Sirsi Assembly Constituency Analysis: ಬಿಜೆಪಿ, ಕಾಂಗ್ರೆಸ್ ಬಿಫಾರಂಗೆ ಫೈಟ್, ವರದಿ, ವಿಶ್ಲೇಷಣೆ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿರಸಿ ಅಸೆಂಬ್ಲಿಯ ಚುನಾವಣೆ ಈ ಬಾರಿ ಕುತೂಹಲಕ್ಕೆ ಕಾರಣವಾಗಿರುವುದು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿಗೆ ಬಿಜೆಪಿ ಟಿಕೆಟ್ ಸಿಗುತ್ತೋ ಇಲ್ಲವೊ ಎನ್ನುವ ಕಾರಣಕ್ಕಾಗಿ. ಇದಕ್ಕೆ ಸಂಬಂಧಿಸಿದ ವರದಿ, ವಿಶ್ಲೇಷಣೆ
ಭೌಗೋಳಿಕವಾಗಿ ವಿಶಾಲವಾಗಿರುವ, ನೈಸರ್ಗಿಕವಾಗಿ ಸಮೃದ್ದವಾಗಿರುವ ಶಿರಸಿ-ಸಿದ್ದಾಪುರ ಅಸೆಂಬ್ಲಿ ಚುನಾವಣೆ - 2023 ಕುತೂಹಲಕ್ಕೆ ಕಾರಣವಾಗಿರುವುದಕ್ಕೆ ಹಲವು ಕಾರಣಗಳಿವೆ. ಅದರ ವಿಶ್ಲೇಷಣೆಯನ್ನು ಮುಂದಿನ ಪ್ಯಾರಾದಲ್ಲಿ ಮುಂದುವರಿಸಲಾಗಿದೆ.
ಒಂದೆಡೆ ಕರಾವಳಿಯ ಸಮುದ್ರ ಕಿನಾರೆ ಇನ್ನೊಂದೆಡೆ ಮಲೆನಾಡಿನ ಸಸ್ಯಶಾಮಲೆ ಸೇರಿ ಉತ್ತರ ಕನ್ನಡದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಇನ್ನೊಂದೆಡೆ, ಘಟ್ಟದ ಮೇಲಿರುವ ಪ್ರದೇಶಗಳನ್ನು ಉತ್ತರ ಕನ್ನಡ ಜಿಲ್ಲೆಯಿಂದ ಪ್ರತ್ಯೇಕಗೊಳಿಸಿ ಶಿರಸಿ ಜಿಲ್ಲೆಯನ್ನಾಗಿ ರಚಿಸಬೇಕು ಎನ್ನುವ ಕೂಗು.
ಮಾರಿಕಾಂಬ ದೇವಿಯ ನೆಲೆಬೀಡು, ಸ್ವರ್ಣವಲ್ಲಿ, ಸೋಂದಾ ಮಠ, ಹಲವು ನದಿಗಳ ಸೌಂದರ್ಯಗಳ ತವರೂರು ಕೂಡಾ ಎನ್ನುವ ಹೆಗ್ಗಳಿಕೆ ಶಿರಸಿಯದ್ದು. ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಈ ಅಸೆಂಬ್ಲಿ ಕ್ಷೇತ್ರದ ಚುನಾವಣೆಗೆ ಪ್ರತ್ಯೇಕ ಜಿಲ್ಲೆಯ ಕೂಗು ಪ್ರಮುಖ ವಿಷಯವಾಗುವ ಸಾಧ್ಯತೆ ದಟ್ಟವಾಗಿದೆ.

