Andy Flower: ಈ ಬೌಲರ್ ಅಲಭ್ಯತೆ ದೊಡ್ಡ ಹೊಡೆತ ಎಂದ ಲಕ್ನೋ ಸೂಪರ್ ಜೈಂಟ್ಸ್ ಮುಖ್ಯ ಕೋಚ್
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆರಂಭಕ್ಕೆ ಮುನ್ನವೇ ಐಪಿಎಲ್‌ನ ಹಲವು ತಂಡಗಳಿಗೆ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೂಡ ಪ್ರಮುಖ ಬೌಲರ್ ಹೊರಬಿದ್ದಿರುವುದು ಸಮಸ್ಯೆಯಾಗಿದೆ. ಎಡಗೈ ಮಧ್ಯಮ ವೇಗದ ಬೌಲರ್ ಮೊಹ್ಸಿನ್ ಖಾನ್ ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅವರು ಆಡುವುದು ಅನುಮಾನವಾಗಿದೆ.
ಮೊಹ್ಸಿನ್ ಖಾನ್ ಅಲಭ್ಯವಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಒಪ್ಪಿಕೊಂಡಿದ್ದಾರೆ. 2023ರ ಐಪಿಎಲ್‌ನಲ್ಲಿ ಅವರು ಅರ್ಧಕ್ಕಿಂತ ಹೆಚ್ಚಿನ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಆತ ಆಡದಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಪಂದ್ಯಾವಳಿಯ ಕೊನೆಯ ಪಂದ್ಯಗಳಲ್ಲಿ ಮೈದಾನಕ್ಕೆ ಮರಳಬಹುದು ಎಂದು ಮಾಧ್ಯಮ ಸಂವಾದದ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಸಾಕಷ್ಟು ಸ್ಪಷ್ಟವಾಗಿ ಅವರು ಪಂದ್ಯಾವಳಿಯ ಕೊನೆಯ ಹಂತದಲ್ಲಿ ಫಿಟ್ ಆದರೆ, ತಂಡಕ್ಕೆ ಬೋನಸ್ ಎಂದು ಪರಿಗಣಿಸುತ್ತೇನೆ. ಆದರೆ, ಅವರು ಕಡಿಮೆ ಸಮಯದಲ್ಲಿ ಸಂಪೂರ್ಣವಾಗಿ ಫಿಟ್ ಆಗುವ ಬಗ್ಗೆ ನನಗೆ ಭರವಸೆ ಇಲ್ಲ. ಡೆತ್ ಓವರ್ ಮತ್ತು ಮಧ್ಯಮ ಓವರ್ ಗಳಲ್ಲಿ ನಾವು ದುರ್ಬಲರಾಗಿದ್ದೇವೆಯಾ ಎಂದು ಶೀಘ್ರದಲ್ಲೇ ತಿಳಿಯಲಿದೆ. ಅವರಿಗೆ ಬದಲಾಗಿ ಬೇರೆ ಆಟಗಾರರನ್ನು ಆಯ್ಕೆ ಮಾಡುವ ಬಗ್ಗೆ ನಾವು ಚಿಂತಿಸಲು ಸಾಧ್ಯವಿಲ್ಲ, ನಮ್ಮ ಕೆಲಸ ಮೈದಾನದಲ್ಲಿ ಉತ್ತಮವಾಗಿ ಆಡುವುದು" ಎಂದು ಹೇಳಿದ್ದಾರೆ.
ಕಳೆದ ಆವೃತ್ತಿಯಲ್ಲಿ ಮಿಂಚಿದ್ದ ಮೊಹ್ಸಿನ್ ಖಾನ್
"ಕಳೆದ ಆವೃತ್ತಿಯಲ್ಲಿ ಮೊಹ್ಸಿನ್ ಖಾನ್ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್ ಆಗಿದ್ದರು. ಕೆಲವು ವಾರಗಳ ಅವಧಿಯಲ್ಲೇ ಒಬ್ಬ ಬೌಲರ್ ಎಷ್ಟು ಎತ್ತರಕ್ಕೆ ಏರಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಇದು ಯುವ ಕ್ರಿಕೆಟಿಗರಿಗೆ ರೋಮಾಂಚನಕಾರಿ ವಿಚಾರವಾಗಿದೆ." ಎಂದು ಆಂಡಿ ಫ್ಲವರ್ ಹೇಳಿದ್ದಾರೆ. ಮೊಹ್ಸಿನ್ ಖಾನ್ ಗಾಯಗೊಂಡಿದ್ದರೂ, ಲಕ್ನೋ ತಂಡ ಬದಲೀ ಆಟಗಾರನನ್ನು ಹೆಸರಿಸಿಲ್ಲ, ಅವರು ಶೀಘ್ರವೇ ಫಿಟ್ ಆಗುವ ನಿರೀಕ್ಷೆಯಲ್ಲಿದೆ.

ಮೊಹ್ಸಿನ್ ಖಾನ್ ಕಳೆದ ಐಪಿಎಲ್ ಆವೃತ್ತಿಯಲ್ಲಿ 9 ಪಂದ್ಯಗಳಲ್ಲಿ ಆಡಿದ್ದರೂ, 14.07 ಸರಾಸರಿಯಲ್ಲಿ 14 ವಿಕೆಟ್ ಪಡೆದು ಮಿಂಚಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಗಳಲ್ಲಿ 14 ರನ್ ನೀಡಿ 4 ಪಡೆದು ಪಡೆದಿದ್ದರು. ಕಳೆದ ಆವೃತ್ತಿಯಲ್ಲಿ ಅವರ ಎಕಾನಮಿ ಕೂಡ 5.97 ಇತ್ತು. ಕಡಿಮೆ ಅವಧಿಯಲ್ಲೇ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದರು.
ಮೊದಲನೇ ಪಂದ್ಯಕ್ಕೆ ಡಿ ಕಾಕ್ ಅಲಭ್ಯ
ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2023ರ ಆವೃತ್ತಿಯ ಮೊದಲನೇ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಮೊದಲನೇ ಪಂದ್ಯದಲ್ಲಿ ತಂಡದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಕೂಡ ಅಲಭ್ಯರಾಗಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕಾಗಿ ಆಡುತ್ತಿರುವ ಕಾರಣ ಅವರು ಮೊದಲ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.

ಡಿ ಕಾಕ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಜೊತೆ ವೆಸ್ಟ್ ಇಂಡೀಸ್‌ನ ಕೈಲ್ ಮೇಯರ್ಸ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಲಕ್ನೋ ಸೂಪರ್ ಜೈಂಟ್ಸ್ ಮೊದಲನೇ ಪಂದ್ಯ ಏಪ್ರಿಲ್ 1ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ.












Click it and Unblock the Notifications