ಸಚಿವ ಸ್ಥಾನ: ಮೋದಿಗೆ ಪತ್ರ ಬರೆದ ಯಡಿಯೂರಪ್ಪ
ಶಿವಮೊಗ್ಗ, ಮೇ 22: ದಾಖಲೆಯ ಜಯದೊಂದಿಗೆ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಚಿವ ಸ್ಥಾನ ಮತ್ತು ಪಕ್ಷದಲ್ಲಿ ತಮ್ಮ ಜವಾಬ್ದಾರಿಯನ್ನು ಮನದಟ್ಟುಪಡಿಸಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಗುರುವಾರ ಪತ್ರ ಬರೆದಿದ್ದಾರೆ.
ಪತ್ರದ ಸಾರ ನೋಡಿದರೆ ಯಡಿಯೂರಪ್ಪ ಅವರು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೇ ಉಳಿದು ತಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗಿಸುವ ಇಚ್ಛೆಯಿದ್ದು, ತಾವು ಕೇಂದ್ರದಲ್ಲಿ ಸಚಿವ ಸ್ಥಾನವನ್ನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದಂತಿದೆ.
ಪತ್ರದ ಸಾರ ಹೀಗಿದೆ:

ದಿಲ್ಲಿಯ ಗುಜರಾತ್ ಭವನದಲ್ಲಿ ನಾನು ಕರ್ನಾಟಕದ ಕೆಲ ನಾಯಕರ ಜತೆಗೂಡಿ ನಿಮ್ಮನ್ನು ಮೇ 18ರಂದು ನಿಮ್ಮನ್ನು ಭೇಟಿಯಾಗಿದ್ದೆ. ಆಗ ನೀವು 'ದೇಶವು ತಮ್ಮ ಮೇಲೆ ಅಪಾರ ಭರವಸೆ ನಿರೀಕ್ಷೆಗಳನ್ನು ಹೊಂದಿದೆ. ಅದನ್ನು ಪೂರೈಸಬೇಕಾದ ಜರೂರತ್ತು ಬಹಳಷ್ಟಿದೆ. ಇದು ಪಕ್ಷದ ಜವಾಬ್ದಾರಿಯೂ ಹೌದು.
ಹಾಗಾಗಿ ಪಕ್ಷದ ಕೆಲ ನಿಷ್ಠಾವಂತ ನಾಯಕರು ಮುಂದೆ ಬಂದು ಜನತೆಯ ಒಳಿತಿಗೆ ಮತ್ತು ಪಕ್ಷವನ್ನು ಕಟ್ಟಿಬೆಳೆಸಲು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸ ಮತದಾರರು, ಯುವಜನತೆ, ಪರಿಶಿಷ್ಟ ಜಾತಿ/ ಪಂಗಡ, ಹಿಂದುಳಿದವಬರು ಮುಂತಾದ ಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ ಎಂದು ಸೂಕ್ಷ್ಮವಾಗಿ ನೀವು ಹೇಳಿದ್ದಿರಿ. ಮುಂದೆ ಮೇ 20ರಂದು ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿಯೂ ಎನ್ಡಿಎ ಸಂಸದೀಯ ಸಭೆಯನ್ನುದ್ದೇಶಿಸಿ ನೀವು ಇದೇ ಆಶಯವನ್ನು ವ್ಯಕ್ತಪಡಿಸಿದ್ದಿರಿ.

ಇದೀಗ ನಾನು ನನ್ನ ಜವಾಬ್ದಾರಿಯನ್ನು ಅರಿತು ನಿಮ್ಮ ಮಾತಿಗೆ ಗೌರವ ಕೊಡುತ್ತಾ ಸ್ವಯಂಪ್ರೇರಣೆಯಿಂದ ಮತ್ತು ಮನಃಪೂರ್ವಕವಾಗಿ ಕರ್ನಾಟಕ ರಾಜ್ಯದಲ್ಲಿದ್ದುಕೊಂಡು ನೀವು ಹೇಳಿದಂತೆ ಪಕ್ಷವನ್ನು ಕಟ್ಟಿ ಬೆಳೆಸುವ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ನಿಮಗೆ ಆಶ್ವಾಸನೆ ನೀಡುತ್ತೇನೆ.
ಮತ್ತೊಮ್ಮೆ ನೀವು ಸಾಧಿಸಿರುವ ಅಭೂತಪೂರ್ವ ಯಶಸ್ಸಿಗೆ ನಾನು ಅಭಿನಂದಿಸುತ್ತೇನೆ. ಮತ್ತು ಇನ್ನೂ ಅನೇಕ ವರ್ಷಗಳ ಕಾಲ ನೀವು ಪ್ರಧಾನಿಯಾಗಿ ದೇಶ ಸೇವೆಯನ್ನು ಸಲ್ಲಿಸಬೇಕು ಎಂಬುದು ನನ್ನ ಒತ್ತಾಸೆಯಾಗಿದೆ.












Click it and Unblock the Notifications