RCB IPL 2026 Trophy: ಆರ್ಸಿಬಿಯ ಒರಿಜಿನಲ್ ಟ್ರೋಫಿ ಹಿಂಪಡೆದ ಬಿಸಿಸಿಐ: ಇಲ್ಲಿದೆ ಕಾರಣ
RCB IPL 2026 Trophy: ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಆರ್ಸಿಬಿಯು ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಆದರೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿಯಿದ್ದ ಒರಿಜಿನಲ್ ಟ್ರೋಫಿಯನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಇದಕ್ಕೆ ಕಾರಣ ಏನು ಹಾಗೂ ನಿಯಮಗಳು ಹೇಳುವುದೇನು? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ಗಳಲ್ಲಿ ಐಪಿಎಲ್ ಕೂಡ ಒಂದಾಗಿದೆ. ಐಪಿಎಲ್ ಫೈನಲ್ ಪಂದ್ಯ ಮುಗಿದ ತಕ್ಷಣ ಸಾಮಾನ್ಯವಾಗಿ ವಿಜೇತ ತಂಡವು ಟ್ರೋಫಿ ಎತ್ತಿ ಹಿಡಿದು ಇಡೀ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಮಾಡುತ್ತದೆ. ಆಟಗಾರರು ಟ್ರೋಫಿ ಹಿಡಿದು ಮೈದಾನವಿಡೀ ಓಡಾಡುತ್ತಾ ಅದಕ್ಕೆ ಮುತ್ತಿಕ್ಕಿ ಸಣ್ಣ ಮಕ್ಕಳಂತೆ ಸಂಭ್ರಮಿಸುತ್ತಾರೆ. ಇದನ್ನು ನೋಡುವ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಈ ಕಪ್ ಇನ್ಮುಂದೆ ಚಾಂಪಿಯನ್ಸ್ ತಂಡದ ಶೋಕೇಸ್ ಸೇರಲಿದೆ ಎಂದೇ ಭಾವಿಸುತ್ತಾರೆ.

ಅಸಲಿ ಟ್ರೋಫಿ ವಾಪಾಸ್ ಯಾಕೆ?
ಆದರೆ ಐಪಿಎಲ್ ನಿಯಮಾವಳ ಪ್ರಕಾರ, ನೀವು ಮೈದಾನದಲ್ಲಿ ನೋಡುವ ಆ ಅಸಲಿ ಟ್ರೋಫಿ ಎಂದಿಗೂ ವಿಜೇತ ತಂಡದ ಬಳಿ ಶಾಶ್ವತವಾಗಿ ಉಳಿಯುವುದಿಲ್ಲ. ಅಚ್ಚರಿಯಾದರೂ ಇದೇ ಸತ್ಯ. ಐಪಿಎಲ್ ಆರಂಭ ಆದಾಗಿನಿಂದ ಇಂದಿನವರೆಗೆ ಬಿಸಿಸಿಐ ಬಳಿ ಇರುವುದು ಕೇವಲ ಒಂದೇ ಒಂದು ಅಸಲಿ ಟ್ರೋಫಿ ಮಾತ್ರ. ಪ್ರತಿ ವರ್ಷವೂ ಫೈನಲ್ ಪಂದ್ಯದ ವೇದಿಕೆಯ ಮೇಲೆ ತರಲಾಗುವ ಕಪ್ ಇದೇ ಆಗಿರುತ್ತದೆ.
ಐಪಿಎಲ್ ಆಡಳಿತ ಮಂಡಳಿಗೆ ಟ್ರೋಫಿ ವಾಪಾಸ್
ಫೈನಲ್ ಪಂದ್ಯ ಮುಗಿದ ರಾತ್ರಿ ವಿಜೇತ ತಂಡದ ಆಟಗಾರರು ಮೈದಾನದಲ್ಲಿ ಹಾಗೂ ಡ್ರೆಸ್ಸಿಂಗ್ ರೂಮ್ನಲ್ಲಿ ತಡರಾತ್ರಿಯವರೆಗೆ ಫೋಟೋ ಶೂಟ್ ಮತ್ತು ಪಾರ್ಟಿ ಮಾಡಲು ಈ ಒರಿಜಿನಲ್ ಟ್ರೋಫಿಯನ್ನೇ ಬಳಸುತ್ತಾರೆ. ಆದರೆ ಈ ಅದ್ಧೂರಿ ಆಚರಣೆಗಳು ಮುಗಿದ ಕೆಲವೇ ಗಂಟೆಗಳಲ್ಲಿ ಅಂದರೆ ಮರುದಿನ ಬೆಳಗ್ಗೆ ಅದನ್ನು ಅತ್ಯಂತ ಸುರಕ್ಷಿತವಾಗಿ ಐಪಿಎಲ್ ಆಡಳಿತ ಮಂಡಳಿಗೆ ಮರಳಿ ಒಪ್ಪಿಸಲಾಗುತ್ತದೆ.
ಒರಿಜಿನಲ್ ಟ್ರೋಫಿ ಎಲ್ಲಿ ಇಡಲಾಗುತ್ತದೆ?
