• search

ಅಕ್ಕಿಕಾಳಿನಲ್ಲಿ ಮೂಡಿದ ಬಸವಣ್ಣನ ಭಾವಚಿತ್ರದಲ್ಲಿ ಮೆರೆದ ವಚನಾಂಜಲಿ

By ರಾಜೇಶ್ವರಿ, ಸಿಂಗಪುರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಕನ್ನಡ ಸಂಘ (ಸಿಂಗಪುರ)ದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ "ವಚನಾಂಜಲಿ - 2018". 18 ಆಗಸ್ಟ್ 2018ರಂದು ಮಧ್ಯಾಹ್ನದಿಂದಲೇ ಡೋವರ್ನ ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣ ಬಹಳ ಅದ್ಧೂರಿಯಿಂದ ಅಲಂಕೃತಗೊಳ್ಳಲು ಸಜ್ಜುಕೊಳ್ಳುತಿತ್ತು. ಚಿಣ್ಣರ ಓಡಾಟ, ಹೆಂಗಳೆಯರ ಮಾತು, ಹರಟೆ, ನಗುಗಳ ಜೊತೆಗೆ ಸದಸ್ಯರ ಒಡನಾಟ, ವಿವಿಧ ರೀತಿಯ ಸಿದ್ಧತೆಗಳು ನೋಡು ನೋಡುತ್ತಲೇ ತೀವ್ರಗೊಳ್ಳುತ್ತಿದ್ದವು. ಏಕೆಂದರೆ ಈ ಸಂಜೆ ಅನೇಕ ಸುಂದರ ಚಟುವಟಿಕೆಗಳ ಸರಮಾಲೆಯಾಗಲು ಸಂಜೆಯ ರಂಗುಕೂಡ ಸೇರಿ ಜೊತೆಯಾಗುತಿತ್ತು.

  ನಮ್ಮ ಕಣ್ಮನ ಕಿವಿಗಳನ್ನು ತಣಿಸಿದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕದಿಂದ ಆಗಮಿಸಿದ್ದ ವಚನ ಸಾಹಿತಿ ಡಾ. ಎನ್.ಜಿ. ಮಹದೇವಪ್ಪ ಹಾಗೂ ಮೈಕ್ರೋ ಆರ್ಟಿಸ್ಟ್ ಅಕ್ಕಿಕಾಳು ವೆಂಕಟೇಶ್ ಅವರ ಉಪಸ್ಥಿತಿ ಇನ್ನೂ ಹೆಚ್ಚಿನ ಮೆರುಗನ್ನು ನೀಡಿತು.

  ಸಿಂಗಪುರದಲ್ಲಿ ದಾಸಶ್ರೇಷ್ಠ ಪುರಂದರ ನಮನ -2018

  ವಿಶೇಷವಾಗಿ ಈ ವರ್ಷದ ಕಾರ್ಯಕ್ರಮವು ಮಧ್ಯಾಹ್ನ ಮೂರು ಗಂಟೆಗೆ "ಅಕ್ಕಿಧಾನ್ಯ ಕಲೆ", ಅಂದರೆ ಅಕ್ಕಿಕಾಳಿನ ಮೇಲೆ ಬರೆಯುವ ಸೂಕ್ಷ್ಮ ಕಲೆ, ಇದರ ಪರಿಚಯ ಮತ್ತು ಸೂಕ್ಷ್ಮಕಲೆಯ ಕಾರ್ಯಗಾರದಿಂದ ಪ್ರಾರಂಭವಾಯಿತು. ಅಕ್ಕಿಕಾಳು ವೆಂಕಟೇಶ ಅವರು ಈ ಸೂಕ್ಷ್ಮಕಲೆಯ ಮಹತ್ವವನ್ನು ತಿಳಿಸಿ, 150ಕ್ಕೂ ಹೆಚ್ಚು ಮಕ್ಕಳು ಮತ್ತು ಪೋಷಕರಿಗೆ ಅಕ್ಕಿಕಾಳಿನ ಮೇಲೆ ಬರೆಯುವುದನ್ನು ಕಲಿಸಿ ಎಲ್ಲರನ್ನೂ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಿದರು.

