ವಿರಾಟ್ ಕೊಹ್ಲಿ ಬಂದಿದ್ರೆ ಮದುವೆ ಸುಸೂತ್ರವಾಗಿ ಆಗ್ತಿತ್ತಾ? ಆರ್ಸಿಬಿ ಮಾಜಿ ವೇಗಿ ಆಕಾಶ್ ದೀಪ್
Akash Deep: ಟೀಮ್ ಇಂಡಿಯಾ ಸ್ಟಾರ್ ವೇಗಿ ಹಾಗೂ ಆರ್ಸಿಬಿ ಮಾಜಿ ಆಟಗಾರ ಆಕಾಶ್ ದೀಪ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ತಮ್ಮ ವಿವಾಹಕ್ಕೆ ದಿಗ್ಗಜರಾದ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರೋಹಿತ್ ಶರ್ಮಾ ಅವರಿಗೆ ಆಹ್ವಾನ ಮಾಡದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಇದಕ್ಕೆ ಕಾರಣವನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ. ಈ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ.
ಭಾರತೀಯ ಕ್ರಿಕೆಟ್ ತಂಡದ ವೇಗಿ ಆಕಾಶ್ ದೀಪ್ ವಾರಣಾಸಿಯಲ್ಲಿ ಬುಧವಾರ (ಜೂನ್ 24) ಅಕ್ಷಿತಾ ರಾಜ್ ಅವರೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯ ಸುಂದರ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬೆನ್ನಲ್ಲೇ ಮದುವೆ ಸಮಾರಂಭದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದೆ. ಟೀಮ್ ಇಂಡಿಯಾದ ದಿಗ್ಗಜರಾದ ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಪಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಆಕಾಶ್ ದೀಪ್ ನೀಡಿದ ಹಾಸ್ಯಭರಿತ ಉತ್ತರವೇ ಇದಕ್ಕೆ ಕಾರಣ.

ಆಕಾಶ್ ದೀಪ್ ಹೇಳಿಕೆ ಭಾರಿ ವೈರಲ್
ಮದುವೆ ಸಮಾರಂಭದ ವೇಳೆ ಬಂದಿದ್ದ ಅತಿಥಿಯೊಬ್ಬರು ಆಕಾಶ್ ದೀಪ್ ಅವರ ಬಳಿ ಬಂದು, 'ಭಾರತೀಯ ಕ್ರಿಕೆಟ್ನ ದಿಗ್ಗಜರಾದ ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಮದುವೆಗೆ ಏಕೆ ಆಹ್ವಾನಿಸಿಲ್ಲ?,' ಎಂದು ನೇರವಾಗಿ ಪ್ರಶ್ನಿಸಿದರು. ಈ ಪ್ರಶ್ನೆಗೆ ಆಕಾಶ್ ದೀಪ್ ಅವರು ಮುಗುಳ್ನಗುತ್ತಲೇ, 'ಒಂದು ವೇಳೆ ಅವರು ಬಂದಿದ್ದರೆ ಇಲ್ಲಿ ಬನಾರಸ್ನಲ್ಲಿ ಮದುವೆ ಸುಸೂತ್ರವಾಗಿ ನಡೆಯಲು ಸಾಧ್ಯವಿತ್ತಾ?' ಎಂದು ಮರುಪ್ರಶ್ನಿಸಿದರು. ಈ ಹೇಳಿಕೆ ಹಿಂದೆ ಮಹತ್ವದ ಉದ್ದೇಶವಿದೆ.