ಭಾರತದಲ್ಲಿಯೇ ಅತಿದೊಡ್ಡ ಜಾತ್ರೆ ಎಂದು ಕರೆಯಲ್ಪಡುವ ಮಾರಿಕಾಂಬ (ಎರಡು ವರ್ಷಕ್ಕೊಮ್ಮೆ) ಜಾತ್ರೆ, ಮತ್ತು ಇತಿಹಾಸದಲ್ಲಿ ಕನ್ನಡಿಗರ ಮೊದಲ ರಾಜಮನೆತನ ಎಂದೇ ಕರೆಯಲ್ಪಡುವ ಕದಂಬ ಸಾಮ್ರಾಜ್ಯದ ರಾಜಧಾನಿ ಬನವಾಸಿ ಇರುವುದು ಶಿರಸಿ ತಾಲೂಕು ವ್ಯಾಪ್ತಿಯಲ್ಲಿ.
ಜಯಂತ್ ಕಾಯ್ಕಿಣಿ, ಯಶವಂತ ಚಿತ್ತಾಲ ಸೇರಿದಂತೆ ಘಟಾನುಘಟಿ ಸಾಹಿತಿಗಳ ನೆಲೆ ಇದು. ಪತ್ರಿಕೋದ್ಯಮ ಕ್ಷೇತ್ರಕ್ಕೆ ಹಲವು ಪ್ರಮುಖರನ್ನು ಪರಿಚಯಿಸಿದ ಕೀರ್ತಿಯೂ ಉತ್ತರ ಕನ್ನಡ ಜಿಲ್ಲೆಯದ್ದು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಿದ್ದಾಪುರದವರು.
ಅಡಿಕೆ ಬೆಳೆ ಮತ್ತು ಮಾರಾಟ ಕ್ಷೇತ್ರದ ಪ್ರಮುಖ ಆರ್ಥಿಕತೆಯ ಬೆನ್ನೆಲುಬು. ಆದರೂ, ಅಡಿಕೆಗೆ ಬೆಂಬಲ ಬೆಲೆ ಮತ್ತು ಸರಿಯಾದ ಮಾರುಕಟ್ಟೆ ಪಡೆಯುವುದೇ ಇಲ್ಲಿನ ಜನರ ನಿರಂತರ ಹೋರಾಟ ಎನ್ನಬಹುದಾಗಿದೆ. ಜೊತೆಗೆ, ಸಂಪರ್ಕ ಮತ್ತು ಆಸ್ಪತ್ರೆಯ ಕೊರತೆ.
ಶಿರಸಿ-ಸಿದ್ದಾಪುರ ಕ್ಷೇತ್ರ ಮಾಜಿ ಸಚಿವ, ಹಾಲಿ ವಿಧಾನಸಭೆಯ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ತವರು ಕ್ಷೇತ್ರ. ಸತತವಾಗಿ ಕಾಗೇರಿಯವರು ಈ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಇಲ್ಲಿಗಿಂತ ಮೊದಲು ಕಾಗೇರಿಯವರು ಅಂಕೋಲ ಕ್ಷೇತ್ರದ ಶಾಸಕರಾಗಿದ್ದರು.

2008ರಲ್ಲಿ ಕಾಂಗ್ರೆಸ್ಸಿನ ರವೀಂದ್ರನಾಥ್ ನಾಯಕ್, 2013ರಲ್ಲಿ ಕಾಂಗ್ರೆಸ್ಸಿನ ದೀಪಕ್ ಹೊನ್ನಾವರ್ ಮತ್ತು 2018ರಲ್ಲಿ ಕಾಂಗ್ರೆಸ್ಸಿನ ಭೀಮಣ್ಣ ನಾಯಕ್ ಅವರನ್ನು ಸೋಲಿಸಿ ಕಾಗೇರಿ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಶಶಿಭೂಷಣ ಹೆಗಡೆ 26ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಮತ ಇಬ್ಬಾಗಗೊಂಡಿದ್ದರಿಂದ ಕಾಗೇರಿಯವರ ವಿಜಯಕ್ಕೆ ಇದು ಪ್ರಮುಖ ಕಾರಣವಾಗಿತ್ತು.
ಕ್ಷೇತ್ರದಲ್ಲಿ ನಾಮಧಾರಿಗಳು ಮತ್ತು ಬ್ರಾಹ್ಮಣರ ಮತಬ್ಯಾಂಕ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇತರ ಸಮುದಾಯ, ಅಲ್ಪಸಂಖ್ಯಾತರು ಮತ್ತು ಮರಾಠಿಗರು ನಂತರದ ಸ್ಥಾನದಲ್ಲಿದ್ದಾರೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ತಮ್ಮನ ಮೊಮ್ಮಗ ಡಾ.ಶಶಿಭೂಷಣ ಹೆಗಡೆ ಈ ಬಾರಿ ಬಿಜೆಪಿ ಟಿಕೆಟಿಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ಕಾಗೇರಿಯವರ ರಾಜಕಾರಣದ ಬಗ್ಗೆ ಒಳ್ಳೆಯ ಮಾತಿದ್ದರೂ, ಅಭಿವೃದ್ದಿಯ ವಿಚಾರದಲ್ಲಿ ಮತದಾರರಿಗೆ ಅಸಮಾಧಾನವಿದೆ.
ಶಿರಸಿ-ಸಿದ್ದಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
ವಿಶ್ವೇಶ್ವರ ಹೆಗಡೆ ಕಾಗೇರಿ
ಡಾ.ಶಶಿಭೂಷಣ ಹೆಗಡೆ
ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ್
ಮಾಜಿ ಶಾಸಕ ವಿವೇಕಾನಂದ ವೈದ್ಯ
ಶಿರಸಿ-ಸಿದ್ದಾಪುರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ್
ಉದ್ಯಮಿ ದೀಪಕ್ ದೊಡ್ಡೂರು
ವಸಂತ್ ನಾಯಕ್
ಕ್ಷೇತ್ರದ ಮತದಾರ ವಿವರ (2018ರ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ)
ಕ್ಷೇತ್ರದ ಕೋಡ್: 80
ಪುರುಷರು: 96,858
ಮಹಿಳೆಯರು: 93,974
ಇತರರು: 02
ಒಟ್ಟು: 1,90,834












Click it and Unblock the Notifications