ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಸಚಿನ್ ಯಾಕಾಗಬಾರದು?
ಶಿವಮೊಗ್ಗ, ನ. 22 : ಭಾರತೀಯ ಜನತಾ ಪಕ್ಷದ ಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಅಘೋಷಿತ (ಸಂಭಾವ್ಯ) ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಇಬ್ಬರಲ್ಲಿ ಯಾರು ಪ್ರಧಾನಿ ಹುದ್ದೆಗೆ ಸಮರ್ಥರು ಎಂಬ ಕುರಿತು ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಮೋದಿಯನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಣೆ ಮಾಡುವ ಮೊದಲು ಬಿಜೆಪಿ ಪಕ್ಷದಲ್ಲಿ ಭಾರೀ ಭಿನ್ನಮತ ಭುಗಿಲೆದ್ದಿತ್ತು. ನಂತರ ಅದನ್ನೆಲ್ಲ ಜಾಣತನದಿಂದ ನಿವಾರಿಸಿಕೊಂಡ ಮೇಲೆ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯೆಂದು ವಿಧ್ಯುಕ್ತವಾಗಿ ಘೋಷಿಸಲಾಯಿತು. ಆದರೆ, ಕಾಂಗ್ರೆಸ್ ಅದೇಕೋ ರಾಹುಲ್ ಅವರನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಲು ಹಿಂಜರಿಯುತ್ತಿದೆ.
ಆಂತರಿಕ ಕಾರಣಗಳು ಅದೇನೇ ಇರಲಿ, ಪ್ರಧಾನಿ ಅಭ್ಯರ್ಥಿಯಾಗಿ ಹೆಚ್ಚು ಅನುಭವ ಇರದ ರಾಹುಲ್ ಗಾಂಧಿ ಅವರು ಸಾಕಷ್ಟು ಅನುಭವ ಹೊಂದಿರುವ ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾಗಿ ನಿಲ್ಲುತ್ತಾರಾ? 2014ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಕೊಡುತ್ತಾರಾ ಎಂಬ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ.

ಈ ನಡುವೆ, ಒನ್ಇಂಡಿಯಾಕ್ಕೆ ಬಂದ ಒಂದು ವಿಶಿಷ್ಟ ಪತ್ರ ಈ ಚರ್ಚೆಗೆ ಮತ್ತು ಚಿಂತನೆಗೆ ಗ್ರಾಸ(ಆಹಾರ)ವನ್ನು ಒದಗಿಸಿದೆ. ಅದೇನೆಂದರೆ, ಪ್ರತಿಷ್ಠಿತ 'ಭಾರತ ರತ್ನ' ಅತ್ಯುನ್ನತ ಪ್ರಶಸ್ತಿಗೆ ಆಯ್ಕೆಯಾಗಿರುವ ನಿವೃತ್ತ ಕ್ರಿಕೆಟ್ ಪಟು ಸಚಿನ್ ರಮೇಶ್ ತೆಂಡೂಲ್ಕರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬುದು. [ಸಚಿನ್ ವಿದಾಯದ ಭಾಷಣ]
ಕಾಂಗ್ರೆಸ್ ಪಕ್ಷವನ್ನು ಸೇರಿ ಆ ಪಕ್ಷಕ್ಕೆ ಸಾಕಷ್ಟು ತೂಕವನ್ನು ತಂದಿರುವ ಮತ್ತು ಯಾವುದೇ ಕಳಂಕವನ್ನು ಹೊಂದಿರದ, ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿರದ 'ಸ್ವಚ್ಛ' ಚಾರಿತ್ರ್ಯದ ವ್ಯಕ್ತಿಯಾಗಿರುವ ಸಚಿನ್ ತೆಂಡೂಲ್ಕರ್ ಅವರು ಏಕೆ ಪ್ರಧಾನಿ ಅಭ್ಯರ್ಥಿಯಾಗಬಾರದು ಎಂಬುದು ಶಿವಮೊಗ್ಗದ ಸಮಾಜ ಸೇವಾಕರ್ತ ಸೈಯದ್ ಮಝರ್ ಅವರ ಪ್ರಶ್ನೆ. [ರಾಹುಲ್ ಒರಟ]
ಸಚಿನ್ ಅವರು ಭಾರತದಲ್ಲಿ ಸಾಕಷ್ಟು ಪ್ರಭಾವಿಯಾಗಿದ್ದಾರೆ, ಮೇಲಾಗಿ ರಾಜಕೀಯಕ್ಕೆ ಧುಮುಕಿದ್ದಾರೆ, ಅವರು ಭ್ರಷ್ಟರಲ್ಲ. ನರೇಂದ್ರ ಮೋದಿ ವಿರುದ್ಧ ಅವರು ಸ್ಪರ್ಧಿಸಿದರೆ ಮೋದಿಯನ್ನು ಚುನಾವಣೆಯಲ್ಲಿ ಮಣ್ಣು ಮುಕ್ಕಿಸುವುದು ಖಂಡಿತ ಎಂಬುದು ಸೈಯದ್ ಅವರ ಖಡಾಖಂಡಿತ ಅಭಿಪ್ರಾಯ. ನೂರಕ್ಕೆ ನೂರರಷ್ಟು ಅವರು ಮೋದಿಯನ್ನು ಸೋಲಿಸಿಯೇ ಸೋಲಿಸುತ್ತಾರೆ ಅಂತಾರೆ ಸೈಯದ್.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಚಿನ್ ಅವರನ್ನು ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಿ ಅಖಾಡಕ್ಕಿಳಿದರೆ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸುವ ಸೈಯದ್, ಈ ಕುರಿತು ಕಾಂಗ್ರೆಸ್ ಪಕ್ಷ ಚಿಂತನೆ ನಡೆಸಬೇಕು. ಒಂದು ಕೈ ನೋಡೇಬಿಡೋಣವೆಂದು ಸಚಿನ್ ಅವರನ್ನು ಯಾಕೆ ಪ್ರಧಾನಿ ಅಭ್ಯರ್ಥಿ ಮಾಡಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ. ಓದುಗರೆ, ಏನು ಹೇಳುತ್ತೀರಿ ಇಂಥ ಅಭಿಪ್ರಾಯಕ್ಕೆ?












Click it and Unblock the Notifications