Bengaluru Bulls: ಕೊನೆ ಕ್ಷಣದಲ್ಲಿ ಅಮೋಘ ಆಟ: 38-37 ಅಂಕಗಳಿಂದ ತಮಿಳ್ ತಲೈವಾಸ್ ಮಣಿಸಿದ ಬೆಂಗಳೂರು ಗೂಳಿಗಳು
ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ 2023ರ ವರ್ಷದ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ರೋಚಕ ಗೆಲುವು ಸಾಧಿಸಿದೆ. ಒಂದು ಹಂತದಲ್ಲಿ ಅಂಕಗಳಲ್ಲಿ ಹಿನ್ನಡೆ ಪಡೆದುಕೊಂಡಿದ್ದ ಗೂಳಿಗಳು ಕೊನೆಯ ಕ್ಷಣದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ತಮಿಳ್ ತಲೈವಾಸ್ ವಿರುದ್ಧ 38-37 ಅಂಕಗಳ ಗೆಲುವು ಸಾಧಿಸಿತು.
ನೊಯ್ಡಾದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ರೋಚಕ ಹಣಾಹಣಿ ನಡೆಸಿದವು. ಎರಡೂ ತಂಡಗಳು ಕೊನೆಯ 2-3 ನಿಮಿಷ ಇದೆ ಎನ್ನುವವರೆಗೂ ಸಮಬಲದ ಹೋರಾಟ ನಡೆಯಿತು. ಎರಡೂ ತಂಡಗಳಿಗೆ ಗೆಲುವಿಗೆ ಸಮಾನ ಅವಕಾಶ ಇತ್ತು, ಆದರೆ ಕೊನೆಯ ನಿಮಿಷದಲ್ಲಿ ಮಿಂಚಿನ ಆಟವಾಡಿದ ಬೆಂಗಳೂರಿನ ಗೂಳಿಗಳು ಒಂದು ಅಂಕ ಮುನ್ನಡೆ ಪಡೆದುಕೊಂಡು ಗೆದ್ದು ಬೀಗಿದವು.

ಆರಂಭದಿಂದ ಎರಡೂ ತಂಡಗಳು ಉತ್ತಮವಾಗಿ ಆಡಿದರೂ, ಮೊದಲಾರ್ಧದ ಮುಕ್ತಾಯದ ವೇಳೆಗೆ ತಮಿಳ್ ತಲೈವಾಸ್ 20-17 ಅಂಕಗಳಿಂದ ಮುನ್ನಡೆ ಪಡೆದುಕೊಂಡಿತ್ತು. ದ್ವಿತಿಯಾರ್ಧದಲ್ಲಿ ಕೂಡ ತಮಿಳ್ ತಲೈವಾಸ್ ಮುನ್ನಡೆ ಪಡೆದುಕೊಂಡಿತು, ಆದರೆ ಕೊನೆಯ ಹಂತದಲ್ಲಿ ಪಂದ್ಯವನ್ನು ಕೈಚೆಲ್ಲಿತು.
ಭರತ್ ಮಿಂಚಿನ ದಾಳಿ
ಬೆಂಗಳೂರು ಬುಲ್ಸ್ ಉತ್ತಮ ಆಟವಾಡುತ್ತಿದ್ದರು ತಮಿಳ್ ತಲೈವಾಸ್ ಸೂಪರ್ ಟ್ಯಾಕಲ್ ಮೂಲಕ ಎರಡು ಅಂಕಗಳನ್ನು ಪಡೆದುಕೊಂಡು ಮುನ್ನಡೆ ಹೆಚ್ಚಿಸಿಕೊಳ್ಳುತ್ತಲೇ ಹೋಯಿತು. ಆದರೆ, ಭರತ್ ರೈಡಿಂಗ್ ವೇಳೆ ತಮಿಳ್ ತಲೈವಾಸ್‌ನ ಇಬ್ಬರು ಆಟಗಾರರು ಅಂಗಳದಿಂದ ಹೊರಗೆ ಹೆಜ್ಜೆ ಇಟ್ಟು ಔಟಾಗಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿತು.
ನೀರಜ್ ನರ್ವಾಲ್ 5 ರೈಡ್ ಪಾಯಿಂಟ್ ತಂದರೆ, ಸಚಿನ್ ನರ್ವಾಲ್ 3 ರೈಡಿಂಗ್ ಪಾಯಿಂಟ್ಸ್ ಪಡೆದುಕೊಂಡರು. ಭರತ್ ಒಟ್ಟು 9 ಅಂಕಗಳನ್ನು ತಂದುಕೊಟ್ಟರು. ಸೌರಭ್ ನಂದಾಲ್, ಪ್ರತೀಕ್, ಸರ್ಜೀತ್ ಸಿಂಗ್ ಡಿಫೆಂಡರ್ ಗಳಾಗಿ ಉತ್ತಮ ಪ್ರದರ್ಶನ ನೀಡಿದರು.
ತಮಿಳ್ ತಲೈವಾಸ್ ಪರವಾಗಿ ನರೇಂದರ್ 12 ರೈಡಿಂಗ್ ಪಾಯಿಂಟ್ ಪಡೆದು ಗೂಳಿ ಪಡೆ ವಿರುದ್ಧ ಹೋರಾಟ ನೀಡಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಅಜಿಂಕ್ಯ ಪವಾರ್ 6 ರೈಡಿಂಗ್ ಮಾತ್ರ ಪಡೆಯಲು ಸಾಧ್ಯವಾಯಿತು.
ಕೊನೆಯ ಎರಡು ಮೂರು ನಿಮಿಷಗಳವರೆಗೆ ಉಭಯ ತಂಡಗಳ ಸ್ಕೋರ್ ಸಮನಾಗಿತ್ತು, ಎರಡೂ ತಂಡಗಳು ಒಂದೊಂದೆ ಅಂಕದಲ್ಲಿ ಮೇಲುಗೈ ಸಾಧಿಸುತ್ತಿದ್ದವು. ಆದರೆ ಕೊನೆಯ ನಿಮಿಷದಲ್ಲಿ ಬೆಂಗಳೂರಿನ ಗೂಳಿಗಳು ಮೇಲುಗೈ ಸಾಧಿಸಿದವು, ಒಂದು ಅಂಕ ಮುನ್ನಡೆ ಪಡೆದುಕೊಂಡು ಗೆದ್ದು ಬೀಗಿದವು. ಈ ಗೆಲುವಿನ ಮೂಲ ಬೆಂಗಳೂರು ಬುಲ್ಸ್ 2023ಕ್ಕೆ ವಿದಾಯ ಹೇಳಿದೆ.












Click it and Unblock the Notifications