  Ricegrain Venkatesh graces Vachananjali 2018 in Singapore

  ಎಲ್ಲರೂ ತಮ್ಮ ತಮ್ಮ ಹೆಸರುಗಳನ್ನು ಬರೆದು ಖುಷಿಯಿಂದ ಒಬ್ಬರಿಗೊಬ್ಬರು ತೋರಿಸುತ್ತಾ, ನಾಲ್ಕು, ಐದು... ಎಂಟು ಅಕ್ಷರಗಳನ್ನು ಬರೆದೆನೆಂದು ಮಕ್ಕಳು ಬೀಗುತ್ತಿದ್ದರೆ ಕೆಲವು ಪೋಷಕರು ತಮ್ಮ ಬೆರಳುಗಳ ನಡುವಿನ ಅಕ್ಕಿಕಾಳನ್ನು ಹುಡುಕುವ ತವಕದಲ್ಲಿ ತಡವರಿಸುತ್ತಿದ್ದರು. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅಕ್ಕಿಧಾನ್ಯಗಳು ತಮ್ಮ ಮೇಲೆ ಅಕ್ಷರಗಳನ್ನೊತ್ತುಕೊಂಡು ಜಗಜ್ಯೋತಿ ಬಸವಣ್ಣನವರ ಭಾವಚಿತ್ರದ ಭಾಗವಾಗಿ ಅಲಂಕರಿಸಲು ಸಾಲು ಸಾಲಾಗಿ ಬಂದು ಸೇರಿ Singapore Book Of Recordsನಲ್ಲಿ ತಮ್ಮತನವನ್ನು ಮೆರೆಯಲು ಸಿದ್ಧವಾದಂತೆ ಭಾಸವಾಗುತ್ತಿತ್ತು.

  ಸಿಂಗನ್ನಡಿಗರಿಗೆ ವಿಶಿಷ್ಟ ಅನುಭವ ನೀಡಿದ ವಚನಾಂಜಲಿ 2017

  ಸಭಾಂಗಣ ಕಾರ್ಯಕ್ರಮ ನಿರೂಪಣೆಯನ್ನು ಹೊತ್ತ ಪದ್ಮಿನಿ ಶ್ರೀನಿಧಿಯವರು ಎಲ್ಲರನ್ನೂ ಸ್ವಾಗತಿಸಿ, ವಚನಾಂಜಲಿ ಕಾರ್ಯಕ್ರಮವನ್ನು ನೆರೆದ ಗಣ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗುವ ಮೂಲಕ ಆರಂಭಿಸಲು ಕೋರಿದರು. ಇದೇ ಸಂದರ್ಭದಲ್ಲಿ ಸಂಘದ ಪರವಾಗಿ ಇತ್ತೀಚಿಗೆ ನಮ್ಮನ್ನು ಅಗಲಿದ ಮಾಜಿ ಪ್ರಧಾನಿ ಜನನಾಯಕ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಒಂದು ನಿಮಿಷದ ಮೌನಾಚರಣೆಯ ಮೂಲಕ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು.

  Ricegrain Venkatesh graces Vachananjali 2018 in Singapore

  ಸಂಘದ ಅಧ್ಯಕ್ಷರಾದ ವಿಜಯ ರಂಗ ಪ್ರಸಾದ್ ಅವರು ತಮ್ಮ ಭಾಷಣದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮದ ಸದುದ್ದೇಶದ ಬಗ್ಗೆ ಮಾತಾಡುತ್ತಾ, ವಚನಾಂಜಲಿ ಹಾಗೂ ಪುರಂದರ ನಮನದಂತಹ ಕಾರ್ಯಕ್ರಮಗಳು ವಚನ ಹಾಗೂ ದಾಸ ಸಾಹಿತ್ಯದ ಮಹತ್ವವನ್ನು ಮುಂದಿನ ಪೀಳಿಗೆಗೆ ಸಾರಿ, ಹರಡಲು ಪಠಣ, ವಾಗ್ಝರಿ ಸ್ಪರ್ಧೆಗಳ ಮೂಲಕ ವಿವಿಧ ರೂಪಗಳಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿವೆ ಎಂದು ತಿಳಿಸಿದರು.

