South Africa: ಮೈದಾನದಲ್ಲೇ ಹೊಡೆದಾಡಿಕೊಂಡ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟಿಗರು
ಕ್ರಿಕೆಟ್‌ನಲ್ಲಿ ಆಗಾಗ್ಗೆ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಕೆಲವೊಮ್ಮೆ ಉತ್ತಮವಾಗಿ ಆಡುತ್ತಿರುವ ಆಟಗಾರರ ಏಕಾಗ್ರತೆಯನ್ನು ಹಾಳು ಮಾಡಲು ಸುಮ್ಮನೆ ಕೆಣಕುವುದನ್ನು ಕೂಡ ನೋಡಬಹುದು. ಜಗಳ ಏನಿದ್ದರೂ ಮಾತಿನಲ್ಲೇ ಮುಗಿಯುವುದು ಸಾಮಾನ್ಯ, ಅತಿರೇಕದ ವರ್ತನೆ ತೋರಿಸಿದ ಆಟಗಾರರಿಗೆ ದಂಡ ವಿಧಿಸುವುದು, ಒಂದು ಪಂದ್ಯದಿಂದ ಬ್ಯಾನ್ ಮಾಡುವಂತಹ ಕ್ರಮಗಳನ್ನು ಐಸಿಸಿ ತೆಗೆದುಕೊಳ್ಳುತ್ತದೆ. ಆದರೆ ಮೈದಾನದಲ್ಲೇ ಆಟಗಾರರು ಹೊಡೆದಾಟಕ್ಕಿಳಿಯುವುದು ತೀರಾ ಅಪರೂಪ, ಇಂತಹ ಘಟನೆ ಇದೀಗ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಟೆಸ್ಟ್ ಪಂದ್ಯದ ವೇಳೆ ನಡೆದಿದೆ.
ಢಾಕಾದಲ್ಲಿ ನಡೆದ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ದಿನಗಳ ಪಂದ್ಯದಲ್ಲಿ ಕ್ರಿಕೆಟ್ ಮೈದಾನದಲ್ಲಿ ಈ ಕೆಟ್ಟ ಘಟನೆ ನಡೆಯಿತು. ಬಾಂಗ್ಲಾದೇಶ ಬ್ಯಾಟಿಂಗ್ ಮತ್ತು ದಕ್ಷಿಣ ಆಫ್ರಿಕಾ ಬೌಲಿಂಗ್ ಮಾಡುತ್ತಿದ್ದಾಗ, ಎರಡೂ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಭಾರಿ ಸಂಘರ್ಷಕ್ಕೆ ಕಾರಣವಾಗಿದೆ.

22 ವರ್ಷದ ಬಾಂಗ್ಲಾದೇಶ ಬ್ಯಾಟ್ಸ್‌ಮನ್ ರಿಪನ್ ಮೊಂಡೋಲ್ ಮತ್ತು 29 ವರ್ಷದ ದಕ್ಷಿಣ ಆಫ್ರಿಕಾ ವೇಗಿ ತ್ಸೆಪೊ ನ್ಟುಲಿ ನಡುವಿನ ಮಾತಿನ ಚಕಮಕಿಯ ನಂತರ ಈ ಘಟನೆ ಸಂಭವಿಸಿದೆ. ಮಾತಿನ ಚಕಮಕಿ ನಡುವೆ ತಂಡದ ಇತರ ಆಟಗಾರರು ಈ ಚಕಮಕಿಯಲ್ಲಿ ತೊಡಗಿದರು.
ಇಸ್‌ಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿರುವ ಪ್ರಕಾರ, ಬಾಂಗ್ಲಾದೇಶ ಬ್ಯಾಟರ್ ರಿಪನ್ ಆರಂಭದಲ್ಲಿ ನ್ಟುಲಿಯ ಬೌಲಿಂಗ್‌ನಲ್ಲಿ ನೇರ ಸಿಕ್ಸರ್ ಬಾರಿಸಿದರು, ಇದು ಬೌಲರ್ ಮತ್ತು ಬ್ಯಾಟರ್ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಮೊದಲಿಗೆ ಇಬ್ಬರು ಆಟಗಾರರು ತಳ್ಳಾಟದಲ್ಲಿ ತೊಡಗಿಕೊಂಡರು, ಅದು ಬೇಗನೆ ದೊಡ್ಡ ಜಗಳಕ್ಕೆ ತಿರುಗಿದೆ.
ಅಂಪೈರ್ ಕಮ್ರುಝಾಮನ್ ಅವರು ಆಟಗಾರರನ್ನು ಸಮಧಾನ ಮಾಡಲು ಪ್ರಯತ್ನಿಸಿದರೂ, ನ್ಟುಲಿ ಹಲವು ಬಾರಿ ರಿಪನ್ ಅವರ ಹೆಲ್ಮೆಟ್ ಅನ್ನು ಎಳೆದರು. ನೋಡುತ್ತಿದ್ದ ಕೆಲವು ದಕ್ಷಿಣ ಆಫ್ರಿಕಾದ ಆಟಗಾರರು ಸಹ ಜಗಳ ಶುರು ಮಾಡಿದರು. ರಿಪನ್ ತನ್ನ ಬ್ಯಾಟಿಂಗ್ ಪಾಲುದಾರನ ಕಡೆಗೆ ಚಲಿಸುತ್ತಿದ್ದಂತೆ, ನ್ಟುಲಿ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗೆ ಹೊಡೆದಿದ್ದಾರೆ.
ಇನ್ನೂ ಯಾವುದೇ ತಕ್ಷಣದ ಕ್ರಮ ಕೈಗೊಂಡಿಲ್ಲ, ಆದರೆ ನಿರ್ಬಂಧಗಳನ್ನು ವಿಧಿಸುವ ಮೊದಲು ಅಂಪೈರ್‌ಗಳು ಅಧಿಕೃತ ವರದಿಯನ್ನು ಸಲ್ಲಿಸಲಿದ್ದಾರೆ. ಈ ಜಗಳಕ್ಕೂ ಮುನ್ನ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತಾ ಎನ್ನುವ ಬಗ್ಗೆ ವರದಿಯಾಗಿಲ್ಲ. ಜಗಳದ ಮೂರು ಎಸೆತಗಳ ನಂತರ, ನ್ಟುಲಿ ಚೆಂಡನ್ನು ಬೌಲಿಂಗ್ ಮಾಡಿದ ನಂತರ ರಿಪನ್ ಕಡೆಗೆ ಎಸೆದರು, ಅದನ್ನು ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ತಡೆದಿದ್ದಾರೆ.
ವರ್ತನೆಗೆ ಆಕ್ರೋಶ
ಕಾಮೆಂಟೆಟೇರ್ ನಬಿಲ್ ಕೈಸರ್ ಘಟನೆಯನ್ನು ಖಂಡಿಸಿದ್ದಾರೆ. "ಇದು ಅತಿರೇಖದ ವರ್ತನೆ, ಇದನ್ನು ಸಹಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ನಾವು ಕ್ರಿಕೆಟ್ ಮೈದಾನದಲ್ಲಿ ಮಾತಿನ ಚಕಮಕಿಗಳನ್ನು ನೋಡುತ್ತೇವೆ ಆದರೆ ಇಂತಹ ಜಗಳವನ್ನು ನೋಡುವುದಿಲ್ಲ. ನ್ಟುಲಿ ಒಂದು ಹಂತದಲ್ಲಿ ರಿಪನ್ ಅವರ ಹೆಲ್ಮೆಟ್‌ಗೆ ಹೊಡೆದರು" ಎಂದಿದ್ದಾರೆ.
ವರದಿಯ ಪ್ರಕಾರ, ಅಧಿಕೃತ ಕ್ರಮ ಕೈಗೊಳ್ಳುವ ಮೊದಲು ಪಂದ್ಯದ ರೆಫರಿ ಘಟನೆಯ ವರದಿಗಳನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಎರಡಕ್ಕೂ ಸಲ್ಲಿಸಿದ್ದಾರೆ.












Click it and Unblock the Notifications