ಆಕಾಶ್ ದೀಪ್ ನೀಡಿದ ಸ್ಪಷ್ಟನೆ ಹೀಗಿದೆ
ಅವರ ಈ ಸಮಯಪ್ರಜ್ಞೆಯ ಹಾಗೂ ಚಾಣಾಕ್ಷ ಉತ್ತರವನ್ನು ಕೇಳಿ ಅಲ್ಲಿ ನೆರೆದಿದ್ದವರೆಲ್ಲರೂ ಜೋರಾಗಿ ನಕ್ಕರು. ಒಂದು ವೇಳೆ ಅಷ್ಟು ದೊಡ್ಡ ಕ್ರಿಕೆಟಿಗರು ಉತ್ತರ ಪ್ರದೇಶದ ವಾರಣಾಸಿಯಂತಹ ಧಾರ್ಮಿಕ ಮತ್ತು ಸದಾ ಜನನಿಬಿಡ ನಗರಕ್ಕೆ ಬಂದರೆ, ಅವರನ್ನು ನೋಡಲು ಅಪಾರ ಜನಸಾಗರವೇ ಹರಿದುಬರುತ್ತಿತ್ತು. ಇದರಿಂದ ಮದುವೆ ಸಮಾರಂಭವನ್ನು ಶಾಂತಿಯುತವಾಗಿ ನಡೆಸುವುದು ಅಸಾಧ್ಯವಾಗುತ್ತಿತ್ತು ಎಂಬುದನ್ನು ಆಕಾಶ್ ದೀಪ್ ಅತ್ಯಂತ ಸರಳವಾಗಿ ತಮಾಷೆಯ ಧಾಟಿಯಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ವಾರಣಾಸಿಯಲ್ಲಿ ವಿವಾಹ ಸಂಭ್ರಮ
ಆಕಾಶ್ ದೀಪ್ ಅವರ ಮದುವೆಯ ಸಂಭ್ರಮವು ಬಿಹಾರದ ರೋಹ್ಟಾಸ್ ಜಿಲ್ಲೆಯ ಅವರ ತವರೂರಾದ ಬಡ್ಡಿ ಗ್ರಾಮದಲ್ಲಿ ನಡೆಯಿತು. ಕುಟುಂಬಸ್ಥರು, ಆಪ್ತ ಸ್ನೇಹಿತರು ಮತ್ತು ಗ್ರಾಮಸ್ಥರೆಲ್ಲರೂ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಅದಾದ ಬಳಿಕ ವಾರಣಾಸಿಯಲ್ಲಿ ವಿವಾಹ ಮಹೋತ್ಸವ ನೆರವೇರಿತು. ಕಳೆದ ಕೆಲವು ತಿಂಗಳುಗಳಿಂದ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಆಕಾಶ್ ದೀಪ್ ಅವರಿಗೆ ಈ ಮದುವೆ ಒಂದು ನೆಮ್ಮದಿಯ ಹಾಗೂ ಅತ್ಯಂತ ಸಂತೋಷದ ಕ್ಷಣವನ್ನು ತಂದುಕೊಟ್ಟಿದೆ ಎನ್ನಲಾಗುತ್ತಿದೆ.
ಆಕಾಶ್ ದೀಪ್ ಕ್ರಿಕೆಟ್ ಪಯಣದ ವಿವರ
ಬಲಗೈ ವೇಗಿ ಆಗಿರುವ ಆಕಾಶ್ ದೀಪ್ ಭಾರತ ತಂಡದ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಟ್ಟು 28 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇನಿಂಗ್ಸ್ ಒಂದರಲ್ಲಿ 60 ರನ್ಗಳಿಗೆ 6 ವಿಕೆಟ್ ಪಡೆದಿರುವುದು ಇವರ ಅತ್ಯುತ್ತಮ ಸಾಧನೆಯಾಗಿದೆ. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದ ವೇಳೆ ಟೆಸ್ಟ್ನಲ್ಲಿ ಭಾರತದ ಪರ 12 ವಿಕೆಟ್ಗಳನ್ನು ಕಬಳಿಸುವ ಮೂಲಕ ಅವರು ಗಮನ ಸೆಳೆದಿದ್ದರು.
ಐಪಿಎಲ್ 2026ರ ಸೀಸನ್ಗಾಗಿ ಇವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡವು ಖರೀದಿಸಿತ್ತು. ಆದರೂ ತೀವ್ರ ಗಾಯದ ಸಮಸ್ಯೆಯಿಂದಾಗಿ ಅವರು ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿಯಬೇಕಾಯಿತು. ಅಲ್ಲದೆ, ಇತ್ತೀಚೆಗೆ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲೂ ಅವರಿಗೆ ಆಡಲು ಸಾಧ್ಯವಾಗಿರಲಿಲ್ಲ. ಇದೀಗ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಕಾಶ್ ದೀಪ್ ಮದುವೆಯ ಸಂಭ್ರಮ ಮುಗಿಸಿ ಶೀಘ್ರದಲ್ಲೇ ಕ್ರಿಕೆಟ್ ಅಂಗಳಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications