Bengaluru Bulls: ಯುಪಿ ಯೋಧಾಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ
ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಕೊನೆಗೂ ಗೆಲುವಿನ ರುಚಿ ನೋಡಿದೆ. ಮೊದಲ ನಾಲ್ಕು ಪಂದ್ಯಗಳನ್ನು ಸೋತಿದ್ದ ಬೆಂಗಳೂರು ಬುಲ್ಸ್ ಭಾನುವಾರ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಿರುಗಿ ಬಿದ್ದಿತು.
ಯುಪಿ ಯೋಧಾಸ್ ವಿರುದ್ಧ ಪಂದ್ಯದಲ್ಲಿ 38-36 ಅಂಕಗಳಿಂದ ಪಂದ್ಯವನ್ನು ಗೆದ್ದ ಬೆಂಗಳೂರು ಬುಲ್ಸ್ ಆ ಆವೃತ್ತಿಯ ತನ್ನ ಮೊದಲ ಗೆಲುವು ದಾಖಲಿಸಿತು. ಆರಂಭದಿಂದ ಕೂಡ ಉಭಯ ತಂಡಗಳು ರೋಚಕ ಹೋರಾಟ ನಡೆಸಿದವು.

ಆರಂಭದ ಕೆಲವು ಕ್ಷಣಗಳಲ್ಲಿ ಯುಪಿ ಯೋಧಾಸ್ ಮೇಲುಗೈ ಸಾಧಿಸಿತು. ಆದರೆ, ತಕ್ಷಣವೇ ತಿರುಗಿಬಿದ್ದ ಬೆಂಗಳೂರು ಬುಲ್ಸ್ ಅಂಕಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಿತು. ನಂತರ ಯುಪಿ ಯೋಧಾಸ್‌ಗೆ ಮುನ್ನಡೆ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ.
ಖಂಡೋಲಾ, ಭರತ್ ಮಿಂಚಿನ ದಾಳಿ
ಬುಲ್ಸ್ ಪರ ಮಿಂಚಿದ ವಿಕಾಶ್ ಖಂಡೋಲಾ ಮತ್ತು ಭರತ್ ಅತ್ಯುತ್ತಮ ದಾಳಿ ಸಂಘಟಿಸಿದರು. ಆರಂಭದಲ್ಲಿ ಭರತ್ ಮಂಕಾದಂತೆ ಕಂಡರೂ ಖಂಡೋಲಾ ಮಾತ್ರ ನಿರಂತರವಾಗಿ ರೈಡಿಂಗ್ ಅಂಕಗಳನ್ನು ಗಳಿಸಿ ಬುಲ್ಸ್‌ಗೆ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ಚುರುಕಾದ ಭರತ್ ಸತತವಾಗಿ ಪಾಯಿಂಟ್‌ಗಳನ್ನು ತಂದಕೊಟ್ಟರು.
ವಿಕಾಶ್ ಖಂಡೋಲಾ 8 ರೈಡ್‌ಗಳಲ್ಲಿ 3 ಬೋನಸ್ ಅಂಕಗಳ ಸಹಿತ ಒಟ್ಟು 11 ಪಾಯಿಂಟ್ಸ್ ತಂದುಕೊಟ್ಟರೆ. ಭರತ್ ಕೂಡ 11 ಅಂಕಗಳನ್ನು ತಂದುಕೊಟ್ಟರು. ಸೌರಭ್ ನಂದಾಲ್, ಮೋನು, ಅಮನ್, ಸರ್ಜೀತ್ ಸಿಂಗ್ ಡಿಫೆಂಡರ್ ಗಳಾಗಿ ಉತ್ತಮ ಪ್ರದರ್ಶನ ನೀಡಿದರು.
ಕೊನೆಯ ಕೆಲವು ಕ್ಷಣಗಳಲ್ಲಿ ಯುಪಿ ಯೋಧಾಸ್ ತಿರುಗಿ ಬಿದ್ದು ಪಾಯಿಂಟ್‌ಗಳ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡಿಕೊಂಡಿತು. ರೋಚಕ ಹಣಾಹಣಿಯಲ್ಲಿ ಕೊನೆಯಲ್ಲಿ ಅಂಕ ಪಡೆದುಕೊಂಡ ಭರತ್ ಬುಲ್ಸ್ ಜಯವನ್ನು ಖಚಿತಗೊಳಿಸಿದರು.
ಯುಪಿ ಯೋಧಾಸ್ ಪರವಾಗಿ ಪರ್ದೀಪ್ ನರ್‍ವಾಲ್ ರೈಡಿಂಗ್‌ನಲ್ಲಿ 13 ಅಂಕಗಳನ್ನು ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದರು. ಅವರಿಗೆ ಸುರೇಂದ್ರ ಗಿಲ್ 8 ಅಂಕ ಪಡೆಯುವ ಮೂಲಕ ಉತ್ತಮವಾಗಿ ಪ್ರದರ್ಶನ ನೀಡಿದರು ಡಿಫೆಂಡ್‌ನಲ್ಲಿ ಯುಪಿ ಯೋಧಾಸ್ ಸತತವಾಗಿ ಅಂಕಗಳನ್ನು ಬಿಟ್ಟುಕೊಟ್ಟದ್ದು ಸೋಲಿಗೆ ಕಾರಣವಾಯಿತು.
ಬೆಂಗಳೂರು ಬುಲ್ಸ್ 10 ಟ್ಯಾಕಲ್ಸ್ ಪಾಯಿಂಟ್ ಪಡೆದರೆ, ಯುಪಿ ಯೋಧಾಸ್ ಕೇವಲ 5 ಟ್ಯಾಕಲ್ಸ್ ಪಾಯಿಂಟ್ ಪಡೆಯಿತು. ಬೆಂಗಳೂರು ಬುಲ್ಸ್ ಯುಪಿ ಯೋಧಾಸ್ ತಂಡವನ್ನು ಎರಡು ಬಾರಿ ಆಲೌಟ್ ಮಾಡಿದರೆ, ಯುಪಿ ಯೋಧಾಸ್ ಬೆಂಗಳೂರು ಬುಲ್ಸ್ ತಂಡವನ್ನು ಒಮ್ಮೆ ಮಾತ್ರ ಆಲೌಟ್ ಮಾಡಿತು.












Click it and Unblock the Notifications