ವೈಭವ್ ಸೂರ್ಯವಂಶಿ ನಿಮ್ಮ ನಿಯಮ ಪಾಲಿಸುವ ಅವಶ್ಯಕತೆಯಿಲ್ಲ, ಚಾನ್ಸ್ ಕೊಟ್ಟು ನೋಡಿ: ಎಬಿ ಡಿ ವಿಲಿಯರ್ಸ್
Vaibhav Sooryavanshi: ಐಪಿಎಲ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಇತ್ತೀಚೆಗಷ್ಟೇ ಟೀಮ್ ಇಂಡಿಯಾ ಹಿರಿಯರ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಇದೀಗ ಭಾರತ-ಇಂಗ್ಲೆಂಡ್ ನಡುವೆ ಟಿ20 ಸರಣಿ ನಡೆಯುತ್ತಿದ್ದು, ವೈಭವ್ಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ನೀಡದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ಇದರ ಬೆನ್ನಲ್ಲೇ ಮಿಸ್ಟರ್ 360 ಅಂತಲೇ ಹೆಸರುವಾಸಿಯಾಗಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟ ದಂತಕಥೆ ಎಬಿ ಡಿವಿಲಿಯರ್ಸ್ ಸಹ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ನ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಪದಾರ್ಪಣೆ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಯುವ ಆಟಗಾರನನ್ನು ಭಾರತ ತಂಡದ ಮ್ಯಾನೇಜ್ಮೆಂಟ್ ನಡೆಸಿಕೊಳ್ಳುತ್ತಿರುವ ರೀತಿಗೆ ದಕ್ಷಿಣ ಆಫ್ರಿಕಾದ ಮಾಜಿ ದಿಗ್ಗಜ ಆಟಗಾರ ಎಬಿ ಡಿ ವಿಲಿಯರ್ಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ಸಹಾಯಕ ತರಬೇತುದಾರ ರಿಯಾನ್ ಟೆನ್ ಡೋಸ್ಚೇಟ್ ಅವರ 'ವೇಟ್ ಅಂಡ್ ವಾಚ್' ನೀತಿಯನ್ನು ಡಿ ವಿಲಿಯರ್ಸ್ ವಿರೋಧಿಸಿದ್ದಾರೆ.

ಸೂರ್ಯವಂಶಿಯನ್ನ ಕಣಕ್ಕಿಳಿಸುವುದು ಯಾವಾಗ?
ಇತ್ತೀಚೆಗೆ ಐಪಿಎಲ್ 2026ರ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಕ್ರಮಣಕಾರಿ ಆಟ ಆಡಿದ್ದ 15 ವರ್ಷದ ವೈಭವ್ ಸೂರ್ಯವಂಶಿ 776 ರನ್ ಸಿಡಿಸಿ ಇಡೀ ವಿಶ್ವದ ಗಮನ ಸೆಳೆದಿದ್ದರು. ಈ ಮೂಲಕ ಅವರು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಟಿ-20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರಿಗೆ ಆಡುವ 11ರ ಬಳಗದಲ್ಲಿ ಸ್ಥಾನ ಸಿಗದೆ ಬೆಂಚ್ ಕಾಯಬೇಕಾಯಿತು.
ಅಲ್ಲದೆ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಅವರನ್ನು ಹೊರಗಿಡಲಾಗಿದೆ. ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪ್ರತಿಕ್ರಿಯಿಸಿದ ಎಬಿ ಡಿ ವಿಲಿಯರ್ಸ್, 'ವೈಭವ್ ಸೂರ್ಯವಂಶಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಇನ್ನು ಯಾವಾಗ ಪರಿಚಯಿಸುತ್ತೀರಿ? ಐರ್ಲೆಂಡ್ ವಿರುದ್ಧದ ಸರಣಿಯು ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನ ಅನುಭವ ನೀಡಲು ಅತ್ಯುತ್ತಮ ವೇದಿಕೆಯಾಗಿತ್ತು. ಆದರೆ ಅವರಿಗೆ ಅಲ್ಲಿ ಅವಕಾಶ ಸಿಗದೇ ಇರುವುದು ನಿಜಕ್ಕೂ ದುರದೃಷ್ಟಕರ,' ಎಂದು ಹೇಳಿದ್ದಾರೆ.
