Mohammed Siraj: ಫೈನಲ್ ಪಂದ್ಯದ ನಂತರ ಜಗಮೆಚ್ಚುವ ಕೆಲಸ ಮಾಡಿದ ಸಿರಾಜ್
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ತಮ್ಮ ಜೀವಮಾನದ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಭಾರತ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 6 ವಿಕೆಟ್ ಪಡೆದ ಸಿರಾಜ್ ಲಂಕಾ ತಂಡವನ್ನು 50 ರನ್‌ಗೆ ಆಲೌಟ್ ಮಾಡುವಲ್ಲಿ ಪ್ರಮುಖ ಕಾರಣವಾಗಿದ್ದರು.
ಪಂದ್ಯದ ಬಳಿಕ ಸಹಜವಾಗಿವೇ ಸಿರಾಜ್ ಅವರ ಪ್ರದರ್ಶಕ್ಕೆ ತಕ್ಕಂತೆ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದರೆ, ತಮಗೆ ಸಿಕ್ಕ ಪ್ರಶಸ್ತಿ ಹಣವನ್ನು ಕೊಲಂಬೋ ಮೈದಾನದ ಸಿಬ್ಬಂದಿಗೆ ನೀಡುವ ಮೂಲಕ ಕ್ರೀಡಾಸ್ಪೂರ್ತಿ ಮೆರೆದರು.

ಬಹುಮಾನದ ಹಣವನ್ನು ಮೈದಾನದ ಸಿಬ್ಬಂದಿಗೆ ಅರ್ಪಿಸಿ ಮಾತನಾಡಿದ ಅವರು, "ಅವರು ಬಹಳಷ್ಟು ಮನ್ನಣೆಗೆ ಅರ್ಹರು ಎಂದು ನಾನು ಭಾವಿಸುತ್ತೇನೆ. ಅವರ ಕೆಲಸವಿಲ್ಲದೆ ಟೂರ್ನಿ ಮುಂದುವರಿಯುತ್ತಿರಲಿಲ್ಲ" ಎಂದು ಸಿರಾಜ್ ಪಂದ್ಯದ ನಂತರದ ಹೇಳಿದರು.
ಪ್ರಶಸ್ತಿಯ ಬಹುಮಾನದ ಮೊತ್ತ 5,000 ಯುಎಸ್ ಡಾಲರ್ ಅಥವಾ 4.15 ಲಕ್ಷ ರೂಪಾಯಿಗಳನ್ನು ಅವರು ಮೈದಾನದ ಸಿಬ್ಬಂದಿಗೆ ನೀಡಿದರು. ಮೊಹಮ್ಮದ್ ಸಿರಾಜ್ ಅವರ ಕೆಲಸಕ್ಕೆ ಭಾರಿ ಪ್ರಶಂಸೆ ಕೂಡ ವ್ಯಕ್ತವಾಗಿದೆ. ಒಂದು ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ಸಿರಾಜ್ ಅವರ ದಾಖಲೆಯ 6/21 ಸ್ಪೆಲ್‌ಗಾಗಿ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಭಾರತ ತನ್ನ 8ನೇ ಏಷ್ಯಾಕಪ್ ಗೆದ್ದ ಸಂಭ್ರಮಿಸಿದೆ.
ಮೈದಾನ ಸಿಬ್ಬಂದಿಗೆ 41.54 ಲಕ್ಷ ಬಹುಮಾನ ಘೋಷಣೆ
ಫೈನಲ್ ಪಂದ್ಯಕ್ಕೆ ಮುನ್ನ ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಕ್ಯಾಂಡಿ ಮತ್ತು ಕೊಲಂಬೊದ ಮೈದಾನ ಸಿಬ್ಬಂದಿಗೆ 50,000 ಯುಎಸ್ ಡಾಲರ್ ಅಥವಾ 41.54 ಲಕ್ಷ ರೂಪಾಯಿ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
ಈ ಬಾರಿಯ ಏಷ್ಯಾಕಪ್ ಪಂದ್ಯಾವಳಿಗೆ ಮಳೆಯ ಕಾಟ ಹೆಚ್ಚಾಗಿತ್ತು. ಪಂದ್ಯದಲ್ಲಿ ಹಲವು ಬಾರಿ ಮಳೆ ಕಾಟ ಕೊಡುತ್ತಿತ್ತು. ಪ್ರತಿ ಬಾರಿ ಮಳೆ ಬಂದಾಗಲು ಸಿಬ್ಬಂದಿ ಇಡೀ ಮೈದಾನವನ್ನು ಮುಚ್ಚುತ್ತಿದ್ದರು, ಮಳೆ ನಿಲ್ಲುತ್ತಿದ್ದಂತೆ ಮೈದಾನವನ್ನು ಒಣಗಿಸಲು ಭಾರಿ ಶ್ರಮ ಪಡುತ್ತಿದ್ದರು. ಮೈದಾನದ ಸಿಬ್ಬಂದಿ ಬಗ್ಗೆ ಕ್ರಿಕೆಟಿಗರು ಸೇರಿದಂತೆ ನೋಡುಗರು ಸಗ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಏಷ್ಯಾ ಕಪ್ ವೇಳಾಪಟ್ಟಿಯಂತೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದ ಮೈದಾನದ ಸಿಬ್ಬಂದಿ ಹಗಲಿರುಳು ಶ್ರಮಿಸಿದರು. ಎಸಿಸಿ ಪಂದ್ಯಾವಳಿಯನ್ನು ಕೊಲಂಬೊದಿಂದ ಹೊರಕ್ಕೆ ಸ್ಥಳಾಂತರಿಸಲು ಯೋಚಿಸುತ್ತಿತ್ತು ಆದರೆ ಅಲ್ಲೇ ಪಂದ್ಯಗಳನ್ನು ನಡೆಸಲು ನಿರ್ಧರಿಸಿತು.












Click it and Unblock the Notifications