೋಲಿನ ವಾತಾವರಣ ಸೃಷ್ಟಿ ಮಾಡ್ತು. ಆದ್ರೆ ಭಾರತದ ಬೆಸ್ಟ್ ಬೌಲರ್ ಮೊಹಮ್ಮದ್ ಶಮಿ ಈ ಜೋಡಿ ಬೇರೆ ಮಾಡಿ ಭಾರತಕ್ಕೆ ಬಲ ತುಂಬಿದರು. ಮೊದಲು ಕೇನ್ ವಿಲಿಯಮ್ಸನ್ 3ನೇ ವಿಕೆಟ್ ಆಗಿ ಬಲಿಯಾದರು. ಆ ನಂತರವೇ ಮತ್ತೆ ಮ್ಯಾಚ್ ಭಾರತದ ಕೈಗೆ ಬಂದಿತ್ತು.

ಭಾರತದ ಪರ ಶಮಿಗೆ 7 ವಿಕೆಟ್!
ಇಡೀ ಪಂದ್ಯದಲ್ಲಿ ಭಾರತದ ಪರವಾಗಿ ಮಿಂಚಿದ ಏಕೈಕ ಬೌಲರ್ ಅಂದ್ರೆ ಮೊಹಮ್ಮದ್ ಶಮಿ. ಮಿಕ್ಕೆಲ್ಲ ಬೌಲರ್‌ಗಳ ಮೇಲೆ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆ ಅಟ್ಯಾಕ್ ಮಾಡುತ್ತಿದ್ದರೆ, ಶಮಿ ಮಾತ್ರ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆ ಮೇಲೆ ದಾಳಿ ಮಾಡಿದರು. ಹೀಗೆ ಶಮಿ ಬೌಲಿಂಗ್ ದಾಳಿ ಎದುರು ಬೆಚ್ಚಿಬಿದ್ದ ಕಿವೀಸ್‌ಗೆ, ಇನ್ನೇನು ಪಂದ್ಯದ ಅಂತ್ಯದಲ್ಲಿ ಮ್ಯಾಚ್ ಕೈಬಿಟ್ಟು ಹೋಗುತ್ತೆ ಅನ್ನೋದು ಪಕ್ಕಾ ಆಗಿತ್ತು. ಈ ಸಮಯಕ್ಕೆ ಮೊಹಮ್ಮದ್ ಶಮಿ ಭರ್ಜರಿ 7 ವಿಕೆಟ್ ಪಡೆದು, ಮಿಂಚು ಹರಿಸಿದರು.
ಒಟ್ಟು 9.5 ಓವರ್ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಶಮಿ ಕೇವಲ 57 ರನ್ ನಿಡಿ 7 ವಿಕೆಟ್ ಪಡೆದರು. ಈ ಮೂಲಕ ಭಾರತದ ಸೆಮಿಫೈನಲ್ ಗೆಲುವಿನಲ್ಲಿ ಹಾಗೂ ಭಾರತ ಫೈನಲ್ ತಲುಪುವಲ್ಲಿ ಮೊಹಮ್ಮದ್ ಶಮಿ ಮಹತ್ವದ ಪಾತ್ರ ವಹಿಸಿದರು. ಹೀಗೆ, ಭಾರತ ತಂಡಕ್ಕೆ ಈ ಪಂದ್ಯ ಗೆಲುವಿನ ಜೊತೆಗೆ ಸೋಲಿನ ಪಾಠವನ್ನೂ ಕಲಿಸಿದೆ. ಹೀಗಾಗಿ 2023ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೈಯೆಲ್ಲಾ ಕಣ್ಣಾಗಿ ಆಡಬೇಕಿದೆ ಭಾರತ ಕ್ರಿಕೆಟ್ ತಂಡ.












Click it and Unblock the Notifications