David Miller: ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೋತ ಬಳಿಕ ಡೇವಿಡ್ ಮಿಲ್ಲರ್ ನಿವೃತ್ತಿ?
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ ಟೀಮ್ ಇಂಡಿಯಾ, ಎರಡನೇ ಬಾರಿಗೆ ಚುಟುಕು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಪಂದ್ಯದಲ್ಲಿ ಗೆಲ್ಲುವಿನ ಅವಕಾಶವನ್ನು ಹೊಂದಿದ್ದ ದಕ್ಷಿಣ ಆಫ್ರಿಕಾ ಸೋಲು ಕಂಡಿದೆ. ಈ ಸೋಲಿನ ಶಾಕ್‌ನಿಂದ ಅದೆಷ್ಟೋ ಆಟಗಾರರು ಇನ್ನು ಹೊರ ಬಂದಿಲ್ಲ. ಇದರ ಮಧ್ಯೆ ಈಗ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಒಬ್ಬರು ನಿವೃತ್ತಿ ತೆಗೆದುಕೊಂಡ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಶನಿವಾರ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೋತ ದಕ್ಷಿಣ ಆಫ್ರಿಕಾ ನಿರಾಸೆ ಅನುಭವಿಸಿದೆ. ಈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇತ್ತು. ಅಷ್ಟಕ್ಕೂ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದೇ ಗೆಲ್ಲುತ್ತದೆ ಎಂದು ಎಲ್ಲರೂ ನಂಬಿದ್ದರು. 30 ಎಸೆತಗಳಲ್ಲಿ 30 ರನ್ ಅವಶ್ಯಕತೆ ಇತ್ತು. ಅಲ್ಲಿಂದ ಚಿತ್ರ ಬದಲಾಯಿತು. ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು.

ಮಿಲ್ಲರ್ ನಿವೃತ್ತಿ?
ಟಿ20 ಕ್ರಿಕೆಟ್‌ನಲ್ಲಿ ಇದು ಸಾಧಿಸಬಹುದಾದ ಮೊತ್ತ. ಆದರೆ ಹಾರ್ದಿಕ್ ಪಾಂಡ್ಯ ಅವರ ಕರಾರುವಕ್ ದಾಳಿಗೆ ದಕ್ಷಿಣ ಆಫ್ರಿಕಾ ತಂಡ ಧರಾಶಾಹಿ ಆಯಿತು. ಈ ಓವರ್‌ನ ಮೊದಲ ಎಸೆತದಲ್ಲಿ ಬಿಗ್ ಸಿಕ್ಸರ್ ಬಾರಿಸಲು ಹೋದ ಡೇವಿಡ್ ಮಿಲ್ಲರ್, ಸೂರ್ಯಕುಮಾರ್ ಯಾದವ್ ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು. ಈ ಶಾಕ್‌ನಿಂದ ಮಿಲ್ಲರ್ ಇನ್ನು ಹೊರ ಬರಲು ಆಗಿಲ್ಲ.
ಡೇವಿಡ್ ಮಿಲ್ಲರ್ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರಾ ಎಂಬ ಮಾತುಗಳು ಸಾಮಾಜಿಕ ತಾಣದಲ್ಲಿ ಕೇಳಿ ಬರುತ್ತಿವೆ. ಇದಕ್ಕೆ ಡೇವಿಡ್ ಮಿಲ್ಲರ್ ಉತ್ತರ ನೀಡಿದ್ದಾರೆ. ಇವರು ತಮ್ಮ ಮನದಾಳದ ಮಾತನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ತಾಣದಲ್ಲಿ ಮಿಲ್ಲರ್ ಪ್ರತಿಕ್ರಿಯೆ
ಡೇವಿಡ್ ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಬರೆದಿದ್ದಾರೆ. ಅಲ್ಲದೆ ತಾವು ಯಾವುದೇ ಸ್ವರೂಪದಿಂದ ನಿವೃತ್ತರಾಗಿಲ್ಲ ಎಂದು ದೃಢಪಡಿಸಿದರು. ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿಲ್ಲ ಎಂದು ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ನಾನು ದಕ್ಷಿಣ ಆಫ್ರಿಕಾ ಪರ ಆಡುವುದನ್ನು ಮುಂದುವರಿಸುತ್ತೇನೆ. ತಂಡದ ಪರ ಇನ್ನು ದೊಡ್ಡ ಸಾಧನೆಗಳನ್ನು ಮಾಡುವುದಿದೆ ಎಂದಿದ್ದಾರೆ. ಫೈನಲ್‌ನಲ್ಲಿ ಭಾರತದ ವಿರುದ್ಧದ ಸೋಲಿನ ಬಗ್ಗೆಯೂ ಮಿಲ್ಲರ್ ಮುಕ್ತವಾಗಿ ಮಾತನಾಡಿದ್ದಾರೆ.

ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಸೋಲಿನ ನಂತರ, ಮಿಲ್ಲರ್ ಸೋಮವಾರ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ, ನಾನು ತುಂಬಾ ನಿರಾಶೆಗೊಂಡಿದ್ದೇನೆ, ಎರಡು ದಿನಗಳ ಹಿಂದೆ ನಡೆದದ್ದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ. ಆದಾಗ್ಯೂ, ಈ ತಂಡದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಈ ಟೂರ್ನಿಯಲ್ಲಿ ನಮ್ಮ ಪ್ರಯಾಣ ಅದ್ಭುತವಾಗಿತ್ತು ಎಂದು ಮಿಲ್ಲರ್ ಹೇಳಿದ್ದಾರೆ. ತಿಂಗಳು ಪೂರ್ತಿ ನಾವು ಅನೇಕ ಏರಿಳಿತಗಳನ್ನು ಕಂಡಿದ್ದೇವೆ. ನಾವು ಈಗ ಮಾಡಿದ ತಪ್ಪನ್ನು ಅರಿತು ಮುಂದೆ ವರೆಯುತ್ತೇವೆ ಎಂದಿದ್ದಾರೆ.












Click it and Unblock the Notifications