ಯಡಿಯೂರಪ್ಪ ಕುಟುಂಬದಲ್ಲಿ ವಿವಾಹದ ಸಂಭ್ರಮ, ಮೊಮ್ಮಗನ ನಿಶ್ಚಿತಾರ್ಥ
ಶಿವಮೊಗ್ಗ, ಮಾರ್ಚ್ 25: ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ. ಎಸ್. ಯಡಿಯೂರಪ್ಪ ಕುಟುಂಬದಲ್ಲಿ ವಿವಾಹ ಸಂಭ್ರಮ. ಯಡಿಯೂರಪ್ಪ ಮೊಮ್ಮಗ, ಶಿವಮೊಗ್ಗದ ಸಂಸದ ಬಿ. ವೈ. ರಾಘವೇಂದ್ರ ಪುತ್ರ ಸುಭಾಷ್ ನಿಶ್ಚಿತಾರ್ಥ ಕಲಬುರಗಿಯಲ್ಲಿ ಸೋಮವಾರ ನಡೆದಿದೆ. ವಿವಿಧ ಪಕ್ಷಗಳ ಹಲವು ನಾಯಕರು, ಯಡಿಯೂರಪ್ಪ ಅಭಿಮಾನಿಗಳು ನಿಶ್ಚಿತಾರ್ಥದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.
ಬಿ. ವೈ. ರಾಘವೇಂದ್ರ ಪುತ್ರ ಸುಭಾಷ್ ಮತ್ತು ಶ್ರಾವಣಾ ವಿವಾಹ ನಿಶ್ಚಿತಾರ್ಥ ಸೋಮವಾರ ಕಲಬುರಗಿಯಲ್ಲಿ ನಡೆಯಿತು. ಬಿ. ಎಸ್. ಯಡಿಯೂರಪ್ಪ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಬಿ. ವೈ. ವಿಜಯೇಂದ್ರ ಜೊತೆ ಭಾನುವಾರವೇ ಕಲಬುರಗಿ ನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು.

ಸೋಮವಾರ ಬಿ. ವೈ. ರಾಘವೇಂದ್ರ ಸಹೋದರ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಾ. ಬಿ. ಜಿ. ಪಾಟೀಲ್, ಎನ್. ರವಿ ಕುಮಾರ್ ಸೇರಿದಂತೆ ಹಾಲಿ, ಮಾಜಿ ಶಾಸಕರು ಕಲಬುರಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿಯೊಂದಿಗೆ ಸಂಬಂಧ: ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಪುತ್ರ ಸುಭಾಷ್ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ-ದೀಪಾಲಿ ದಂಪತಿಯ ಪುತ್ರಿ ಶ್ರಾವಣ ಅವರನ್ನು ವಿವಾಹವಾಗುತ್ತಿದ್ದಾರೆ. ನಿಶ್ಚಿತಾರ್ಥ ನಡೆದಿದ್ದು, ವಿವಾಹದ ದಿನಾಂಕ, ಸ್ಥಳವನ್ನು ಇನ್ನೂ ಸಹ ತಿಳಿದುಬಂದಿಲ್ಲ. ಈ ನಿಶ್ಚಿತಾರ್ಥದ ಮೂಲಕ ಯಡಿಯೂರಪ್ಪ ಕುಟುಂಬ ಕಲಬುರಗಿ ಜೊತೆ ಮತ್ತೆ ಸಂಬಂಧವನ್ನು ಬೆಳೆಸಿದೆ.
ಭಾನುವಾರ ಕಲಬುರಗಿಯಲ್ಲಿ ಮಾತನಾಡಿದ್ದ ಯಡಿಯೂರಪ್ಪ, "ಈಗಾಗಲೇ ಸೊಸೆ (ಬಿ. ವೈ. ವಿಜಯೇಂದ್ರ ಪತ್ನಿ) ಕಲಬುರಗಿಯವರೇ ಆಗಿದ್ದಾರೆ. ಈಗ ಮೊಮ್ಮಗನಿಗೆ ಸಹ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಅವರ ಸುಪುತ್ರಿಯೊಂದಿಗೆ ವಿವಾಹ ನಿಶ್ಚಿಯವಾಗಿದೆ. ಇಂತಹ ಸಂಬಂಧಗಳು ಪಕ್ಷ ಬೆಳೆಯಲು ಸಹ ಅನುಕೂಲವಾಗುತ್ತದೆ" ಎಂದು ಹೇಳಿದ್ದರು.
"ಕಲಬುರಗಿಯ ಜೊತೆ ಮತ್ತೆ ಸಂಬಂಧ ಬೆಳೆಸುತ್ತಿರುವುದು ಸಂತಸ ತಂದಿದೆ. ಇಂತಹ ಸಂಬಂಧಗಳು ರಾಜಕೀಯವಾಗಿ ಬೆಳೆಯಲು ಸಹ ಪೂರಕವಾಗುತ್ತದೆ" ಎಂದು ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದರು.
ಯಡಿಯೂರಪ್ಪ ಜೊತೆ ಆಗಮಿಸಿದ್ದ ಬಿ. ವೈ. ವಿಜಯೇಂದ್ರ ಮಾತನಾಡಿ, "ಯಡಿಯೂರಪ್ಪ ಅವರಿಗೂ ಕಲಬುರಿಗೂ ಅವಿನಾಭಾವ ಸಂಬಂಧವಿದೆ. ನಾನು ಕೂಡ ಇಲ್ಲಿಯ ಅಳಿಯನಾಗಿದ್ದೇನೆ. ನನ್ನ ಅಣ್ಣನ ಮಗನಿಗೆ ಲಿಂಗರಾಜಪ್ಪ ಅಪ್ಪ ಅವರ ಮಗಳನ್ನು ತರುತ್ತಿದ್ದೇವೆ" ಎಂದರು.
ಬಿ. ವೈ. ರಾಘವೇಂದ್ರ ಶಿವಮೊಗ್ಗದ ಸಂಸದರು. ಅವರ ಸಹೋದರ ಬಿ. ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿಯ ಅಧ್ಯಕ್ಷರು ಮತ್ತು ಶಿಕಾರಿಪುರದ ಶಾಸಕರು. ಬಿ. ವೈ. ರಾಘವೇಂದ್ರ ಪುತ್ರ ಸುಭಾಷ್ ರಾಜಕೀಯದಲ್ಲಿಲ್ಲ. ಮಂದಿನ ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ಸದ್ಯದ ಮಾಹಿತಿಗಳ ಪ್ರಕಾರ ಬಿ. ವೈ. ರಾಘವೇಂದ್ರ ಪುತ್ರ ಸುಭಾಷ್ ಮತ್ತು ಶ್ರಾವಣಾ ವಿವಾಹ ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಕಲಬುರಗಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.












Click it and Unblock the Notifications