Asia Cup 2023: ಸೂಪರ್ 4 ಪಂದ್ಯಗಳ ಸ್ಥಳ ಬದಲಾವಣೆ ಸಾಧ್ಯತೆ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಏಷ್ಯಾ ಕಪ್ 2023 ರ ಸೂಪರ್ 4 ಪಂದ್ಯಗಳನ್ನು ಕೊಲಂಬೊದಿಂದ ಡಂಬುಲಾಗೆ ಸ್ಥಳಾಂತರಿಸಲು ಯೋಜಿಸುತ್ತಿದೆ. ಶ್ರೀಲಂಕಾದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಪಂದ್ಯಗಳನ್ನು ಸ್ಥಳಾಂತರಿಗೊಳಿಸುವ ಸಾಧ್ಯತೆ ಇದೆ.
ಏಷ್ಯಾ ಕಪ್ 2023 ರ ಭಾರತ-ಪಾಕಿಸ್ತಾನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಭಾರತ ಇನ್ನಿಂಗ್ಸ್ ಮುಗಿದ ಬಳಿಕ ಪಾಕಿಸ್ತಾನ ತಂಡಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ಕೂಡ ಸಿಗಲಿಲ್ಲ, ಇದರಿಂದ ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಿಕೆ ಮಾಡಲಾಯಿತು. ಪಾಕಿಸ್ತಾನ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.

ಸೆಪ್ಟೆಂಬರ್ 6 ರಂದು ಪ್ರಾರಂಭವಾಗುವ ಸೂಪರ್ 4 ಪಂದ್ಯಗಳಲ್ಲಿ ಕೊಲಂಬೊದಲ್ಲಿ ಹವಾಮಾನ ಮತ್ತಷ್ಟು ಹದಗೆಡುವ ಮುನ್ಸೂಚನೆ ನೀಡಲಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಶ್ರೀಲಂಕಾದ ರಾಜಧಾನಿಯಲ್ಲಿನ ಪರಿಸ್ಥಿತಿಯ ಬಗ್ಗೆ ತಂಡಗಳಿಗೆ ತಿಳಿಸಲಾಗಿದೆ ಪಲ್ಲೆಕೆಲೆ ಮತ್ತು ದಂಬುಲ್ಲಾವನ್ನು ಪರ್ಯಾಯ ಆಯ್ಕೆಗಳಾಗಿ ನೋಡಲಾಗುತ್ತಿದೆ.
ದಂಬುಲಾದಲ್ಲಿ ಮಳೆ ಕಡಿಮೆ
ಶ್ರೀಲಂಕಾ ಮಂಡಳಿಯು ಆರಂಭದಲ್ಲಿ ಏಷ್ಯಾ ಕಪ್ ಪಂದ್ಯಗಳಿಗೆ ದಂಬುಲ್ಲಾ ಕ್ರೀಡಾಂಗಣವನ್ನು ಸೂಚಿಸಿತ್ತು ಎಂದು ವರದಿಗಳು ತಿಳಿಸಿವೆ, ಏಕೆಂದರೆ ಇದು ದೇಶದ ಮಧ್ಯ ಭಾಗದಲ್ಲಿರುವ ಒಣ ಪ್ರದೇಶವಾಗಿದೆ. ಆದಾಗ್ಯೂ, ಕಷ್ಟಕರವಾದ ಪ್ರಯಾಣದ ಕಾರಣ ಪ್ರಸಾರಕರು ಮತ್ತು ತಂಡಗಳಿಂದ ಹಿಂಜರಿಕೆಯ ನಂತರ ಮಂಡಳಿಯು ಸ್ಥಳಗಳನ್ನು ಪಲ್ಲೆಕೆಲೆ ಮತ್ತು ಕೊಲಂಬೊಗೆ ಬದಲಾಯಿಸಲಾಯಿತು. ಕೊಲಂಬೊದಲ್ಲಿ ಮೊದಲ ಸೂಪರ್ 4 ಪಂದ್ಯ ಆರಂಭವಾಗಲೂ ಇನ್ನೂ ಒಂದು ವಾರ ಇದ್ದರೂ, ಹವಾಮಾನ ಮುನ್ಸೂಚನೆಯು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಬದಲಾವಣೆಗಳನ್ನು ಮಾಡಲು ಎಸಿಸಿ ಚಿಂತನೆ ನಡೆಸುತ್ತಿದೆ.
ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ
ಏಷ್ಯಾಕಪ್ 2023ರ ಪಂದ್ಯಾವಳಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದೆ. ಈಗಾಗಲೇ ಉದ್ಘಾಟನಾ ಪಂದ್ಯ ಪಾಕಿಸ್ತಾನದ ಮುಲ್ತಾನ್‌ನಲ್ಲಿ ನಡೆದಿತ್ತು. ಲಾಹೋರ್ ನ ಗಡಾಫಿ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಭಾನುವಾರ ಮುಖಾಮುಖಿಯಾಗಿವೆ. ಅಫ್ಘಾನಿಸ್ತಾನ ಶ್ರೀಲಂಕಾ ನಡುವಿನ ಇನ್ನೊಂದು ಪಂದ್ಯ ಕೂಡ ಪಾಕಿಸ್ತಾನದಲ್ಲಿ ನಡೆಯಲಿದೆ. ಅದಾದ ಬಳಿಕ ಪಾಕಿಸ್ತಾನ ಮತ್ತು ಬಿ2 ತಂಡದ ನಡುವೆ ಸೂಪರ್ 4 ಪಂದ್ಯ ಲಾಹೋರ್ ನಲ್ಲಿ ನಡೆಯಲಿದೆ.
ಅದಾದ ಬಳಿಕ ಉಳಿದ ಎಲ್ಲಾ ಸೂಪರ್ 4 ಮತ್ತು ಫೈನಲ್ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಭಾರತ ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಇನ್ನೂ ಎರಡು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಸೂಪರ್ 4 ಹಂತದಲ್ಲಿ ಒಂದು ಬಾರಿ ಮತ್ತು ಎರಡೂ ತಂಡಗಳು ಫೈನಲ್‌ಗೆ ತಲುಪಿದರೆ ಈ ಟೂರ್ನಿಯಲ್ಲಿ ಮೂರನೇ ಮುಖಾಮುಖಿಯಾಗಲಿವೆ.












Click it and Unblock the Notifications