  ಮನದಲ್ಲಿ ಹುದುಗಿದ್ದ ಕವನ ಅರಳಿಸಿದ ಸಿಂಗಪುರ

  ವಚನಾಂಜಲಿಯ ಪ್ರಮುಖ ಭಾಗ ಸಂಗೀತಮಯವಾಗಿ ಸಂಯೋಜನೆಗೊಂಡ ವಚನಗಳ ಸಮೂಹ ಗಾಯನ. ಡಾ.ಭಾಗ್ಯಮೂರ್ತಿ ಹಾಗೂ ತಂಡದವರಿಂದ ವಚನ ಸಾಹಿತ್ಯದ ತ್ರಿಮೂರ್ತಿಗಳಲ್ಲಿ ಒಬ್ಬರು ಹಾಗೂ ವಚನಕಾರರ ಮೇರು ಪರ್ವತ ಅಲ್ಲಮ ಪ್ರಭುಗಳ ಆಯ್ದ ವಚನಗಳಿಗೆ ಸುಶ್ರಾವ್ಯವಾದ ಸಂಗೀತವನ್ನು ಉಣಿಸಿದರು. ನೆರೆದ ಶೋತೃಗಳಿಗೆ ಅಜ್ಞಾನವೆಂಬ ತೊಟ್ಟಿಲೊಳಗಿಂದ ನಮ್ಮ ನಿದ್ರೆಯಿಂದೆಬ್ಬಿಸಿ, ಹರಿವ ನೀರಿಗೆ ಮೈಯನೊಡ್ಡಿ, ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ ಅಪರಿಮಿತ ಕತ್ತಲೊಳಗೆ ಅಜ್ಞಾನದೊಂದಿಗೆ ಸೇರಿ ವ್ಯರ್ಥವಾಗುತ್ತದೆ ಎಂಬರ್ಥದಲ್ಲಿ ವಚನಗಳನ್ನು ಹಾಡಿ ತಣಿಸಿದರು.

  Ricegrain Venkatesh graces Vachananjali 2018 in Singapore

  ಇವರಿಗೆ ಪಕ್ಕವಾದ್ಯಗಳಲ್ಲಿ ಕುಮಾರಿ ಶರಣ್ಯ (ಪಿಟೀಲು) ಮತ್ತು ಶ್ರೀ ಕುಮಾರ್ (ತಬಲ)ದಲ್ಲಿ ಸಹಕರಿಸಿದರು. ಸಮೂಹ ಗಾಯನದ ನಂತರ ವಚನ ಪಠಣ ಮತ್ತು ವಾಗ್ಝರಿಯ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಣವಿ ಆಚಾರ್ಯ, ನಿಹಾರಿಕಾ ರಾಜ್, ಸಾನ್ಯ ಗುಡಿ, ಸ್ಮರಣ್ ಬೇತೂರ್, ಮಾನ್ಯ ಗದ್ದೆಮನೆ, ನಿಧಿ ಮೈಲಾರಿ, ನಿರಾಲಿ ಮೃಣಾಲಿ, ಹಾಗು ಶ್ರೇಯಾ ಗುಡಿಯವರಿಗೆ ಅಭಿನಂದನಾ ಪತ್ರ ಹಾಗೂ ಬಹುಮಾನಗಳನ್ನು ನೀಡಿ ಪ್ರಶಂಸಿಸಲಾಯಿತು.

  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎನ್.ಜಿ.ಮಹದೇವಪ್ಪ ಅವರಿಗೆ ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ನೂರಕ್ಕೂ ಹೆಚ್ಚು ವಚನ ಸಾಹಿತ್ಯದ ಪುಸ್ತಕಗಳನ್ನು ರಚಿಸಿ ಅವುಗಳ ತತ್ವ ಮಿಮಾಂಸೆಯನ್ನು ಪರಿಚಯಿಸಿರುವ ಶ್ರೀಯುತರು ಕನ್ನಡ ಸಂಘದ ಚಟುವಟಿಕೆಗಳನ್ನು ಶ್ಲಾಘಿಸುತ್ತಾ ತಾವು ಕರ್ನಾಟಕದಲ್ಲೇ ಇರುವಂತಹ ಭಾವನೆ ಹೊಂದಿರುವುದಾಗಿ ವ್ಯಕ್ತಪಡಿಸಿದರು.

  Ricegrain Venkatesh graces Vachananjali 2018 in Singapore

  ವಚನಗಳ ಬಗ್ಗೆ ಮಾತನಾಡುತ್ತಾ, ವಚನಗಳನ್ನು ಕನ್ನಡದಲ್ಲಿ ಬರೆದಿದ್ದು ಒಂದು ಕ್ರಾಂತಿ. ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಗದ್ಯ-ಪದ್ಯಗಳ ಸರಳ ಭಾಷೆಯಾದ ವಚನ ರೂಪದಲ್ಲಿ ಜನಸಾಮಾನ್ಯರಿಗೆ ಮುಟ್ಟುವಂತಾಯಿತು ಎಂದೇಳುತ್ತಾ ಬಸವಣ್ಣನವರ "ಕಲ್ಯಾಣ ಕ್ರಾಂತಿ"ಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.

