ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಸ್ಥಾನದಿಂದ ಅಜಿತ್ ಅಗರ್ಕರ್ ಔಟ್.. ಇಬ್ಬರ ಹೆಸರು ಮುಂಚೂಣಿಯಲ್ಲಿ
Ajit Agarkar: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 95ನೇ ವಾರ್ಷಿಕ ಸಭೆಯು ಮುಂಬೈನಲ್ಲಿರುವ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಈ ವೇಳೆ ಭಾರತೀಯ ಹಿರಿಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಒಪ್ಪಂದದ ಭವಿಷ್ಯದ ಕುರಿತು ಮಹತ್ವದ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. ಈ ನಡುವೆಯೇ ಅವರ ಸ್ಥಾನಕ್ಕೆ ಇಬ್ಬರ ಹೆಸರುಗಳಿ ಕೇಳಿಂದಿವೆ.
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರರಾಗಿರುವ ಅಜಿತ್ ಅಗರ್ಕರ್ ಅವರ ಸೇವಾ ಅವಧಿಯ ಒಪ್ಪಂದವು ಈ ತಿಂಗಳ ಕೊನೆಯಲ್ಲಿ ಅಂತ್ಯಗೊಳ್ಳಲಿದೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸ ಸೇರಿದಂತೆ ಮುಂದಿನ ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡುವ ಮಹತ್ವದ ಜವಾಬ್ದಾರಿ ಆಯ್ಕೆ ಸಮಿತಿಯ ಮೇಲಿದೆ.

ಅಗರ್ಕರ್ ಔಟ್.. ಮುಂಚೂಣಿಯಲ್ಲಿರುವ ಎರಡು ಹೆಸರುಗಳು
ಆದರೆ ಅಗರ್ಕರ್ ಅವರ ಒಪ್ಪಂದವನ್ನು ಮುಂದುವರಿಸಲಾಗುತ್ತದೆಯೇ ಅಥವಾ ಹೊಸಬರಿಗೆ ಅವಕಾಶ ನೀಡಲಾಗುತ್ತದೆಯೇ ಎಂಬ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. ಮಾಹಿತಿ ಪ್ರಕಾರ, ಅಗರ್ಕರ್ ಅವರ ಅಧಿಕಾರಾವಧಿಯನ್ನು ವಿಸ್ತರಿಸದಿರಲು ಬಿಸಿಸಿಐನ ಒಂದು ವಿಭಾಗ ನಿರ್ಧರಿಸಿದ್ದು, ಅವರ ಜಾಗಕ್ಕೆ ಮಾಜಿ ಕ್ರಿಕೆಟಿಗರಾದ ಪಾರ್ಥಿವ್ ಪಟೇಲ್ ಅಥವಾ ಪ್ರಗ್ಯಾನ್ ಓಜಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ.
ಐಪಿಎಲ್ ಅಧ್ಯಕ್ಷರ ಬದಲಾವಣೆಯಾಗಿದ್ಯಾ?
ಬಿಸಿಸಿಐನ ಈ 95ನೇ ವಾರ್ಷಿಕ ಮಹಾಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳು ಹಾಗೂ ಚುನಾವಣಾ ಪ್ರಕ್ರಿಯೆಗಳು ನಡೆಯಲಿವೆ. ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅರುಣ್ ಧುಮಾಲ್ ಹಾಗೂ ಸದಸ್ಯರಾಗಿ ಖೈರುಲ್ ಮಜುಂದಾರ್ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಭೆಗಳಲ್ಲಿ ಬಿಸಿಸಿಐ ಪ್ರತಿನಿಧಿಯಾಗಿ ಹಾಲಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರನ್ನೇ ಮುಂದುವರಿಸುವ ಸಾಧ್ಯತೆಯಿದೆ.
ಅಂಡಮಾನ್ ಮತ್ತು ನಿಕೋಬಾರ್ ಅಸೋಸಿಯೇಷನ್‌ಗೆ ಬಿಸಿಸಿಐನ ಅಸೋಸಿಯೇಟ್ ಸದಸ್ಯತ್ವ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. 2025-26ನೇ ಸಾಲಿನ ಆಡಿಟ್ ಮಾಡಿದ ಲೆಕ್ಕಪತ್ರಗಳ ಅನುಮೋದನೆ ಮತ್ತು 2026-27ನೇ ಸಾಲಿನ ವಾರ್ಷಿಕ ಆಯವ್ಯಯದ ಅಂಗೀಕಾರದ ಕುರಿತು ಚರ್ಚೆ ನಡೆಯಲಿದೆ. ಭಾರತ ತಂಡದ ಸಾಲು ಸಾಲು ಪ್ರಮುಖ ಸರಣಿಗಳು ಇದ್ದು, ಈ ಹಂತದಲ್ಲಿ ಆಯ್ಕೆ ಸಮಿತಿಯ ಸಾರಥ್ಯ ಯಾರ ಕೈಸೇರಲಿದೆ ಎಂಬ ಕುರಿತು ಬಿಸಿಸಿಐ ಕೈಗೊಳ್ಳುವ ನಿರ್ಧಾರ ಅತ್ಯಂತ ಕುತೂಹಲಕಾರಿಯಾಗಿದೆ.
