Karnataka Vs Goa: ಮಯಾಂಕ್, ದೇವದತ್ ಶತಕ: ಉತ್ತಮ ಸ್ಥಿತಿಯಲ್ಲಿ ಕರ್ನಾಟಕ ತಂಡ
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ. ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಶತಕದ ನೆರವಿನಿಂದ ಕರ್ನಾಟಕ ಎರಡನೇ ದಿನದಾಟದಲ್ಲಿ ಗೋವಾ ವಿರುದ್ಧ ಮೇಲುಗೈ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಗೋವಾ ಮೊದಲ ಇನ್ನಿಂಗ್ಸ್‌ನಲ್ಲಿ 321 ರನ್‌ಗಳಿಗೆ ಆಲೌಟ್ ಆಯಿತು. ಸ್ನೇಹಲ್ ಕೌತಂಕರ್ 83 ರನ್ ಗಳಿಸಿದರೆ, ಅರ್ಜುನ್ ತೆಂಡೂಲ್ಕರ್ 52 ರನ್ ಗಳಿಸಿ ಗಮನ ಸೆಳೆದರು. ಹೇರಂಭ್ ಪರಬ್ 53 ರನ್ ಗಳಿಸುವ ಮೂಲಕ ಗೋವಾ ಮೊದಲ ಇನ್ನಿಂಗ್ಸ್‌ನಲ್ಲಿ ಸವಾಲಿನ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಮೊದಲ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿದ ಗೋವಾ ಎರಡನೇ ದಿನ ಆಲೌಟ್ ಆಗುವಷ್ಟರಲ್ಲಿ 100 ರನ್ ಕಲೆ ಹಾಕಿತು. ವಿಜಯ್ ಕುಮಾರ್ ವೈಶಾಕ್, ಮುರಳೀಧರ ವೆಂಕಟೇಶ್ ಮತ್ತು ರೋಹಿತ್ ಕುಮಾರ್ ತಲಾ ಮೂರು ವಿಕೆಟ್ ಗಳಿಸಿದರು. ವಾಸುಕಿ ಕೌಶಿಕ್ ಒಂದು ವಿಕೆಟ್ ಪಡೆದುಕೊಂಡರು.

ಪಡಿಕ್ಕಲ್, ಮಯಾಂಕ್ ಶತಕ
ನಂತರ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ದೇಗಾ ನಿಶ್ಚಲ್ (16) ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಬಳಿಕ ಜೊತೆಯಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ 2ನೇ ವಿಕೆಟ್‌ಗೆ 209 ರನ್ ಕಲೆಹಾಕುವ ಮೂಲಕ ಆಸರೆಯಾದರು. ಮಯಾಂಕ್ ಅಗರ್ವಾಲ್ 114 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ 101 ರನ್ ಗಳಿಸಿ ಔಟಾದರು.
236 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡ ಕರ್ನಾಟಕ ದಿನದಾಟದ ಅಂತ್ಯದಲ್ಲಿ ಬೇಗನೆ 2 ವಿಕೆಟ್ ಕಳೆದುಕೊಂಡಿತು. ರೋಹಿತ್ ಕುಮಾರ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಿಕಿನ್ ಜೋಸ್ ಅಜೇಯ 3 ರನ್, ಶ್ರೀನಿವಾಸ್ ವಿಕೆಟ್ ಕಾಯ್ದುಕೊಂಡಿದ್ದಾರೆ. ಗೋವಾ ತಂಡದ ನಾಯಕ ದರ್ಶನ್ ಮಿಸಳ್ 2 ವಿಕೆಟ್ ಪಡೆದರೆ, ಮೋಹಿತ್ ರೆಡ್ಕರ್ 2 ವಿಕೆಟ್ ಪಡೆದುಕೊಂಡರು. ಎರಡನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ 4 ವಿಕೆಟ್ ಕಳೆದುಕೊಂಡು 251 ರನ್ ಗಳಿಸಿದ್ದು, 70 ರನ್‌ಗಳ ಹಿನ್ನಡೆಯಲ್ಲಿದೆ.
ಇನ್ನೂ ಎರಡು ದಿನಗಳ ಆಟ ಬಾಕಿ ಇದ್ದು, ಕರ್ನಾಟಕ ಮೂರನೇ ದಿನ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಇನ್ನಿಂಗ್ಸ್ ಮುನ್ನಡೆ ಪಡೆಯುವ ವಿಶ್ವಾಸದಲ್ಲಿದೆ.












Click it and Unblock the Notifications