  ಕಾರ್ಯಕ್ರಮದ ಮತ್ತೊಂದು ಮುಖ್ಯ ಆಕರ್ಷಣೆ ಎಂದರೆ, ಬೆಂಗಳೂರಿನ "ಶಿವಪ್ರಿಯಾ ನೃತ್ಯ ಶಾಲೆ ( Shivapriya School of Dance)ಯ ಗುರುಗಳಾದ ಸಂಜಯ್ ಶಾಂತಾರಾಮ್ ಅವರ ಹಿರಿಯ ಶಿಷ್ಯರಾದ ಭಾಗ್ಯ ಮಂಜುನಾಥ್ ಮತ್ತು ಅವರ ತಂಡದ ಅಮೋಘವಾದ ವಚನ ನೃತ್ಯಾಂಜಲಿ ಪ್ರದರ್ಶನ. ವಿಘ್ನ ವಿನಾಶಕ ದ್ವಾದಶ ಸೂತ್ರವನ್ನು ರುಕ್ತಾಭರಣಿ ರಾಗದಿಂದ ಆರಂಭಿಸಿ, ದಾಕ್ಷಾಯಣಿ ಅಗ್ನಿ ಪ್ರವೇಶ, ಶಿವನ ರೌದ್ರಾವತಾರ, ದಕ್ಷನ ಸಂಹಾರ, ಮೈ ರೋಮಾಂಚನಗೊಳ್ಳುವ ವೀರಭದ್ರನ ನೃತ್ಯ, ರಾವಣ ಸಂಹಾರ, ಜನ ಮೆಚ್ಚುವಂತಹ ಜನಪದ ನೃತ್ಯ ಹಾಗೂ ತಿಲ್ಲಾನ ಗಳನ್ನೊಳಗೊಂಡ ವೈವಿಧ್ಯಮಯ ನೃತ್ಯಗಳೊಂದಿಗೆ ಪ್ರೇಕ್ಷಕರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ದಂತಿತ್ತು.

  Ricegrain Venkatesh graces Vachananjali 2018 in Singapore

  ನೃತ್ಯ ಹಾಡುಗಳ ನಡುವೆ, ಮೆಲ್ಲನೆ ವೇದಿಕೆಯು ಕನ್ನಡ ಸಂಘ (ಸಿಂಗಪುರ) ತನ್ನ ಇತಿಹಾಸದ ಪುಟದಲ್ಲಿ ಮತ್ತೊಂದು ಹೊಸ ದಾಖಲೆಯನ್ನು ಸೇರಿಸುವ ಸನ್ನಾಹಕ್ಕೆ ಅಣಿಗೊಳ್ಳುತಿತ್ತು. Singapore Book Of Recordsನ ಪ್ರತಿನಿಧಿಯಾಗಿ ಬಂದಂತಹ Mr.Ong ಅವರು ಸ್ಟಾಪ್ವಾಚ್ ಹಾಗೂ ಭೂತಗನ್ನಡಿಗಳನ್ನು ಹಿಡಿದು ವೇದಿಕೆಗೆ ಬಂದಾಗ ಸಭಿಕರೆಲ್ಲಾ ಗಂಭೀರವಾಗಿ ನೋಡುತ್ತಿದ್ದರೆ, ಮಕ್ಕಳಲ್ಲಿ ಏನೋ ಕುತೂಹಲ! ಅಂತೂ... ಅಧಿಕೃತವಾಗಿ ದಾಖಲೆಯನ್ನು ವೀಕ್ಷಿಸಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಂತೆ ಅಕ್ಕಿಕಾಳಿನ ಮೇಲಿನ A to Zನ್ನು (26 ಅಕ್ಷರಗಳು) ಬರೆಯುವ ಸೂಕ್ಷ್ಮಕಲೆಯ ಪ್ರಯೋಗ ಅಕ್ಕಿಕಾಳು ವೆಂಕಟೇಶ್ ಅವರಿಂದ ಪ್ರಾರಂಭಗೊಂಡಿತು.

  ಮೊದಲ ಪ್ರಯತ್ನದಲ್ಲಿ 43 ಸೆಕೆಂಡುಗಳಲ್ಲಿ ಬರೆದು ಹೊಸ ದಾಖಲೆಯನ್ನು ಸೃಷ್ಟಿಸಿದ್ದನ್ನು Mr.Ong ನಮೂದಿಸಿದಾಗ ನೆರೆದ ಕನ್ನಡಿಗರೆಲ್ಲಾ ಹೆಮ್ಮೆಯಿಂದ ಬೀಗಿ ಚಪ್ಪಾಳೆಯೊಂದಿಗೆ ಪ್ರಶಂಸಿದರು. ಇದೇ ಸಂದರ್ಭದಲ್ಲಿ ಸದಸ್ಯರೆಲ್ಲಾ ಸೇರಿ ಬರೆದ ಅಕ್ಕಿಕಾಳುಗಳಿಂದ ತುಂಬಿದ ಬಸವಣ್ಣನವರ ಭಾವಚಿತ್ರ ಅನಾವರಣಗೊಂಡು Singapore Book Of Records ಸೇರಿದ್ದು ಸಂಘದ ಸಾಧನೆಗೆ ಮತ್ತೊಂದು ಗರಿ ನೆಟ್ಟಂತಿತ್ತು.