ಅಗರ್ಕರ್ ನಿರ್ಗಮನಕ್ಕೆ ಪ್ರಮುಖ ಕಾರಣಗಳು
2023ರಲ್ಲಿ ಬಿಸಿಸಿಐ ಮುಖ್ಯ ಆಯ್ಕೆಗಾರರಾಗಿ ಅಧಿಕಾರ ವಹಿಸಿಕೊಂಡ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡವು ಗಮನಾರ್ಹ ಸಾಧನೆಗಳನ್ನು ಮಾಡಿತ್ತು. ಆದರೂ ಮಂಡಳಿ ಮತ್ತು ಆಯ್ಕೆ ಸಮಿತಿಯ ನಡುವೆ ಉಂಟಾಗಿರುವ ಕೆಲವು ಭಿನ್ನಾಪ್ರಪ್ರಾಯಗಳೇ ಅವರ ನಿರ್ಗಮನಕ್ಕೆ ಪ್ರಮುಖ ಕಾರಣ ಎಂದು ವರದಿಯಾಗಿದೆ.
ಇತ್ತೀಚೆಗೆ ಹಿರಿಯ ಆಟಗಾರ ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತು ಆಯ್ಕೆ ಸಮಿತಿ ತೆಗೆದುಕೊಂಡ ನಿಲುವಿನ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಈ ನಡುವೆಯೂ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ರೋಹಿತ್ ಅವರನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು. ಇದು ಮಂಡಳಿ ಮತ್ತು ಆಯ್ಕೆಗಾರರ ನಡುವೆ ಅಸಮಾಧಾನ ಹೆಚ್ಚಾಗಲು ಕಾರಣವಾಯಿತು ಎನ್ನಲಾಗಿದೆ.
ಕೊನೆಯ ಸಭೆಯಲ್ಲಿ ಪಾಲ್ಗೊಂಡ ಅಗರ್ಕರ್
ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿ ಹಾಗೂ ಇರಾನಿ ಟ್ರೋಫಿಗೆ ಭಾರತ ತಂಡಗಳನ್ನು ಆಯ್ಕೆ ಮಾಡಲು ಇತ್ತೀಚೆಗೆ ನಡೆದ ಸಭೆಯೇ ಅಜಿತ್ ಅಗರ್ಕರ್ ಅಧ್ಯಕ್ಷತೆಯಲ್ಲಿ ನಡೆದ ಕೊನೆಯ ಆಯ್ಕೆ ಸಭೆ ಎನ್ನಲಾಗುತ್ತಿದೆ. ಈ ಸಭೆಯ ಬಳಿಕ ಬಿಸಿಸಿಐ ವೆಸ್ಟ್ ಇಂಡೀಸ್ ಸರಣಿಗೆ ತಂಡವನ್ನು ಪ್ರಕಟಿಸಿದೆ.
ರೇಸ್‌ನಲ್ಲಿ ಇಬ್ಬರು ಮಾಜಿ ಕ್ರಿಕೆಟಿಗರು..
* ಅಜಿತ್ ಅಗರ್ಕರ್ ಅವರ ಸ್ಥಾನವನ್ನು ತುಂಬಲು ಭಾರತೀಯ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥಿವ್ ಪಟೇಲ್ ಹಾಗೂ ಮಾಜಿ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.
* ಪ್ರಗ್ಯಾನ್ ಓಜಾ: ಇವರು ಈಗಾಗಲೇ ಪೂರ್ವ ವಲಯದ ಪ್ರತಿನಿಧಿಯಾಗಿ ಹಾಲಿ ಆಯ್ಕೆ ಸಮಿತಿಯ ಭಾಗವಾಗಿದ್ದು, ಹಿರಿಯ ಆಯ್ಕೆಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
* ಪಾರ್ಥಿವ್ ಪಟೇಲ್: ಭಾರತ ಪರ ಎಲ್ಲಾ ಮಾದರಿಯ ಕ್ರಿಕೆಟ್ ಆಡಿದ ಅನುಭವ ಹೊಂದಿದ್ದು, ಐಪಿಎಲ್‌ನಲ್ಲೂ ಹಲವು ತಂಡಗಳನ್ನು ಪ್ರತಿನಿಧಿಸಿ ಯಶಸ್ವಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇವರಿಬ್ಬರಲ್ಲಿ ಯಾರಿಗೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರರ ಸಾರಥ್ಯ ಸಿಗಲಿದೆ ಎಂಬುದು ಶೀಘ್ರದಲ್ಲೇ ಬಿಸಿಸಿಐ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಇದೀಗ ಇಡೀ ಭಾರತೀತ ಕ್ರಿಕೆಟ್ ವಲಯದ ಕಣ್ಣು ಅಜಿತ್ ಅಗರ್ಕ್ ಅವರ ಮೇಲೆ ನೆಟ್ಟಿರುವುದಂತೂ ನಿಜ.


Click it and Unblock the Notifications