ಕೋಚ್ ಹೇಳಿಕೆಗೆ ಡಿ ವಿಲಿಯರ್ಸ್ ತಿರುಗೇಟು
ಸೂರ್ಯವಂಶಿ ಪದಾರ್ಪಣೆಯ ವಿಳಂಬದ ಬಗ್ಗೆ ಮಾತನಾಡಿದ್ದ ಭಾರತದ ಸಹಾಯಕ ಕೋಚ್ ರಿಯಾನ್ ಟೆನ್ ಡೊಶ್ಚಾಟೆ, 'ವೈಭವ್ ಸೂರ್ಯವಂಶಿ ಅದ್ಭುತ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಂಜು ಸ್ಯಾಮ್ಸನ್ ಅವರಂತಹ ಅನುಭವಿಗಳಿಗೆ ನಾವು ಅವಕಾಶ ನೀಡಬೇಕಾಗುತ್ತದೆ. ವೈಭವ್ ಕೂಡ ಉಳಿದ ಆಟಗಾರರಂತೆ ಪ್ರಕ್ರಿಯೆಯ ಮೂಲಕವೇ ಬರಬೇಕು ಮತ್ತು ತಮ್ಮ ಅವಕಾಶಕ್ಕಾಗಿ ಕಾಯಬೇಕು,' ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿರುವ ಎಬಿ ಡಿವಿಲಿಯರ್ಸ್, 'ವೈಭವ್ ಸೂರ್ಯವಂಶಿ ಉಳಿದವರಂತೆ ಸಾಧಾರಣ ಪ್ರಕ್ರಿಯೆಯನ್ನು ಪಾಲಿಸಬೇಕು ಎಂಬ ಕೋಚ್ ಮಾತನ್ನು ನಾನು ಒಪ್ಪುವುದಿಲ್ಲ. ಐಪಿಎಲ್ನಲ್ಲಿ ಅವರು ನೀಡಿರುವ ಅಸಾಧಾರಣ ಪ್ರದರ್ಶನದ ನಂತರ ಅವರನ್ನು ನೇರವಾಗಿ ಕಣಕ್ಕಿಳಿಸಬೇಕಿತ್ತು. ಅದರಲ್ಲೂ ಐರ್ಲೆಂಡ್ನಂತಹ ದುರ್ಬಲ ತಂಡದ ವಿರುದ್ಧ ಅವರಿಗೆ ಆರಂಭದಲ್ಲೇ ಅವಕಾಶ ನೀಡಿದ್ದರೆ ಉತ್ತಮ ಅನುಭವ ಆದಂತಾಗುತ್ತಿತ್ತು,' ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾಗೆ ಎಬಿಡಿ ಮಹತ್ವದ ಸಲಹೆ
ಐರ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಸರಣಿ ಸೋತಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ಬಗ್ಗೆಯೂ ಡಿವಿಲಿಯರ್ಸ್ ಪ್ರತಿಕ್ರಿಯಿಸಿದ್ದಾರೆ. 'ಭಾರತ ತಂಡವು ಯುಕೆಯ ಪಿಚ್ ಮತ್ತು ಹವಾಮಾನಕ್ಕೆ ತಕ್ಕಂತೆ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಿಸಿಕೊಳ್ಳಬೇಕಿದೆ. ಐಪಿಎಲ್ನಂತೆ ಇಲ್ಲಿ ಪ್ರತಿ ಪಂದ್ಯದಲ್ಲೂ 250 ಅಥವಾ 260 ರನ್ ಗಳಿಸಲು ಸಾಧ್ಯವಿಲ್ಲ. ಇಲ್ಲಿ 140 ರಿಂದ 160 ರನ್ಗಳ ಮೊತ್ತವೂ ಸ್ಪರ್ಧಾತ್ಮಕವಾಗಿರುತ್ತದೆ. ಹೀಗಾಗಿ ಹೆಚ್ಚು ಆತುರಪಡದೆ, ತಂತ್ರಗಾರಿಕೆಯಿಂದ ಇನಿಂಗ್ಸ್ ಕಟ್ಟಬೇಕಾಗುತ್ತದೆ,' ಎಂದು ಅವರು ಸಲಹೆ ನೀಡಿದ್ದಾರೆ.
ಇದೀಗ ಸಂಜು ಸ್ಯಾಮ್ಸನ್ ಸತತ ಮೂರು ಇನಿಂಗ್ಸ್ಗಳಲ್ಲಿ ವಿಫಲರಾಗಿರುವುದರಿಂದ ಇಂಗ್ಲೆಂಡ್ ವಿರುದ್ಧದ ಮುಂದಿನ ಪಂದ್ಯಗಳಲ್ಲಾದರೂ ವೈಭವ್ ಸೂರ್ಯವಂಶಿಗೆ ಪದಾರ್ಪಣೆ ಮಾಡಲು ಅವಕಾಶ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಈ ಬಾಲಕನ ಆಟವನ್ನು ನೋಡುವುದಕ್ಕಾಗಿಯೇ ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ. ಒಟ್ಟಿನಲ್ಲಿ ಎಬಿಡಿ ಅವರು, ಸಂಜು ಸ್ಯಾಮ್ಸನ್ ಹೊರಗಡೆ ಕೂರಿಸಿದರೂ ಪರ್ವಾಗಿಲ್ಲ, ಈ ಹುಡುಗನಿಗೆ ಅವಕಾಶ ನೀಡಿ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.












Click it and Unblock the Notifications