ಒರಿಜಿನಲ್ ಕಪ್ ಅನ್ನು ಬಿಸಿಸಿಐನ ಪ್ರಧಾನ ಕಚೇರಿಯಲ್ಲಿ ಇಡಲಾಗುತ್ತದೆ. ಚಾಂಪಿಯನ್ ಪಟ್ಟ ಅಲಂಕರಿಸಿದ ಫ್ರಾಂಚೈಸಿಗೆ ಅದರ ಬದಲಾಗಿ ಅದೇ ರೀತಿಯ ಹೋಲಿಕೆ ಇರುವ ಬೇರೆ ನಕಲಿ ಟ್ರೋಫಿಯನ್ನು ನೀಡಲಾಗುತ್ತದೆ. ಈ ರೆಪ್ಲಿಕಾ ಟ್ರೋಫಿಯು ನೋಡಲು ಅಸಲಿ ಕಪ್ನಂತೆಯೇ ಇರುತ್ತದೆ. ಆದರೆ ಅದರ ತೂಕ ಮತ್ತು ಬಳಸಲಾದ ಲೋಹದ ಮೌಲ್ಯದಲ್ಲಿ ಕೊಂಚ ವ್ಯತ್ಯಾಸವಿರುತ್ತದೆ.
ವಿಜೇತ ತಂಡಗಳು ಈ ರೆಪ್ಲಿಕಾ ಟ್ರೋಫಿಯನ್ನೇ ತಮ್ಮ ಮಾಲೀಕರ ಕಚೇರಿ ಅಥವಾ ತಂಡದ ಹೆಮ್ಮೆಯ ಕ್ಯಾಬಿನೆಟ್ನಲ್ಲಿ ಸಾರ್ವಜನಿಕರ ಪ್ರದರ್ಶನಕ್ಕಾಗಿ ಇಟ್ಟುಕೊಳ್ಳುತ್ತವೆ. ಐಪಿಎಲ್ ಟ್ರೋಫಿ ಕೇವಲ ಜಗಮಗಿಸುವ ಕಪ್ ಮಾತ್ರವಲ್ಲ, ಅದರಲ್ಲಿ ಭಾರತೀಯ ಸಂಸ್ಕೃತಿಯ ಅದ್ಭುತ ಸಂದೇಶವೂ ಅಡಗಿದೆ. ಈ ಟ್ರೋಫಿಯ ಮಧ್ಯಭಾಗದಲ್ಲಿ ಭಾರತದ ನಕ್ಷೆಯ ಜೊತೆಗೆ ಸಂಸ್ಕೃತದಲ್ಲಿ ಒಂದು ವಾಕ್ಯವನ್ನು ಬರೆಯಲಾಗಿದೆ
ಸಂಸ್ಕೃತದಲ್ಲಿ ಯತ್ರ ಪ್ರತಿಭಾ ಅವ್ಸರ ಪ್ರಾಪ್ನೋತಿ ಎನ್ನುವ ಪದವನ್ನು ಬರೆಯಲಾಗಿರುತ್ತದೆ. ಇದರ ಸರಳ ಅರ್ಥವೇನೆಂದರೆ, 'ಎಲ್ಲಿ ಪ್ರತಿಭೆಗೆ ಸರಿಯಾದ ಅವಕಾಶ ಸಿಗುತ್ತದೆಯೋ ಅಲ್ಲಿ ಯಶಸ್ಸು ಕಾಯಂ,'. ಐಪಿಎಲ್ನ ಮೂಲ ಉದ್ದೇಶವೇ ಜಗತ್ತಿನ ಮತ್ತು ಭಾರತದ ಯುವ ಪ್ರತಿಭೆಗಳಿಗೆ ಜಾಗತಿಕ ವೇದಿಕೆಯನ್ನು ಕಲ್ಪಿಸಿಕೊಡುವುದಾಗಿದೆ. ಇನ್ನೂ ಈ ವಾಕ್ಯವು ಆ ಆಶಯವನ್ನು ಸಂಪೂರ್ಣವಾಗಿ ಬಿಂಬಿಸುತ್ತದೆ.
ವಿಶ್ವದ ಇತರ ಕ್ರೀಡೆಗಳಲ್ಲೂ ಇದೇ ನಿಯಮವಿದೆಯೇ?
ಕೇವಲ ಐಪಿಎಲ್ ಮಾತ್ರವಲ್ಲದೆ ವಿಶ್ವದ ಬಹುತೇಕ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಇದೇ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಐಸಿಸಿ ಕ್ರಿಕೆಟ್ ವಿಶ್ವಕಪ್, ಫಿಫಾ ಫುಟ್ಬಾಲ್ ವಿಶ್ವಕಪ್ ಹಾಗೂ ಯುರೋಪಿಯನ್ ಚಾಂಪಿಯನ್ಸ್ ಲೀಗ್ಗಳಲ್ಲೂ ಅಸಲಿ ಟ್ರೋಫಿಯನ್ನು ಆಯಾ ಕ್ರೀಡಾ ಸಂಸ್ಥೆಗಳ ಪ್ರಧಾನ ಕಚೇರಿಯಲ್ಲೇ ಇಡಲಾಗುತ್ತದೆ ಮತ್ತು ವಿಜೇತರಿಗೆ ಕೇವಲ ನಕಲಿ ಪ್ರತಿಕೃತಿಯನ್ನು ಮಾತ್ರ ಮನೆಗೆ ಕೊಂಡೊಯ್ಯಲು ಅನುಮತಿ ನೀಡಲಾಗುತ್ತದೆ.
ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಗೆದ್ದ ಬಳಿಕ ಪಡೆದ ಟ್ರೋಫಿ ಅಸಲಿಯಾಗಿದ್ದು, ಮಾರನೇ ದಿನ ಅದನ್ನು ನಿಯಮಾವಳಿಗಳ ಪ್ರಕಾರ ಹಿಂದಿರುಗಿಸಲಾಗಿದೆ. ಅದರ ಬದಲಿಗೆ ರೆಪ್ಲಿಕಾ ಟ್ರೋಫಿಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications