ರೈತರಿಗೆ ಸಿಹಿಸುದ್ದಿ: ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮುಂದುವರಿಕೆ
ಶಿವಮೊಗ್ಗ, ಮೇ 08: ಭದ್ರಾ ಡ್ಯಾಂ ಅಚ್ಚುಕಟ್ಟು ಭಾಗದ ರೈತರಿಗೆ ಸಿಹಿಸುದ್ದಿಯೊಂದಿದೆ. ರೈತರ ಬೇಡಿಕೆಯಂತೆ ಭದ್ರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಯಲ್ಲಿ ನೀರು ಹರಿಸುವುದನ್ನು ಮುಂದುವರೆಸಲಾಗುವುದು ಎಂದು ಮಾಹಿತಿ ನೀಡಲಾಗಿದೆ. ಜನರ ಹಿತದೃಷ್ಟಿಯಿಂದ ಕಾಲುವೆ ಪಾತ್ರಗಳಲ್ಲಿ ಜನರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆ ಮಾಡುವುದನ್ನು ನಿಷೇಧಿಸಲಾಗಿದ್ದು, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಆರ್. ರವಿಚಂದ್ರ ಸದಸ್ಯ ಕಾರ್ಯದರ್ಶಿಗಳು, ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳು ಕಟಾವಿಗೆ ಬರಲು ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಾಗಿರುವುದೆ. ರೈತರ ಬೇಡಿಕೆಯಂತೆ ಭದ್ರಾ ಜಲಾಶಯದ ಎಡದಂಡೆ ನಾಲೆಯಲ್ಲಿ ಮೇ 10ರ ತನಕ ಮತ್ತು ಬಲದಂಡೆ ನಾಲೆಯಲ್ಲಿ ಮೇ 18ರ ತನಕ ನೀರು ಹರಿಸುವುದನ್ನು ಮುಂದುವರೆಸಲಾಗುವುದು ಎಂದು ಹೇಳಿದ್ದಾರೆ.

ರೈತರು ಸಹಕಾರ ನೀಡಬೇಕು. 2024-25ನೇ ಸಾಲಿನ ಬೇಸಿಗೆ ಬೆಳೆಗಳಿಗೆ ನಿಗದಿತ ವಿತರಣಾ ನಾಲೆಗಳಲ್ಲಿ ಕಾರ್ಯಪಾಲಕ ಇಂಜಿನಿಯರ್‌ಗಳು ನಿರ್ಧರಿಸಿರುವ ಆಂತರಿಕ ಸರದಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಹಾಗೂ ಕಾಲುವೆ ಪಾತ್ರಗಳಲ್ಲಿ ಜನರು, ದನಕರುಗಳ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ರೈತರಿಗೆ ನೀರು ತಲುಪಲು ಸಹಕಾರಿ: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನಾಲೆಗಳಲ್ಲಿ ಹೂಳು ತೆಗೆಸುವಂತೆ ಸಹ ಮನವಿ ಮಾಡಲಾಗಿದೆ. ಭದ್ರಾ ಜಲಾಶಯದಿಂದ ಕಾಲುವೆ ಹಾಗೂ ನಾಲೆಗಳಿಗೆ ನೀರು ಹರಿಸುವುವಾಗ ನಾಲೆ ಹಾಗೂ ಕಾಲುವೆಗಳಲ್ಲಿ ಸಾಕಷ್ಟು ಹೂಳು ತುಂಬಿಕೊಂಡು ಅಚ್ಚುಕಟ್ಟು ಭಾಗದ ಕೊನೆಯ ಭಾಗದ ರೈತರಿಗೆ ನೀರು ತಲುಪಲು ತೊಂದರೆ ಆಗುತ್ತದೆ.
