AB de Villiers: ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಮತ್ತೆ ಕ್ರಿಕೆಟ್‌ಗೆ ಮರಳಿದ ಎಬಿಡಿ
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹಲವು ವರ್ಷಗಳ ಬಳಿಕ ಮತ್ತೆ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅವರು ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಈಗ ಮತ್ತೆ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ವಾಪಸಾಗಲು ಸಜ್ಜಾಗಿದ್ದಾರೆ.
40 ವರ್ಷದ ಎಬಿ ಡಿವಿಲಿಯರ್ಸ್ ಕ್ರಿಕೆಟ್ ದಿಗ್ಗಜರನ್ನು ಒಳಗೊಂಡ ತಂಡಗಳು ಭಾಗವಹಿಸುವ ಪಂದ್ಯಾವಳಿಯಾದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (ಡಬ್ಲ್ಯೂಸಿಎಲ್) ನ ಎರಡನೇ ಆವೃತ್ತಿಯಲ್ಲಿ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡದ ನಾಯಕನಾಗಿ ವಾಪಸಾತಿ ಮಾಡಲಿದ್ದಾರೆ. ಅವರ ಕ್ರಿಕೆಟ್ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿಯಾಗಿದೆ.

2021ರಲ್ಲಿ ಎಬಿ ಡಿವಿಲಿಯರ್ಸ್ ವಿದಾಯ ಹೇಳಿದ್ದರೂ ಇಂದಿಗೂ ಅಭಿಮಾನಿಗಳು ಅವರನ್ನು ಮರೆತಿಲ್ಲ. ಅವರ ಅಸಾಧಾರಣ ಬ್ಯಾಟಿಂಗ್‌ನಿಂದ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ ಇತರೆ ಕ್ರೀಡೆಗಳಲ್ಲೂ ಎಬಿ ಡಿವಿಲಿಯರ್ಸ್ ಸಾಮರ್ಥ್ಯ ಹೊಂದಿದ್ದಾರೆ. ತಮ್ಮದೇ ವಿಭಿನ್ನ ಶೈಲಿಯ ಬ್ಯಾಟಿಂಗ್ ಮೂಲಕ ಮಿಸ್ಟರ್ 360 ಎಂದು ಹೆಸರು ಪಡೆದಿದ್ದರು.
ಆರ್ ಸಿಬಿ ಅಭಿಮಾನಿಗಳ ಸಂಭ್ರಮ
ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ ಆರ್ ಸಿಬಿ ತಂಡದ ಪ್ರಮುಖ ಆಟಗಾರನಾಗಿದ್ದರು. ನಾಲ್ಕು ವರ್ಷಗಳಿಂದ ಆರ್ ಸಿಬಿ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅವರು ಆರ್ ಸಿಬಿ ತಂಡದ ಆಪದ್ಭಾಂದವ ಎಂದು ಕೂಡ ಅಭಿಮಾನಿಗಳು ಹೇಳುತ್ತಿರುತ್ತಾರೆ. ಹಲವು ಕಷ್ಟದ ಸಮಯದಲ್ಲಿ ಎಬಿಡಿ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಈಗ ಎಬಿಡಿ ಮತ್ತೆ ಮೈದಾನಕ್ಕಿಳಿಯುತ್ತಿರುವುದು ಆರ್ ಸಿಬಿ ಅಭಿಮಾನಿಗಳಿಗೂ ಖುಷಿ ನೀಡಿದೆ. ವಿಶ್ವ ಲೆಜೆಂಡ್ಸ್ ಚಾಂಪಿಯನ್ಸ್ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾದ ಇತರ ದಿಗ್ಗಜರ ಜೊತೆ ಕಣಕ್ಕಿಳಿಯಲಿದ್ದಾರೆ. ಜಾಕ್ ಕಾಲಿಸ್, ಹರ್ಷಲ್ ಗಿಬ್ಸ್, ಡೇಲ್ ಸ್ಟೇನ್ ಮತ್ತು ಇಮ್ರಾನ್ ತಾಹಿರ್ ರಂತಹ ಆಟಗಾರರು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಪರ ಆಡಲು ಸಜ್ಜಾಗಿದ್ದಾರೆ. ಡಿವಿಲಿಯರ್ಸ್ ಇಂತಹ ದಿಗ್ಗಜರ ತಂಡವನ್ನು ಮುನ್ನಡೆಸುತ್ತಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ಕೊಟ್ಟಿದೆ.
"ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗದ ಪ್ರತಿಭೆಗಳನ್ನು ಹೊಂದಿರುವುದು ನಮಗೆ ಗೌರವವಾಗಿದೆ. ಎಬಿ ಡಿವಿಲಿಯರ್ಸ್ ನಮ್ಮ ತಂಡದ ನಾಯಕನಾಗಿರುವುದು ನಮಗೆ ಮತ್ತಷ್ಟು ಖುಷಿ ಕೊಟ್ಟಿದೆ." ಎಂದು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡದ ಸಹ ಮಾಲೀಕ ಅಮನ್‌ದೀಪ್ ಸಿಂಗ್ ಹೇಳಿದ್ದಾರೆ.












Click it and Unblock the Notifications