Asian Games: ಶ್ರೀಲಂಕಾ ವಿರುದ್ಧ ರೋಚಕ ಹಣಾಹಣಿಯಲ್ಲಿ ಗೆದ್ದ ಭಾರತ ಮಹಿಳಾ ತಂಡಕ್ಕೆ ಚಿನ್ನ
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸಲಾಗಿತ್ತು. ಮೊದಲ ಆವೃತ್ತಿಯಲ್ಲೇ ಭಾರತ ತಂಡ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಚೀನಾದ ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ಶ್ರೀಲಂಕಾ ತಂಡವನ್ನು 19 ರನ್‌ಗಳಿಂದ ಸೋಲಿಸಿತು. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಮಂದಾನ, ರೋಡ್ರಿಗಸ್ ಉತ್ತಮ ಆಟ
ಬ್ಯಾಟಿಂಗ್ ಮಾಡಲು ಕಷ್ಟಕರವಾದ ಪಿಚ್‌ನಲ್ಲಿ ಸ್ಮೃತಿ ಮಂದಾನ ಮತ್ತು ಜೆಮಿಮಾ ರೋಡ್ರಿಗಸ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮಂದಾನ 45 ಎಸೆತಗಳಲ್ಲಿ 46 ರನ್ ಗಳಿಸಿದರೆ, ರೋಡ್ರಿಗಸ್ 40 ಎಸೆತಗಳಲ್ಲಿ 42 ರನ್ ಗಳಿಸಿದರು.
ಇವರಿಬ್ಬರನ್ನೂ ಹೊರತುಪಡಿಸಿದರೆ ಭಾರತದ ಯಾವೊಬ್ಬ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಖಲಿಸಲಿಲ್ಲ. ರಿಷಾ ಘೋಷ್, ಶೆಫಾಲಿ ವರ್ಮಾ ತಲಾ 9 ರನ್ ಗಳಿಸಿದರು. ಅಂತಿಮವಾಗಿ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿತು. ಶ್ರೀಲಂಕಾ ಪರ ಪ್ರಬೋಧಿನಿ, ಸುಗಂಧಿಕಾ ಕುಮಾರಿ, ಇನೋಕಾ ರಣವೀರ ತಲಾ ಎರಡು ವಿಕೆಟ್ ಪಡೆದರು.
ಮೋಡಿ ಮಾಡಿದ ತಿತಾಸ್ ಸಧು
ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ಮೊದಲ ಓವರ್ ನಲ್ಲೇ 13 ರನ್ ಗಳಿಸಿ ಉತ್ತಮ ಆರಂಭ ಪಡೆಯಿತು. ಆದರೆ ಮೂರನೇ ಓವರ್ ನಲ್ಲಿ ದಾಳಿಗೆ ಇಳಿದ ತಿತಾಸ್ ಸಧು ಒಂದೇ ಓವರ್ ನಲ್ಲಿ ಎರಡು ವಿಕೆಟ್ ಪಡೆದು ಶ್ರೀಲಂಕಾಗೆ ಆಘಾತ ನೀಡಿದರು.
ನಂತರ ತಮ್ಮ ಎರಡನೇ ಓವರ್ ನ ಮೊದಲ ಎಸೆತದಲ್ಲೇ ಪ್ರಮುಖ ಬ್ಯಾಟರ್ ಚಾಮರಿ ಅಟಪಟ್ಟು ಅವರ ವಿಕೆಟ್ ಪಡೆದು ಶ್ರೀಲಂಕಾ ಗೆಲುವಿನ ಆಸೆಗೆ ಕಡಿವಾಣ ಹಾಕಿದರು. ಹಾಸಿನಿ ಪೆರೇರಾ (25) , ನೀಲಾಕ್ಷಿ ಡಿ ಸಿಲ್ವ (23) ಗೆಲುವಿಗೆ ಹೋರಾಟ ಮಾಡಿದರೂ ಕೂಡ ಲಂಕಾ ಗೆಲುವಿಗೆ ಸಹಾಯ ಮಾಡಲಿಲ್ಲ.
ಅಂತಿಮವಾಗಿ ಶ್ರೀಲಂಕಾ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 97 ರನ್ ಮಾತ್ರ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ತಿತಾಸ್ ಸಧು 4 ಓವರ್ ನಲ್ಲಿ 3 ವಿಕೆಟ್ ಪಡೆದು ಕೇವಲ 6 ರನ್ ಮಾತ್ರ ಬಿಟ್ಟುಕೊಟ್ಟರು. ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಮತ್ತು ದೇವಿಕಾ ವೈದ್ಯ ತಲಾ ಒಂದು ವಿಕೆಟ್ ಪಡೆದರು.












Click it and Unblock the Notifications