ಆದ್ದರಿಂದ ಸೂಕ್ತ ರೀತಿಯಲ್ಲಿ ಬೆಳೆ ಬೆಳೆಯಲು ಸಮಸ್ಯೆಯಾಗುತ್ತದೆ. ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿ ಕೈಗೆತ್ತಿಕೊಂಡು ನಾಲೆ ಹಾಗೂ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಸುವಂತೆಯೂ ಮನವಿ ಮಾಡಲಾಗುತ್ತಿದೆ.
ಭದ್ರಾ ಜಲಾಶಯದ ಕಾಲುವೆ ಮೂಲಕ ಬಿಡುವ ನೀರು ಕೊನೆ ಭಾಗದ ಅಚ್ಚುಕಟ್ಟು ದಾರರಿಗೂ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ. ಎಂ. ಭರವಸೆ ನೀಡಿದ್ದರು. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ಅವರು ಸಭೆಯನ್ನು ನಡೆಸಿದ್ದಾರೆ.
ಕಾಲುವೆಗಳಿಗೆ ಅನಧಿಕೃತವಾಗಿ ಪಂಪ್ ಅಳವಡಿಸಿ ನೀರೆತ್ತಲಾಗುತ್ತಿದೆ, ಇದರಿಂದ ಕೊನೆ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಅನಧಿಕೃತ ಪಂಪ್‌ಗಳನ್ನು ತೆರವು ಮಾಡಿ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು.
ಬೇಸಿಗೆಯಾಗಿರುವುದರಿಂದ ಗೇಟ್‌ಗಳಲ್ಲಿ ನೀರಿನ ಸೋರಿಕೆ ಮತ್ತು ಕಾಲುವೆ ದುರಸ್ಥಿಗೆ ಅಗತ್ಯ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದರು. ಕಾಲುವೆಗಳ ನೀರು ನಿರ್ವಹಣೆಗೆ ಸಿಬ್ಬಂದಿಗಳ ಕೊರತೆ ಇದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಅಧೀಕ್ಷಕ ಇಂಜಿನಿಯರ್‌ಗೆ ಸೂಚನೆ ನೀಡಲಾಗಿತ್ತು.
ಹರಿಹರ ಶಾಸಕ ಬಿ. ಪಿ. ಹರೀಶ್, "ಜಲಾಶಯದ ದುರಸ್ಥಿ ಮಾಡಿಸಿ, ಭದ್ರಾ ಇಂಜಿನಿಯರ್‌ಗಳು ವೈಜ್ಞಾನಿಕ ತಂತ್ರಜ್ಞಾನ ಬಳಸಿ ನೀರು ಪೋಲಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಭದ್ರಾ ನಾಲೆ ಅಚ್ಚುಕಟ್ಟು ಪ್ರದೇಶದ ಬಹುತೇಕ ಭಾಗದಲ್ಲಿ ನೀರಾವರಿ ಕಟ್ಟಡ ಹಾಗೂ ನಾಲೆಯ ಗೇಟ್‍ಗಳು ಹಾಳಾಗಿವೆ. ಆದ್ದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುತ್ತಿದೆ" ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರು.
ಭದ್ರಾ ಜಲಾಶಯದಿಂದ ನೀರು ಹರಿಸಿ 50 ದಿನ ಕಳೆದರೂ ಸಹ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶಗಳಾದ ಮಲೇಬೆನ್ನೂರು, ಬಸವಪಟ್ಟಣದ ರೈತರ ಜಮೀನುಗಳಿಗೆ ನೀರು ಇನ್ನೂ ತಲುಪಿಲ್ಲ. ಭದ್ರಾ ಜಲಾಶಯದ ನೀರು ಜಿಲ್ಲೆಯ ಜೀವನಾಡಿಯಾಗಿದ್ದು, ಈ ನೀರು ನಂಬಿ ಲಕ್ಷಾಂತರ ಎಕರೆ ಭೂಮಿಯಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ. ಆದ್ದರಿಂದ ನೀರು ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದರು.












Click it and Unblock the Notifications