Bangladesh vs Pakistan: ತವರಿನಲ್ಲೇ ಪಾಕಿಸ್ತಾನಕ್ಕೆ ಮುಖಭಂಗ; ಟೆಸ್ಟ್ ಸರಣಿ ಗೆದ್ದ ಬಾಂಗ್ಲಾದೇಶ
ಪಾಕಿಸ್ತಾನಕ್ಕೆ ತವರಿನಲ್ಲೇ ಭಾರಿ ಮುಖಭಂಗವಾಗಿದೆ. ಬಾಂಗ್ಲಾದೇಶ ತಂಡ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ವೈಟ್‌ವಾಶ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಪಾಕಿಸ್ತಾನದಲ್ಲಿ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಮೊದಲ ಏಷ್ಯನ್ ತಂಡ ಎನ್ನುವ ದಾಖಲೆ ಬರೆದಿದೆ. 2009 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಬಳಿಕ ಇದು ಎರಡನೇ ಬಾರಿ ಬಾಂಗ್ಲಾದೇಶ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದೆ. ತವರಿನ ಹೊರಗೆ ಇದು ಮೊದಲ ಟೆಸ್ಟ್ ಸರಣಿ ಗೆಲುವಾಗಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಸೋತಿದ್ದ ಪಾಕಿಸ್ತಾನ ಎರಡನೇ ಟೆಸ್ಟ್ ತಂಡದಲ್ಲಿ ವಾಪಸಾತಿ ಮಾಡುವ ಉತ್ಸಾಹದಲ್ಲಿತ್ತು, ಆದರೆ ಬಾಂಗ್ಲಾದೇಶ ಸುಲಭವಾಗಿ ಸೋಲೊಪ್ಪಿಕೊಳ್ಳಲು ತಯಾರಾಗಿರಲಿಲ್ಲ. ರೋಚಕ ಹೋರಾಟ ನೀಡಿದ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಆಘಾತ ನೀಡಿತು.
ಲಿಟ್ಟನ್ ದಾಸ್ ಶತಕ
ಸೈಮ್ ಅಯ್ಯೂಬ್, ಶಾನ್ ಮಸೂದ್ ಮತ್ತು ಅಘಾ ಸಲ್ಮಾನ್ ಅರ್ಧಶತಕಗಳನ್ನು ಗಳಿಸುವ ಮೂಲಕ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 274 ರನ್ ಗಳಿಸಿತು. ಬಾಬರ್ ಅಜಮ್ (31), ಅಬ್ದುಲ್ಲಾ ಶಫೀಕ್ (0), ಸೌದ್ ಶಕೀಲ್ (16), ಮತ್ತು ಮೊಹಮ್ಮದ್ ರಿಜ್ವಾನ್ (29) ಉತ್ತಮ ಪ್ರದರ್ಶನ ನೀಡದ ಕಾರಣ ಪಾಕಿಸ್ತಾನ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು.
ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ 26 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು, ಲಿಟ್ಟನ್ ದಾಸ್ ಈ ಸಂದರ್ಭದಲ್ಲಿ ಬಾಂಗ್ಲಾದೇಶಕ್ಕೆ ಆಸರೆಯಾದರು. ಅಮೋಘ ಶತಕ ಸಿಡಿಸುವ ಮೂಲಕ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 262 ರನ್ ಗಳಿಸಲು ನೆರವಾದರು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಕೇವಲ 172 ರನ್‌ಗಳಿಗೆ ಆಲೌಟ್ ಆಯಿತು. ಹಸನ್ ಮಹಮೂದ್ 5 ವಿಕೆಟ್‌ಗಳನ್ನು ಪಡೆದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಐತಿಹಾಸಿಕ ಗೆಲುವಿಗಾಗಿ ಬಾಂಗ್ಲಾದೇಶ 185 ರನ್ ಗಳಿಸಬೇಕಿತ್ತು, ಒಂದು ಹಂತದಲ್ಲಿ ಆತಂಕಗೊಂಡರೂ ಅಂತಿಮವಾಗಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಪಾಕಿಸ್ತಾನದ ಕಳಪೆ ಪ್ರದರ್ಶನ ನೋಡಿದ ಅಭಿಮಾನಿಗಳು ಈಗ ಉರಿದು ಬೀಳುತ್ತಿದ್ದಾರೆ, ಮಾಜಿ ಆಟಗಾರರು ಕೂಡ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸೋಲಿನಿಂದ ವಿಶ್ವ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿದೆ.












Click it and Unblock the Notifications