  Ricegrain Venkatesh graces Vachananjali 2018 in Singapore

  ವೆಂಕಟೇಶ್ ಅವರು ದಾಖಲೆಯ ಪ್ರಮಾಣ ಪತ್ರವನ್ನು ಪಡೆದು, ಮಾತಾಡುತ್ತಾ "Journey of thousand miles starts with single step"ಎಂದು ಹೇಳಿ ಪರೋಕ್ಷವಾಗಿ ಇಂತಹ ಅವಕಾಶವನ್ನು ಮಾಡಿಕೊಟ್ಟಂತಹ ಕನ್ನಡ ಸಂಘ (ಸಿಂಗಪುರ)ಕ್ಕೆ ಧನ್ಯವಾದಗಳನ್ನು ಅರ್ಪಿಸಿ ಅಭಿನಂದಿಸಿದರು.

  3 ಗಂಟೆಯಿಂದ ರಾತ್ರಿ 9:30ವರೆಗೆ ಎಡಬಿಡದೆ ನಡೆದ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಸಂತಸ ಭಾವ ಕಾರ್ಯಕಾರಿ ಸಮಿತಿಯ ಸದಸ್ಯರಲ್ಲಿ ಮೂಡಿತ್ತು. ಕಾರ್ಯಕ್ರಮದ ಆಗುಹೋಗುಗಳನ್ನು ನಿಭಾಯಿಸಿದ ಸಮಿತಿಯ ಸದಸ್ಯರಾದ ಪವನ್ ಜೋಷಿ ಹಾಗೂ ಭಾಗ್ಯ ಬೆಲ್ಲಾದ್, ಎಲ್ಲಾ ಕ್ಷಣಗಳನ್ನು ಬೈಟು ಟೀ-ಕಾಫಿ ಕುಡಿಯುತ್ತಲೇ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದ ByTu ತಂಡದ ವರುಣ್ ಹಾಗೂ ಸಮಂತ್, ಅನೇಕ ಸ್ವಯಂ-ಸೇವಕರ ಅವಿರತ ಶ್ರಮ ಕಾರ್ಯಕ್ರಮದ ಯಶಸ್ಸಿಗೆ ಹಿಡಿದ ಕನ್ನಡಿ ಹಾಗು ಶ್ಲಾಘನೀಯ.

  Ricegrain Venkatesh graces Vachananjali 2018 in Singapore

  ಈ ಕಾರ್ಯಕ್ರಮದ ಪ್ರಾಯೋಜಕರಾದ ಶೋಭಾ ಲಿಮಿಡೆಡ್ ಹಾಗೂ ಸ್ಥಳೀಯ ದಿನಸಿ ಅಂಗಡಿ "ನೆಲ್ಲನ್ ಸೂಪರ್ ಮಾರ್ಕೆಟ್" ಅವರಿಗೂ ಸಂಘದ ವತಿಯಿಂದ ಧನ್ಯವಾದಗಳನ್ನು ತಿಳಿಸಿ, ಸದಸ್ಯರು ಪ್ರಾಯೋಜಕರಿಗೆ ಬೆಂಬಲ ನೀಡಬೇಕೆಂದು ಕೋರಲಾಯಿತು. ಸಭಾಂಗಣದ ಹೊರಗೆ ಸ್ವಾಗತ್ ಅವರ ಮಳಿಗೆಯಲ್ಲಿ ಕೊಂಡ ಊಟಕ್ಕಿಂತ ಜಾಸ್ತಿ, ಮಾತು, ಹರಟೆ, ನಗು, ಮಕ್ಕಳ ಆಟ, ಕಲಾವಿದರೊಂದಿಗೆ ಫೋಟೊ... ನಿರಂತರವಾಗಿ ಸಾಗಿತ್ತು, ಬನ್ನ್ರೀ... ಹೊರಡೊಣ ಸಾಕು, ಎನ್ನುವವರಗೆ!

  ವರದಿ - ರಾಜೇಶ್ವರಿ ; ಛಾಯಾಚಿತ್ರ : ByTu ತಂಡ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Ricegrain Venkatesh graces Vachananjali 2018 in Singapore. The art created with these rice grains enters Singapore Book Of Records. Vachana writer NG Mahadevappa also participated in the program organized by Kannada Sangha Singapore.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more